ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಸಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜು.18- ರಾಜ್ಯ ಹಾಗೂ ದೇಶದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಮ್ಮಿಶ್ರ ಸರ್ಕಾರದ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಗಂಭೀರ ಚರ್ಚೆ ನಡೆಸಿದರು.

ಸರ್ಕಾರಕ್ಕೆ ಹಾಗೂ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ವಿಶ್ವಾಸಮತ ಅಗ್ನಿಪರೀಕ್ಷೆಯಾಗಿದ್ದು. ವಿಧಾನಸಭೆಯಲ್ಲಿಂದು ವಿಶ್ವಾಸಮತ ಯಾಚನೆಯ ಪ್ರಸ್ತಾಪವನ್ನು ಮಂಡಿಸಿ ಅವರು, ಈ ಸನ್ನಿವೇಶ ಸೃಷ್ಟಿಯಾದ ಪ್ರಕ್ರಿಯೆಗಳ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟರು.

ಇಂದು ಬೆಳಗ್ಗೆ ವಿಧಾನಸಭೆ ಸಮಾವೇಶಗೊಂಡಾಗ ಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ಅವರು ವಿಶ್ವಾಸ ಮತಯಾಚನೆಯ ನಿರ್ಣಯ ಮಂಡಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅವಕಾಶ ನೀಡಿದರು.

ಆಗ ಮುಖ್ಯಮಂತ್ರಿಯವರು ಈ ಸದನವು ಎಚ್.ಡಿ.ಕುಮಾರಸ್ವಾಮಿ ಅವರ ಸಚಿವ ಸಂಪುಟದಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ ಎಂಬ ನಿರ್ಣಯ ಮಂಡಿಸಿದರು.

ಆಗ ಸಭಾಧ್ಯಕ್ಷರು ಮುಖ್ಯಮಂತ್ರಿಗಳು ನಿರ್ಣಯ ಮಂಡಿಸಿದ್ದು, ಚರ್ಚೆ ಪ್ರಾರಂಭ ಎಂದು ಪ್ರಕಟಿಸಿದರು. ಆಗ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಕಳೆದ 9ನೇ ವಿಧಾನಸಭೆ 10ನೇ ವಿಧಾನಸಭೆ, 12ನೇ ವಿಧಾನಸಭೆ, 13ನೇ ವಿಧಾನಸಭೆಗಳ ಸಂದರ್ಭದಲ್ಲಿ ವಿಶ್ವಾಸ ಮತಯಾಚನೆ ಒಂದೊಂದೇ ದಿನದಲ್ಲಿ ಮುಗಿದಿದೆ ಎಂದರು.

ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು, ನೀವಿಬ್ಬರು ಒಪ್ಪಿದರೆ ( ಆಡಳಿತ-ಪ್ರತಿಪಕ್ಷ) 5 ನಿಮಿಷದಲ್ಲಿ ಮತಕ್ಕೆ ಹಾಕಲಾಗುವುದು ಎಂದರು.

ಮುಂದುವರೆದು ಇದೊಂದು ವಿಶೇಷ ಸಂದರ್ಭ. ಸದನದಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ ಎಂದು ಹೇಳಿದರು.

ಆಗ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಅವರು ಶಾಸಕರ ಸಂಖೆಗನುಗುಣವಾಗಿ ಸಮಯ ನಿಗದಿ ಮಾಡಿ ಎಂದು ಮನವಿ ಮಾಡಿದರು. ಇದಾದ ನಂತರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಾವು ಮಂಡಿಸಿದ ನಿರ್ಣಯ ಕುರಿತು ಚರ್ಚೆ ಪ್ರಾರಂಭಿಸಿದರು.

ಪ್ರತಿಪಕ್ಷದ ನಾಯಕರು ಅವಸರದಲ್ಲಿದ್ದಾರೆ. ವಿಶ್ವಾಸಮತಯಾಚನೆಯ ಅನಿವಾರ್ಯತೆಯ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ಮಾಡುವ ಅಗತ್ಯವಿದೆ. ಇದು ನನ್ನ ವಿಷಯವಷ್ಟೇ ಅಲ್ಲ. ತಮ್ಮ ಸ್ಥಾನದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿದವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳಿಂದ ರಾಜ್ಯದ ಜನರಲ್ಲಿ ಅಸಹ್ಯ ಮೂಡಿಸಿದೆ. ಸರ್ಕಾರವನ್ನು ನಿರಂತರವಾಗಿ ಅಸ್ಥಿರಗೊಳಿಸಲು ನಡೆಸಿದ ಪ್ರಯತ್ನವನ್ನು ನಾನಿಲ್ಲಿ ಪ್ರಸ್ತಾಪ ಮಾಡಬೇಕಿದೆ ಎಂದು ಹೇಳಿದರು.

ಕಳೆದ ಒಂದು ವರ್ಷದಿಂದ ಸರ್ಕಾರವನ್ನು ನಿರಂತರವಾಗಿ ಬೀಳಿಸಲು ಮಾಡಿರುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಎಳೆಎಳೆಯಾಗಿ ಬಿಡಿಸಿಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ