ವಿಶ್ವಾಸಮತ ಯಾಚನೆ ನಾಳೆಗೂ ಮುಂದುವರೆಯುವ ಸಾಧ್ಯತೆ?

ಬೆಂಗಳೂರು, ಜು.22-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ಮಂಡಿಸಿರುವ ವಿಶ್ವಾಸಮತಯಾಚನಾ ನಿರ್ಣಯದ ಮೇಲಿನ ಚರ್ಚೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಆಡಳಿತ ಪಕ್ಷದ ಹೆಚ್ಚು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿದ್ದಾರೆ. ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳ್ಳುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದ್ದು, ನಾಳೆಗೂ ಮುಂದುವರೆಯುವ ಸಾಧ್ಯತೆಗಳ ಬಗ್ಗೆ ಚರ್ಚೆಯಾಗುತ್ತಿದೆ.

ಸುಪ್ರೀಂಕೋರ್ಟ್‍ನಲ್ಲಿ ರಾಜೀನಾಮೆ ನೀಡಿರುವ ಶಾಸಕರಿಗೆ ವಿಪ್ ನೀಡುವ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಬರುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಯವರೆಗೂ ಕಾದು ನೋಡಲು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ತೀರ್ಮಾನಿಸಿವೆ.

ಹೀಗಾಗಿ ವಿಶ್ವಾಸಮತಯಾಚನೆ ಮೇಲಿನ ನಿರ್ಣಯವನ್ನು ನಾಳೆಯವರೆಗೂ ಮುಂದುವರೆಸುವ ಬಗ್ಗೆ ಗಂಭೀರ ಚಿಂತನೆ ನಡೆಸಿವೆ. ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಹೆಚ್ಚು ಶಾಸಕರು ಚರ್ಚೆಯಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ಸಮಯಾವಕಾಶವನ್ನು ಚರ್ಚೆಗೆ ಬಳಸಿಕೊಳ್ಳುವ ಉದ್ದೇಶವನ್ನು ಹೊಂದಿವೆ ಎಂದು ಜೆಡಿಎಸ್ ಪಕ್ಷದ ಮೂಲಗಳು ತಿಳಿಸಿವೆ.

ನಿರ್ಣಯ ಮಂಡಿಸಿರುವ ಎಚ್.ಡಿ.ಕುಮಾರಸ್ವಾಮಿ, ಪೂರ್ವಭಾವಿ ಚರ್ಚೆಯಷ್ಟೇ ಮಾಡಿದ್ದು, ಎಲ್ಲಾ ಶಾಸಕರ ಚರ್ಚೆ ನಂತರ ತಮ್ಮ ಚರ್ಚೆ ಮುಂದುವರೆಸುವುದಾಗಿ ಹೇಳಿದ್ದಾರೆ.ಇಂದು ಬಹುತೇಕ ಶಾಸಕರು ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಅದಾದ ನಂತರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಚರ್ಚೆ ಮುಂದುವರೆಸಲಿದ್ದಾರೆ.ಈಗಾಗಲೇ ಸಭಾಧ್ಯಕ್ಷರು ಹೇಳಿರುವಂತೆ ಚರ್ಚೆ ಪೂರ್ಣಗೊಂಡ ಬಳಿಕ ವಿಶ್ವಾಸ ಮತದ ನಿರ್ಣಯವನ್ನು ಮತಕ್ಕೆ ಹಾಕಲಾಗುತ್ತದೆ. ಹೀಗಾಗಿ ಸಾಧ್ಯವಾದ ಮಟ್ಟಿಗೆ ನಾಳೆಯವರೆಗೂ ವಿಶ್ವಾಸಮತಯಾಚನೆಯ ನಿರ್ಣಯದ ಮೇಲಿನ ಚರ್ಚೆಯನ್ನು ಮುಂದುವರೆಸುವ ಬಗ್ಗೆಯೂ ಉಭಯ ಪಕ್ಷಗಳ ನಾಯಕರು ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ