ಬೆಂಗಳೂರು: ವಿಶ್ವಾಸ ಮತ ಪ್ರಸ್ತಾಪದ ವೇಳೆ ಕ್ರಿಯಾಲೋಪ ಎತ್ತಿ ಮಾತನಾಡಿದ ಸಿದ್ದರಾಮಯ್ಯ, ಮಾತಿನ ಭರದಲ್ಲಿ ನಾನು ವಿಪಕ್ಷದ ನಾಯಕ ಎಂದರು. ಈ ವೇಳೆ ಇಡೀ ಸದನ ನಗೆ ಗಡಲಲ್ಲಿ ತೇಲಿ, ಬಿಜೆಪಿ ನಾಯಕರು ಚಪ್ಪಳೆ ತಟ್ಟಿ ಸಂಭ್ರಮಿಸಿದರು.
ತಕ್ಷಣಕ್ಕೆ ಎಚ್ಚೆತ್ತ ಅವರು, ನಾನು ನಾಲ್ಕು ವರ್ಷ ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೆ. ಹೀಗಾಗಿ ಬಾಯ್ತಪ್ಪಿನಿಂದ ಹೇಳಿದೆ. ನಿಮಗೂ ನೆನಪಿರಬೇಕು ನಾನು ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದು. ಏನು ಖುಷಿ ಪಡುತ್ತೀರಾ ನೋಡಿ ಬಾಯ್ತಪ್ಪಿನಿಂದ ಮಾತನಾಡಿದೆ ಅಷ್ಟೇ ಎಂದು ಬಿಜೆಪಿ ನಾಯಕರ ಕಾಲೆಳೆದರು.
ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್, ಕೆಲಹೊತ್ತು ಅವರು ಖುಷಿಯಾಗಿರಲಿ ಬಿಡಿ ಎಂದ ಸಿದ್ದರಾಮಯ್ಯ ಮಾತಿಗೆ ದನಿಗೂಡಿಸಿದರು.
ಎಲ್ಲಾರು ಸಂತೋಷದಲ್ಲಿ ಎಲ್ಲರೂ ತೇಲಾಡುತ್ತಿದ್ದಾರೆ. ಬಿಜೆಪಿ ನಾಯಕರು ಬಹಳ ಆತುರವಾಗಿದ್ದಾರೆ. ಆದಷ್ಟು ಬೇಗ ವಿಧಾನಸೌಧಕ್ಕೆ ಬಂದು ಮೂರನೇ ಮಹಡಿಯಲ್ಲಿ ಕುಳಿತುಕೊಳ್ಳಲು ಸಿದ್ದವಾಗಿದ್ದಾರೆ ಎಂದು ಬಿಎಸ್ವೈಗೆ ಪರೋಕ್ಷವಾಗಿ ಕುಟುಕಿದರು.
ಇದಾದ ಬಳಿಕ ಮತ್ತೆ ಬಾಯ್ತಪ್ಪಿದ ಸಿದ್ದರಾಮಯ್ಯ ಬಿಜೆಪಿ, ಜೆಡಿಎಸ್ ನಾಯಕರು ಗುಂಪಾಗಿ ಬಂದು ರಾಜೀನಾಮೆ ನೀಡಿದರು ಎಂದರು. ಮತ್ತೆ ಎಚ್ಚೆತ್ತ ಅವರು ನನ್ನ ಮಾತನ್ನು ಸರಿಪಡಿಸಿಕೊಂಡೆ ಎಂದು ಹೇಳುವ ಮೂಲಕ ಮತ್ತೆ ಸದನದಲ್ಲಿ ಎಲ್ಲರೂ ನಗೆಗಡಲಲ್ಲಿ ತೇಲಾಡುವಂತೆ ಮಾಡಿದ್ದರು.