ಬೆಂಗಳೂರು,ಜು.13- ಸರ್ಕಾರದ ವಿರುದ್ಧ ಸಿಡಿದೆದ್ದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್ ಯು ಟರ್ನ್ ಹೊಡೆದಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆಸಿದ ಚರ್ಚೆ ಫಲಪ್ರದವಾದಂತಿದೆ. ನಂತರ ಇವರ ನಿವಾಸಕ್ಕೆ ಆಗಮಿಸಿ ಉಪಮುಖ್ಯಮಂತ್ರಿ ಪರಮೇಶ್ವರ್, ಕೃಷ್ಣ ಬೈರೇಗೌಡ ಅವರೂ ಕೂಡ ಮಾತುಕತೆ ನಡೆಸಿ, ಅಲ್ಲಿಂದ ಸೀದಾ ಎಂ.ಟಿ.ಬಿ ನಾಗರಾಜ್ ಅವರನ್ನು ಸಿದ್ದರಾಮಯ್ಯನವರ ನಿವಾಸಕ್ಕೆ ಕರೆ ತಂದು ಮಾತುಕತೆ ನಡೆಸಿದ್ದಾರೆ.
ಸಿದ್ದರಾಮಯ್ಯನವರನ್ನೂ ಕೂಡ ಭೇಟಿ ಮಾಡಿ ಎಂ.ಟಿ.ಬಿ. ನಾಗರಾಜ್ ಮಾತುಕತೆ ನಡೆಸಿದ್ದಾರೆ.¾ನಿಮ್ಮ ನಿಲುವು ಬದಲಿಸಿ, ಸದನಕ್ಕೆ ಹಾಜರಾಗಿ.ಯಾವುದೇ ಸಮಸ್ಯೆಯಿದ್ದರೂ ಬಗೆಹರಿಸುವ ಜವಾಬ್ದಾರಿ ನಮ್ಮದು.ಯಾರ ಮಾತನ್ನು ಕೇಳದೆ ರಾಜೀನಾಮೆ ಹಿಂಪಡೆಯಿರಿ ಎಂದು ನಾಯಕರು ಅಭಯ ನೀಡಿದ್ದಾರೆ.
ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಟಿ.ಬಿ ನಾಗರಾಜ್ ನಾನು ಬೇಸತ್ತು ರಾಜೀನಾಮೆ ನೀಡಿದ್ದೆ. ಇಂದು ನಮ್ಮ ಪಕ್ಷದ ನಾಯಕರು ನನ್ನೊಂದಿಗೆ ಮಾತುಕತೆ ನಡೆಸಿದ್ದಾರೆ.ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ನಾನು, ಸುಧಾಕರ್ ಒಂದೇ ಬಾರಿ ರಾಜೀನಾಮೆ ನೀಡಿದ್ದೆವು.ಅವರೊಂದಿಗೂ ಚರ್ಚಿಸುವುದಾಗಿ ಅವರು ಹೇಳಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಎಂ.ಟಿ.ಬಿ. ನಾಗರಾಜ್ ನಾಲ್ಕು ದಶಕಗಳಿಂದ ಕಾಂಗ್ರೆಸ್ನಲ್ಲಿದ್ದಾರೆ.ಅವರು ಗೆದ್ದಾಗಲೆಲ್ಲ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ.ಇಂದು ಬೆಳಗ್ಗೆ ಮಾತುಕತೆ ನಡೆಸಿ ನಮ್ಮ ಹಿರಿಯ ನಾಯಕರಾದ ಸಿದ್ದರಾಮಯ್ಯನವರ ಬಳಿ ಬಂದು ಚರ್ಚೆ ನಡೆಸಿದ್ದೇವೆ. ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ನಮ್ಮ ಮೈತ್ರಿ ಸರ್ಕಾರಕ್ಕೆ ಧಕ್ಕೆಯಾವುದಿಲ್ಲ ಎಂದರು.
ವಿವಿಧ ಕಾರಣಗಳಿಗಾಗಿ ಎಂ.ಟಿ.ಬಿ.ನಾಗರಾಜ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನಂತರ ಅವರು ಬಿಜೆಪಿ ಪಾಳೆಯ ಸೇರುತ್ತಾರೆ. ಮುಂಬೈಗೆ ತೆರಳಿ ಈಗಾಗಲೇ ಠಿಕಾಣಿ ಹೂಡಿರುವ ಅತೃಪ್ತರ ಬಣ ಸೇರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.ಆದರೆ ಅವರು ಎಲ್ಲೂ ಹೋಗದೆ ಬೆಂಗಳೂರಿನಲ್ಲಿ ಉಳಿದಿದ್ದು ತಾವು ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೂಲಗಳ ಪ್ರಕಾರ ನಾಗರಾಜ್ ಅವರು ಕಾಂಗ್ರೆಸ್ನಲ್ಲೇ ಉಳಿಯುವುದಾಗಿ ವಿಶ್ವಾಸ ಮತಯಾಚನೆ ವೇಳೆ ಸಮ್ಮಿಶ್ರ ಸರ್ಕಾರವನ್ನು ಬೆಂಬಲಿಸುವ ಭರವಸೆ ನೀಡಿದ್ದು, ತಮ್ಮ ಅಸಮಾಧಾನಕ್ಕಿರುವ ಕಾರಣಗಳನ್ನು ಸಂಧಾನಕಾರರ ಬಳಿ ಸಮಗ್ರವಾಗಿ ವರದಿ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ರಾಜೀನಾಮೆ ನೀಡಿದ್ದು, ಅವರ ಮನವೊಲಿಕೆಗೆ ಪ್ರಯತ್ನ ನಡೆದಿವೆ. ಒಂದೆಡೆ ಮುಖ್ಯಮಂತ್ರಿಯವರು ಕಾಂಗ್ರೆಸ್ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಮನವೊಲಿಸುವ ಯತ್ನದಲ್ಲಿದ್ದಾರೆ. ಕಾಂಗ್ರೆಸ್ ನಾಯಕರು ಕೂಡ ಅಖಾಡಕ್ಕಿಳಿದು ಅತೃಪ್ತರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಮತ್ತೊಂದೆಡೆ ರಾಮಲಿಂಗಾರೆಡ್ಡಿ, ರೋಷನ್ ಬೇಗ್, ಆನಂದ್ ಸಿಂಗ್ ಜೊತೆಯೂ ಮಾತುಕತೆ ನಡೆಸಿದ್ದು, ಮುಂಬೈಗೆ ತೆರಳಿರುವ ಅತೃಪ್ತ ಶಾಸಕರನ್ನು ಸಹ ಮುಖಂಡರು ಸಂಪರ್ಕಿಸುತ್ತಿದ್ದಾರೆ.
ಹೀಗಾಗಿ ಬಿಜೆಪಿ ಪಡೆಯಲ್ಲಿ ಆತಂಕ ಸೃಷ್ಟಿಯಾಗಿದ್ದು ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಕನಸು ಭಗ್ನವಾಗುವುದೇ ಎಂಬ ಚಿಂತೆ ಬಿಜೆಪಿಗೆ ಕಾಡುತ್ತಿದೆ.