ಬೆಂಗಳೂರು, ಜು.18-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ವಿಶ್ವಾಸ ಮತ ಯಾಚಿಸುವ ನಿರ್ಣಯ ಮಂಡಿಸಿದ್ದು, ಚರ್ಚೆ ಪ್ರಾರಂಭವಾಗಿದೆ.
ಮುಖ್ಯಮಂತ್ರಿಯವರ ಪಾಲಿಗೆ ಈ ಅಧಿವೇಶನ ಅಗ್ನಿಪರೀಕ್ಷೆಯಾಗಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅಳಿವು-ಉಳಿವು ನಿರ್ಧಾರವಾಗುವ ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ಚರ್ಚೆ ಮುಂದುವರೆದಿದೆ.
ಆಡಳಿತ ಮತ್ತು ಪ್ರತಿಪಕ್ಷಗಳು ಶಾಸಕರ ಬಲಾಬಲ ಪ್ರದರ್ಶನಕ್ಕೂ ಇದು ವೇದಿಕೆಯಾಗಿದೆ. ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸಿ ಸರ್ಕಾರವನ್ನು ಉಳಿಸಿಕೊಳ್ಳುವ ನಿರಂತರ ಪ್ರಯತ್ನವನ್ನು ಉಭಯ ಪಕ್ಷಗಳ ನಾಯಕರು ಮುಂದುವರೆಸಿದ್ದಾರೆ.
ರಾಜೀನಾಮೆ ನೀಡಿರುವ ಜೆಡಿಎಸ್‍ನ 3, ಕಾಂಗ್ರೆಸ್‍ನ 13 ಮಂದಿ ಸೇರಿದಂತೆ 16 ಶಾಸಕರು ಸದನದಲ್ಲಿ ಗೈರು ಹಾಜರಾಗಿದ್ದರು. ಬಿಎಸ್‍ಪಿಯ ಏಕೈಕ ಸದಸ್ಯ ಎನ್.ಮಹೇಶ್ ಅವರು ಕೂಡ ಸದನ ಪ್ರಾರಂಭವಾದ ಸಂದರ್ಭದಲ್ಲಿ ಹಾಜರಿರಲಿಲ್ಲ. ನಾಮನಿರ್ದೇಶಿತ ಸದಸ್ಯರೂ ಸೇರಿದಂತೆ 225 ಸದಸ್ಯ ಬಲ ಹೊಂದಿರುವ ವಿಧಾನಸಭೆಯಲ್ಲಿ ರಾಜೀನಾಮೆ ನೀಡಿರುವ ಆಡಳಿತ ಪಕ್ಷಗಳ ಶಾಸಕರನ್ನು ಹೊರತುಪಡಿಸಿದರೆ ಕಾಂಗ್ರೆಸ್ 66, ಜೆಡಿಎಸ್ 34, ಬಿಜೆಪಿ 105 ಶಾಸಕರ ಬಲವನ್ನು ಹೊಂದಿದೆ. ಇಬ್ಬರು ಪಕ್ಷೇತರ ಶಾಸಕರಿದ್ದು, ಬಿಎಸ್‍ಪಿಯ ಒಬ್ಬ ಶಾಸಕರಿದ್ದಾರೆ.
ವಿಧಾನಸಭಾಧ್ಯಕ್ಷರು ಸೇರಿದಂತೆ ಕಾಂಗ್ರೆಸ್‍ನ ಶಾಸಕರ ಬಲ 67ಕ್ಕೇ ಏರಲಿದೆ. ಹೀಗಾಗಿ ಶಾಸಕರ ಸಂಖ್ಯಾಬಲದ ಲೆಕ್ಕಾಚಾರ ಶುರುವಾಗಿದ್ದು, ಕೊನೆ ಘಳಿಗೆಯಲ್ಲಿ ಯಾರಿಗೆ ಜಯ ಸಿಗಲಿದೆ ಎಂಬುದು ಭಾರೀ ಕುತೂಹಲ ಕೆರಳಿಸಿದೆ.
ಬಹುಮತ ಸಾಬೀತುಪಡಿಸಲು ಕಾಂಗ್ರೆಸ್-ಜೆಡಿಎಸ್ ಹರಸಾಹಸವನ್ನು ಪಡುತ್ತಿವೆ. ವಿಶ್ವಾಸಮತದ ನಿರ್ಣಯದಲ್ಲಿ ಬಿಜೆಪಿ ಕೂಡ ಉತ್ಸಾಹದಲ್ಲಿ ಈ ನಡುವೆ ಕುಮಾರಸ್ವಾಮಿ ಮಂಡಿಸಿರುವ ವಿಶ್ವಾಸಮತಯಾಚನೆ ನಿರ್ಣಯದ ಚರ್ಚೆ ವಿಧಾನಸಭೆಯಲ್ಲಿ ಮುಂದುವರೆದಿದ್ದು, ಅಂತಿಮಘಟ್ಟ ಭಾರೀ ಕುತೂಹಲ ಕೆರಳಿಸಿದೆ.