ಐಎಂಎ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆಯಾಗಲಿದೆ-ಶಾಸಕ ಎಸ್.ಆರ್.ವಿಶ್ವನಾಥ್

ಬೆಂಗಳೂರು, ಜು.25- ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐಎಂಎ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.

ಯಡಿಯೂರಪ್ಪನವರ ನಿವಾಸ ದವಳಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಎಂಎ ಹಗರಣದಲ್ಲಿ ಎಷ್ಟೇ ಪ್ರಭಾವಿಗಳು ಭಾಗಿಯಾಗಿದ್ದರೂ ಅವರನ್ನು ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ.ಬಡವರ ಹಣ ತಿಂದವರು ಯಾರೇ ಆಗಲಿ ಕಾನೂನಿನ ಪ್ರಕಾರ ಅವರಿಗೆ ಶಿಕ್ಷೆಯಾಗಬೇಕಾಗಿದೆ ಎಂದು ತಿಳಿಸಿದರು.

ಐಎಂಎ ಹಗರಣದಲ್ಲಿ ಅನೇಕರು ಶಾಮೀಲಾಗಿದ್ದಾರೆ ಎಂಬ ಅನುಮಾನಗಳು ಪ್ರಾರಂಭದಿಂದಲೂ ವ್ಯಕ್ತವಾಗುತ್ತಿದೆ.ಎಷ್ಟೇ ಪ್ರಭಾವಿಗಳಿರಲಿ ಯಾರೊಬ್ಬರನ್ನು ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ. ದುಡ್ಡು ತಿಂದವರನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿಷ್ಪಕ್ಷಪಾತ ತನಿಖೆ ನಡೆಸಲಾಗವುದು.ಯಾರೇ ಹಣ ಕಳೆದುಕೊಂಡಿದ್ದರೂ ಅವರಿಗೆ ನ್ಯಾಯ ಒದಗಿಸುತ್ತೇವೆ ಎಂದರು.

ಸರ್ಕಾರ ರಚನೆ ಮಾಡುವ ವಿಳಂಬವಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, ವರಿಷ್ಟರ ಮಾರ್ಗಸೂಚಿಯಂತೆ ನಡೆಯುತ್ತದೆ.ಕೆಲವು ಕಾನೂನಾತ್ಮಕ ಸಮಸ್ಯೆಗಳು ಎದುರಾಗಿರುವುದರಿಂದ ಒಂದೆರಡು ದಿನ ವಿಳಂಬವಾಗಿರಬಹುದು.ಸಂಜೆಯೊಳಗೆ ವರಿಷ್ಠರಿಂದ ಶುಭ ಸುದ್ದಿ ಬರಲಿದೆ ಎಂದು ಹೇಳಿದರು.
ರಾಜೀನಾಮೆ ನೀಡಿರುವವರ ವಿರುದ್ಧ ಸ್ಪೀಕರ್ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆಯೂ ಕೇಂದ್ರದ ವರಿಷ್ಠರು ಚರ್ಚೆ ನಡೆಸಲಿದ್ದಾರೆ. ಮುಂದಿನ ನಾಲ್ಕು ವರ್ಷಗಳ ಕಾಲ ನಮಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎಂಬ ಕಾರಣಕ್ಕಾಗಿ ವರಿಷ್ಠರು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿರ ಬಹುದು.ಆದರೆ, ಇಂದು ಸಂಜೆಯೊಳಗೆ ನಮ್ಮೆಲ್ಲಾ ಕಾರ್ಯಕರ್ತರಿಗೂ ಶುಭ ಸುದ್ದಿ ಬರಲಿದೆ ಎಂದು ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ