ರಾಜ್ಯ ರಾಜಕೀಯದಲ್ಲಿ ಮುಂದುವರೆದ ಕದನ ಕುತೂಹಲ

ಬೆಂಗಳೂರು, ಜು.13- ರಾಜ್ಯ ರಾಜಕೀಯದಲ್ಲಿ ಕದನ ಕುತೂಹಲ ಮುಂದುವರೆದಿದೆ.ದೋಸ್ತಿ ಸರ್ಕಾರವನ್ನು ಉರುಳಿಸುವ ಮತ್ತು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಫೈಟ್ ಜೋರಾಗಿಯೇ ನಡೆದಿದೆ.
ಮೈತ್ರಿ ಸರ್ಕಾರ ವಿಶ್ವಾಸ ಮತ ಪಡೆಯುವ ವಿಶ್ವಾಸದಲ್ಲಿದೆ.ಕಾರಣ ಶಾಕ್‍ಗೆ ಒಳಗಾಗಿರುವ ಬಿಜೆಪಿ ರಿವರ್ಸ್ ಆಪರೇಷನ್ ಭಯದಿಂದ ರೆಸಾರ್ಟ್ ರಾಜಕಾರಣದ ಮೊರೆ ಹೋಗಿದೆ.ಇತ್ತ ಕಾಂಗ್ರೆಸ್, ಜೆಡಿಎಸ್ ಕೂಡ ಮತ್ತೆ ತಮ್ಮ ಯಾವ ಶಾಸಕರು ಕೈ ಕೊಡಬಾರದೆಂಬ ಹಿನ್ನೆಲೆಯಲ್ಲಿ ಶಾಸಕರನ್ನು ರೆಸಾರ್ಟ್ ಹಾಗೂ ಹೊಟೇಲ್‍ಗಳಲ್ಲಿ ಇರಿಸಿದ್ದಾರೆ.

ಮೂರೂ ಪಕ್ಷಗಳಲ್ಲಿನ ಶಾಸಕರ ಮೇಲೆ ಸ್ವತಃ ಆಯಾ ಪಕ್ಷದ ನಾಯಕರಿಗೇ ವಿಶ್ವಾಸವಿಲ್ಲದಂತಾಗಿ ಹೋಗಿದೆ.ಕಾಂಗ್ರೆಸ್‍ನ 13 ಮಂದಿ ಶಾಸಕರು ರಾಜೀನಾಮೆ ನೀಡುತ್ತಿದ್ದಂತೆ ಅಕ್ಷರಶಃ ಕೈ ಪಾಳೆಯದ ಜಂಘಾಬಲವೇ ಕುಸಿದು ಹೋಗಿದೆ.ಅಷ್ಟೇ ಅಲ್ಲದೇ ತಾವು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರು ಎಂದು ಎದೆ ತಟ್ಟಿ ಹೇಳುತ್ತಿದ್ದವರೇ ಪಕ್ಷಕ್ಕೆ ಕೈ ಕೊಟ್ಟಿರುವುದು ಹಾಗೂ ಇನ್ನಷ್ಟು ಮಂದಿ ಸಂಪರ್ಕಕ್ಕೆ ಸಿಗದೆ ಅಡ್ಡಾಡುತ್ತಿರುವುದು ಕಾಂಗ್ರೆಸ್ ಪಾಳೆಯದಲ್ಲಿ ಆತ್ಮವಿಶ್ವಾಸವನ್ನೇ ಕುಂದಿಸಿದ್ದು, ಇರುವ ಶಾಸಕರನ್ನಾದರೂ ಭದ್ರ ಮಾಡಿಕೊಳ್ಳಲು ಕಾಂಗ್ರೆಸ್ ರೆಸಾರ್ಟ್ ರಾಜಕಾರಣದತ್ತ ಮುಖಮಾಡಿದೆ.

ಇನ್ನು ಜೆಡಿಎಸ್ ವಲಯದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಮೂವರು ಜೆಡಿಎಸ್ ಶಾಸಕರು ಅದರಲ್ಲೂ ಗೌಡರ ಕುಟುಂಬಕ್ಕೆ ಪರಮಾಪ್ತರಾಗಿದ್ದರು ಹಾಗೂ ಮತ್ತೊಬ್ಬರು ರಾಜ್ಯಾಧ್ಯಕ್ಷರಾಗಿದ್ದವರು ಏಕಾಏಕಿ ಪಕ್ಷ ತೊರೆದಿದ್ದು, ಜೆಡಿಎಸ್‍ಗೆ ನುಂಗಲಾರದ ಬಿಸಿ ತುಪ್ಪವಾಗಿದೆ.ಮತ್ತಷ್ಟು ಶಾಸಕರು ಬಂಡಾಯವೇಳುವ ಮುನ್ಸೂಚನೆಯಿದ್ದು ಸರ್ಕಾರದ ಉಳಿವಿಗೆ ಶಾಸಕರನ್ನು ರೆಸಾರ್ಟ್‍ನಲ್ಲಿರಿಸಿ ಅವರ ವಿಶ್ವಾಸವನ್ನು ಗಳಿಸುವ ಕೆಲಸದಲ್ಲಿ ನಿರತವಾಗಿದೆ.
ಶುಕ್ರವಾರ ಸದನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚಿಸಿ, ಸರ್ಕಾರ ಉಳಿದೇ ಉಳಿಯುತ್ತದೆ ಎಂಬ ಆತ್ಮವಿಶ್ವಾಸದ ನುಡಿಗಳನ್ನಾಡಿರುವುದು, ಸರ್ಕಾರ ಬಿದ್ದೇ ಹೋಗುತ್ತದೆ ಎಂಬ ನಂಬಿಕೆಯಲ್ಲಿ ಬಿಜೆಪಿಯಲ್ಲೂ ಕಂಗೆಡಿಸಿದೆ.ಬಿಜೆಪಿಗರೇ ನಮ್ಮ ಸರ್ಕಾರ ಉಳಿಸುತ್ತಾರೆ ಎಂಬ ಕುಮಾರಸ್ವಾಮಿಯವರ ಮಾತುಗಳು ಬಿಜೆಪಿ ಪಾಳೆಯದ ಶಾಸಕರ ಮೇಲೆಯೇ ಗುಮಾನಿ ಬರುವಂತೆ ಮಾಡಿದ್ದು, ಒಗ್ಗಟ್ಟು ಪ್ರದರ್ಶನಕ್ಕೆ ರೇಸಾರ್ಟ್‍ನತ್ತ ಮುಖಮಾಡಿದ್ದಾರೆ.

ಹೀಗೆ ತಮ್ಮ ತಮ್ಮ ಶಾಸಕರನ್ನು ಕಾಪಿಟ್ಟುಕೊಳ್ಳುವುದರ ಜೊತೆಗೆ ಅತೃಪ್ತರನ್ನು ಕಾಯುವುದು, ಇನ್ನಷ್ಟು ಮಂದಿಯಿಂದ ರಾಜೀನಾಮೆ ಕೊಡಿಸಿ ಮೈತ್ರಿ ಬಲ ಕುಗ್ಗಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯೋನ್ಮುಖವಾಗಿದೆ.
ಮೈತ್ರಿ ಪಕ್ಷಗಳು ಕೂಡ ಸುಮ್ಮನೆ ಕುಳಿತಿಲ್ಲ. ಒಂದೆಡೆ ಅತೃಪ್ತ ಶಾಸಕರನ್ನು ಮನವೊಲಿಸಲು ನಿರಂತರ ಪ್ರಯತ್ನ ನಡೆಸುತ್ತಿರುವಂತೆ ರಿವರ್ಸ್ ಆಪರೇಷನ್‍ಗೂ ಸದ್ದಿಲ್ಲದೇ ಕೈ ಹಾಕಲು ಸಿದ್ಧತೆ ನಡೆಸಿದೆ.ಜೆಡಿಎಸ್ ಕೂಡ ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದು ಕಾಂಗ್ರೆಸ್‍ನ ಕೆಲ ಅತೃಪ್ತ ಶಾಸಕರನ್ನು ಆಯಾ ಪಕ್ಷದ ನಾಯಕರನ್ನೇ ಹೊರಗಿಟ್ಟು ಓಲೈಸಲು ಯತ್ನಿಸುತ್ತಿದೆ.

ರಾಮಲಿಂಗಾರೆಡ್ಡಿ, ರೋಷನ್‍ಬೇಗ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಪೂರಕ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆ ಮತ್ತಷ್ಟು ಅತೃಪ್ತರನ್ನು ಮತ್ತೆ ಪಕ್ಷಕ್ಕೆ ಸೆಳೆಯಬಹುದಾದ ವಿಶ್ವಾಸ ಕಾಂಗ್ರೆಸ್ ನಾಯಕರಲ್ಲಿ ಮನೆ ಮಾಡಿದೆ.
ಇದರ ಪರಿಣಾಮವೇ ಇಂದು ಬೆಳಗ್ಗೆ ಡಿ.ಕೆ.ಶಿವಕುಮಾರ್ ಅವರು ಎಂ.ಟಿ.ಬಿ ನಾಗರಾಜ್ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಕೂಡ ಎಂ.ಟಿ.ಬಿ ಅವರ ಅಳಿಯನ ಮೂಲಕ ಅವರ ಮನಃಪರಿವರ್ತಿಸುವ ಯತ್ನ ವನ್ನೂ ನಡೆಸಿದ್ದಾರೆ.
ಒಟ್ಟಾರೆ ಮತ್ತೆ ಶುರುವಾದ ರೆಸಾರ್ಟ್ ರಾಜಕಾರಣ ಯಾವ ದಿಕ್ಕಿನತ್ತ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ