ಸರ್ಕಾರ ರಚನೆ ಮಾಡಲು ಆತುರವಿಲ್ಲ

ಬೆಂಗಳೂರು, ಜು.24-ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥವಾಗುವವರೆಗೂ ಸರ್ಕಾರ ರಚನೆಗೆ ಕೈ ಹಾಕದಂತೆ ಕೇಂದ್ರ ಬಿಜೆಪಿ ವರಿಷ್ಠರು ರಾಜ್ಯ ಘಟಕದ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಸರ್ಕಾರ ರಚನೆ ಮಾಡಲು ಆತುರವಿಲ್ಲ. ಮೊದಲು ರಾಜೀನಾಮೆ ನೀಡಿರುವ ಶಾಸಕರ ಪ್ರಕರಣದ ಬಗ್ಗೆ ವಿಧಾನಸಭೆ ಸ್ಪೀಕರ್ ರಮೇಶ್‍ಕುಮಾರ್ ಯಾವ ನಿರ್ಧಾರ ಕೈಗೊಳ್ಳುತ್ತಾರೋ ನೋಡೋಣ. ಅಲ್ಲಿಯವರೆಗೂ ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ತೆರಳಿ ಹಕ್ಕು ಮಂಡಿಸಬಾರದೆಂದು ಹೈಕಮಾಂಡ್ ಸೂಚಿಸಿದೆ.

ಈ ಬೆಳವಣಿಗೆಯಿಂದಾಗಿ ಸರ್ಕಾರ ರಚನೆ ಮಾಡುವ ಬಿಜೆಪಿಯ ಆತುರಕ್ಕೆ ಬ್ರೇಕ್ ಬಿದ್ದಿದ್ದು, ಇನ್ನೂ 2-3 ದಿನಗಳವರೆಗೆ ಕಾದು ನೋಡಿ ನಂತರವೇ ರಾಜ್ಯಪಾಲರ ಬಳಿ ಹಕ್ಕು ಮಂಡಿಸಲಿದೆ.

ಎಲ್ಲವೂ ನಿರೀಕ್ಷೆಯಂತೆ ನಡೆದಿದ್ದರೆ, ಗುರುವಾರ ಯಡಿಯೂರಪ್ಪ ಒಬ್ಬರೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಇದಕ್ಕಾಗಿ ಬುಧವಾರ ಪಕ್ಷದ ಕಚೇರಿಯಲ್ಲಿ ಶಾಸಕಾಂಗ ಸಭೆಯನ್ನು ಕರೆಯಲು ತೀರ್ಮಾನಿಸಲಾಗಿತ್ತು.ಆದರೆ ವರಿಷ್ಠರು ಈ ಸಂಬಂಧ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಕಟ್ಟಪ್ಪಣೆ ವಿಧಿಸದಿದ್ದರಿಂದ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ.

ಹೈಕಮಾಂಡ್ ಈ ನಿರ್ಧಾರವನ್ನು ತೆಗೆದುಕೊಳ್ಳುವ ತೀರ್ಮಾನದ ಹಿಂದೆ ಸಾಕಷ್ಟು ಲೆಕ್ಕಾಚಾರಗಳು ಅಡಗಿವೆ. ಕಾಂಗ್ರೆಸ್-ಜೆಡಿಎಸ್‍ನಿಂದ ರಾಜೀನಾಮೆ ನೀಡಿರುವ 15 ಮಂದಿ ಶಾಸಕರನ್ನು ಸದಸ್ಯತ್ವದಿಂದಲೇ ಅನರ್ಹಗೊಳಿಸುವಂತೆ ಉಭಯ ಪಕ್ಷಗಳ ಶಾಸಕಾಂಗ ಪಕ್ಷದ ನಾಯಕರು ಸ್ಪೀಕರ್‍ಗೆ ದೂರು ನೀಡಿದ್ದಾರೆ.

ಅಲ್ಲದೆ ಇದೇ ವಿಚಾರವು ಸುಪ್ರೀಂಕೋರ್ಟ್‍ನಲ್ಲಿ ವಿಚಾರಣಾ ಹಂತದಲ್ಲಿರುವುದರಿಂದ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಒಂದು ವೇಳೆ ವಿಧಾನಸಭೆ ಸ್ಪೀಕರ್ ರಾಜೀನಾಮೆ ನೀಡಿರುವ ಶಾಸಕರು ವಿಪ್ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಷೆಡ್ಯೂಲ್ 10ರ ಪ್ರಕಾರ ಸದಸ್ಯತ್ವದಿಂದ ಅನರ್ಹಗೊಳಿಸಬಹುದು.ಇಲ್ಲವೆ, ರಾಜೀನಾಮೆ ನೀಡಿರುವ ಪತ್ರಗಳು ಕಾನೂನು ಬದ್ಧವಾಗಿದೆ ಎಂದು ಅಂಗೀಕರಿಸಬಹುದು.
ಅನರ್ಹಗೊಂಡರೆ ಸ್ಪೀಕರ್ ನಿರ್ಧಾರವನ್ನು ಹೈಕೋರ್ಟ್ ಹಂತದಿಂದ ಹಿಡಿದು ಸುಪ್ರೀಂಕೋರ್ಟ್‍ನಲ್ಲಿ ಕಾನೂನು ಹೋರಾಟ ನಡೆಸಬಹುದು ಎಂಬುದು ಭಿನ್ನಮತೀಯ ಶಾಸಕರ ಲೆಕ್ಕಾಚಾರ.

ಇದರ ನಡುವೆ ಯಡಿಯೂರಪ್ಪ ನವರ ಆತುರಕ್ಕೆ ಹೈಕಮಾಂಡ್ ಲಗಾಮು ಹಾಕಿದೆ.ರಾಜೀನಾಮೆ ನೀಡಿರುವ ಶಾಸಕರ ಪತ್ರವನ್ನು ಸ್ಪೀಕರ್ ಈವರೆಗೂ ಅಂಗೀಕಾರ ಮಾಡಿಲ್ಲ.

ರಾಜ್ಯಪಾಲರು ತಕ್ಷಣವೇ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚನೆ ಕೊಟ್ಟರೆ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ. ವಿಧಾನಸಭೆಯ ಒಟ್ಟು 224ಸದಸ್ಯರ ಬಲದಲ್ಲಿ 15 ಶಾಸಕರು ರಾಜೀನಾಮೆ ಅಂಗೀಕಾರ ಇಲ್ಲವೆ ಅನರ್ಹಗೊಂಡರೆ ಆಗ ಸದನದ ಬಲ 209ಕ್ಕೆ ಇಳಿಕೆಯಾಗುತ್ತದೆ. ಬಿಜೆಪಿಗೆ ಬಹುಮತ ಸಾಬೀತುಪಡಿಸಲು 105 ಸದಸ್ಯರ ಬೆಂಬಲ ಬೇಕು.

ಸದ್ಯ ಬಿಜೆಪಿಯೇ 105 ಸದಸ್ಯರನ್ನು ಹೊಂದಿದ್ದು, ಜೊತೆಗೆ ಇಬ್ಬರು ಪಕ್ಷೇತರ ಶಾಸಕರಾದ ಎಚ್.ನಾಗೇಶ್ ಮತ್ತು ಆರ್.ಶಂಕರ್ ಕೂಡ ಬೆಂಬಲ ಸೂಚಿಸಿದ್ದಾರೆ. ಬಹುಮತ ಸಾಬೀತುಪಡಿಸಲು ಬಿಜೆಪಿಗೆ ಯಾವುದೇ ಆತಂಕವಿಲ್ಲವಾದರೂ ಪಕ್ಷದೊಳಗಿನ ಒಳ ಹೊಡೆತ ಏನಾಗಬಹುದೆಂಬ ಆತಂಕ ಕಾಡುತ್ತದೆ. ಹೀಗಾಗಿ ಆತುರಕ್ಕೆ ಬೀಳದೆ ಕೇಂದ್ರ ವರಿಷ್ಠರು ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ