ಸುಪ್ರೀಂಕೋರ್ಟ್ ಹೊರಬೀಳುತ್ತಿದ್ದಂತೆ ವಿಧಾನಸಭೆಯಲ್ಲಿ ಆವರಿಸಿದ ನಿರಾಳ ಭಾವ-ಮುಂದೇನಾಯ್ತು ಇಲ್ಲಿದೆ…..

 

ಬೆಂಗಳೂರು, ಜು.12-ರಾಜೀನಾಮೆ ನೀಡಿರುವ ಶಾಸಕರ ಪ್ರಕರಣದಲ್ಲಿ ಸ್ಪೀಕರ್ ಅವರು ಮಂಗಳವಾರದವರೆಗೂ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ವಿಧಾನಸಭೆಯಲ್ಲಿಂದು ನಿರಾಳ ಭಾವ ಆವರಿಸಿತು.
ಸುಪ್ರೀಂಕೋರ್ಟ್ ವಿಚಾರಣೆ ಮತ್ತು ಅದರ ತೀರ್ಪನ್ನು ನಿರೀಕ್ಷಿಸುತ್ತ ಇಡೀ ಸದನ ಗಂಭೀರ ವಾತಾವರಣದಲ್ಲಿ ನಡೆಯುತ್ತಿತ್ತು. 1.30ರ ಸುಮಾರಿಗೆ ತೀರ್ಪಿನ ಸಾರಾಂಶ ಕಲಾಪಕ್ಕೆ ತಲುಪುತ್ತಿದ್ದಂತೆ ಎಲ್ಲರ ಮುಖದಲ್ಲೂ ನಿರಾಳತೆ ಆವರಿಸಿತ್ತು.
ಅಲ್ಲಿಯವರೆಗೂ ಗಂಭೀರವಾಗಿ ಕುಳಿತಿದ್ದಂತಹ ಶಾಸಕರು ಇದ್ದಕ್ಕಿದ್ದಂತೆ ನಿರಾಳರಾದಂತೆ ಕಂಡುಬಂತು. ಜೆಡಿಎಸ್, ಕಾಂಗ್ರೆಸ್, ಬಿಜೆಪಿಯ ಎಲ್ಲಾ ಶಾಸಕರು ತಮ್ಮ ಸ್ಥಾನದಿಂದ ಎದ್ದು ಹೊರ ಹೋಗಲಾರಂಭಿಸಿದರು. ನಾಯಕರುಗಳ ಮುಖದಲ್ಲೂ ಆವರೆಗೂ ಕಾಣುತ್ತಿದ್ದ ಚಡಪಡಿಕೆ ಇದ್ದಕ್ಕಿದ್ದಂತೆ ತಣ್ಣಗಾಯಿತು.
ಮಂಗಳವಾರದವರೆಗೂ ಯಾವುದೇ ಬೆಳವಣಿಗೆಗಳು ನಡೆಯುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಪರಸ್ಪರ ಹರಟೆಯಲ್ಲಿ ಶಾಸಕರು ಮಗ್ನರಾದರು.ಒಂದೆಡೆ ಸಂತಾಪ ಸೂಚಕದ ಮೇಲೆ ಚರ್ಚೆ ನಡೆಯುತ್ತಿತ್ತು.ಇತ್ತ ಶಾಸಕರು ತಮ್ಮ ಪಾಡಿಗೆ ತಾವು ಉಭಯ ಕುಶಲೋಪರಿಯಲ್ಲಿ ಮಗ್ನರಾದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಶಾಸಕರಿಗೆ ಸೂಚನೆ ನೀಡುತ್ತಿದ್ದುದಲ್ಲದೆ, ಕೆಲವರನ್ನು ಕರೆದು ಮಾತನಾಡಿಸುತ್ತಿದ್ದರು.

ದಿನದ ಕಲಾಪ ಆರಂಭ-ನಂತರ ಆಗಲಿದ ಗಣ್ಯರಿಗೆ ಸಂತಾಪ ಸೂಚನೆ
ಬೆಂಗಳೂರು, ಜು.12- ಇತ್ತೀಚೆಗೆ ನಿಧನರಾದ ರಾಜಕೀಯ ಪಕ್ಷಗಳ ಮುಖಂಡರು, ಸಾಹಿತಿಗಳು, ರಂಗಭೂಮಿ ಕರ್ಮಿಗಳಿಗೆ ವಿಧಾನಪರಿಷತ್‍ನಲ್ಲಿ ಸಂತಾಪ ಸೂಚಿಸಲಾಯಿತು.
ವಿಧಾನಪರಿಷತ್ ಕಲಾಪ ಪ್ರಾರಂಭವಾಗುತ್ತಿದ್ದಂತೆ ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರು ಒಂದೇ ಮಾತರಂ ಮೂಲಕ ದಿನದ ಕಲಾಪವನ್ನು ಆರಂಭಿಸಿ, ಬಳಿಕ ಸಂತಾಪ ಸೂಚನೆ ನಿರ್ಣಯ ಮಂಡಿಸಿದರು.
ಬಳಿಕ ಮಾತನಾಡಿದ ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರು, ಮಾಜಿ ಸಚಿವ ಸಿ.ಎಸ್.ಶಿವಳ್ಳಿ, ವಿಧಾನಪರಿಷತ್ ಮಾಜಿ ಸದಸ್ಯರಾದ ಬಸಗೌಡ ಅಪ್ಪಯ್ಯಗೌಡ ಪಾಟೀಲ್, ಎಸ್.ಎಂ.ಶಂಕರ್, ಕೇಂದ್ರದ ಮಾಜಿ ಸಚಿವ ವಿ.ಧನಂಜಯಕುಮಾರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಡಾ.ಗಿರೀಶ್‍ಕಾರ್ನಾಡ್, ಹಿರಿಯ ಕಲಾವಿದ ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ ಅವರಿಗೆ ಸಂತಾಪ ಸೂಚಿಸಿದರು.
ಪೌರಾಡಳಿತ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರು ಕೃಷಿಕರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಪೌರಾಡಳಿತ ಸಚಿವರಾಗಿದ್ದ ಅವರು, ಅನೇಕ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು.ಮಹದಾಯಿ ನದಿ ನೀರಿಗಾಗಿ ಕುಂದಗೋಳದಿಂದ ಕಣಕುಂಬಿವರೆಗೆ ಪಾದಯಾತ್ರೆ ನಡೆಸಿ ದೆಹಲಿಯ ಜಂತರ್‍ಮಂತರ್‍ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿ ಗಮನ ಸೆಳೆದಿದ್ದರು ಎಂದು ಸ್ಮರಿಸಿದರು.
ಹಿರಿಯ ಗಾಂಧಿವಾದಿ, ಸಹಕಾರಿ ಧುರೀಣ ವಿಧಾನಪರಿಷತ್‍ನ ಮಾಜಿ ಸದಸ್ಯ ಬಸಗೌಡ ಅಪ್ಪಯ್ಯಗೌಡ ಪಾಟೀಲ್ ಅವರು ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ , ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ 2000ರಲ್ಲಿ ರಾಜ್ಯ ಸರ್ಕಾರ ಅವರಿಗೆ ಸಹಕಾರಿ ಶಿಲ್ಪಿ ಪ್ರಶಸ್ತಿಯನ್ನು ನೀಡಿತ್ತೆಂದು ಸ್ಮರಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯರಾಗಿದ್ದ ಎಸ್.ಎಂ.ಶಂಕರ್ ಅವರು, ವೃತ್ತಿಯಲ್ಲಿ ಕೃಷಿಕರಾಗಿ ಮದ್ದೂರು ಜಿಲ್ಲೆಯ ಕೊಪ್ಪದ ಎಸ್.ಸಿ.ಮಲ್ಲಯ್ಯ ಸಕ್ಕರೆ ಕಾರ್ಖಾನೆಯ ಸಂಸ್ಥಾಪಕ ಅಧ್ಯಕ್ಷರಾಗಿ, ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಒಕ್ಕೂಟದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರೆಂದು ತಿಳಿಸಿದರು.
ವಿ.ಧನಂಜಯಕುಮಾರ್ ಅವರು ನಾಲ್ಕು ಬಾರಿ ಲೋಕಸಭೆ ಸದಸ್ಯರಾಗಿ , ಮಾಜಿ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೇಂದ್ರದ ನಾಗರಿಕ ವಿಮಾನ ಯಾನ ಮತ್ತು ಪ್ರವಾಸೋದ್ಯಮ ಸಚಿವರಾಗಿ, ಎರಡನೇ ಅವಧಿಯಲ್ಲಿ ರಾಜ್ಯದ ಹಣಕಾಸು ಹಾಗೂ ಜವಳಿ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರ ನಿಧನ ರಾಜ್ಯಕ್ಕೆ ತುಂಬರಾದ ನಷ್ಟ ಎಂದು ವಿಷಾದಿಸಿದರು.
ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ನಾಟಕಕಾರ, ಸಾಹಿತಿ, ಚಿತ್ರನಟ ಹಾಗೂ ನಿರ್ದೇಶಕರಾಗಿ ಕನ್ನಡಕ್ಕೆ ಜ್ಞಾನಪೀಠಪ್ರಶಸ್ತಿ ತಂದುಕೊಟ್ಟ ಡಾ.ಗಿರೀಶ್‍ಕಾರ್ನಾಡ್ ಅವರ ನಿಧನ ಕರ್ನಾಟಕಕ್ಕಲ್ಲದೆ ದೇಶಕ್ಕೆ ತುಂಬಲಾರದ ನಷ್ಟ.
ಕಿರಿಯ ವಯಸ್ಸಿನಲ್ಲೇ ಯಕ್ಷಗಾನ, ನಾಟಕ, ವಿಮರ್ಶೆ, ಬರಹಗಾರರಾಗಿ, ಕಲಾವಿದರಾಗಿ, ಚಿಂತನಕರಾಗಿ ಸೇವೆ ಸಲ್ಲಿಸಿದ್ದಾರೆ.ಕನ್ನಡ ಸಾರಸ್ವತ ಲೋಕವು ಒಬ್ಬ ಹಿರಿಯ ಸಾಹಿತಿ ಹಾಗೂ ಬಹುಮುಖ ವ್ಯಕ್ತಿತ್ವದ ಪ್ರತಿಭೆಯನ್ನು ಕಳೆದುಕೊಂಡಿದೆ ಎಂದು ವಿಷಾದಿಸಿದರು.
ಕನ್ನಡ ರಂಗಭೂಮಿ ಹಿರಿಯ ಕಲಾವಿದ, ನಾಟಕಕಾರ, ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ.ಕರ್ನಾಟಕ ರಾಜ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ, ರಂಗಭೂಮಿ, ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕøತರಾಗಿದ್ದರೆಂದು ಸ್ಮರಿಸಿದರು.
ಸಭಾಪತಿಗಳ ಸಂತಾಪ ನಿರ್ಣಯದ ಪರವಾಗಿ ಸಭಾನಾಯಕಿ ಡಾ.ಜಯಮಾಲಾ ರಾಮಚಂದ್ರ, ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಅಗಲಿದ ಗಣ್ಯರ ಸೇವೆ ಸ್ಮರಿಸಿದರು.
ನಂತರ ಮೃತರ ಗೌರವಾರ್ಥ ಸದಸ್ಯರೆಲ್ಲರು ಎದ್ದು ನಿಂತು ಒಂದು ನಿಮಿಷ ಮೌನಾಚರಣೆ ಮಾಡಿದರು.

ಇಂದಿನಿಂದ ಉಭಯ ಸದನಗಳ ಅಧಿವೇಶನ ಆರಂಭ
ಬೆಂಗಳೂರು, ಜು.12- ಇಂದಿನಿಂದ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಆರಂಭವಾಗಿದ್ದು, ಜೆಡಿಎಸ್ ತನ್ನ ಶಾಸಕರಿಗೆ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ವಿಪ್ ನೀಡಿದೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಪ್ ಜಾರಿಗೊಳಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರಾದ ಎಚ್.ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯ ಅವರಿಗೂ ವಿಪ್ ನೀಡಲಾಗಿದೆ.
ಶಾಸಕರ ಭವನದ ಅವರ ಕೊಠಡಿಗಳ ಬಾಗಿಲ ಬಳಿ ವಿಪ್ ಪ್ರತಿಯನ್ನು ಅಂಟಿಸಲಾಗಿದೆ.ಉಳಿದ ಶಾಸಕರಿಗೆ ಈಗಾಗಲೇ ವಿಪ್ ಜಾರಿಗೊಳಿಸಲಾಗಿದೆ.ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿದ್ದು, ಸರ್ಕಾರದ ಪರವಾಗಿ ಮತ ಚಲಾಯಿಸಬೇಕು.ಗೈರು ಹಾಜರಾದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿಪ್‍ನಲ್ಲಿ ಸೂಚಿಸಲಾಗಿದೆ.

ವಿಧಾನಸೌಧಕ್ಕೆ ಒಟ್ಟಾಗಿ ಆಗಮಿಸಿದ ಜೆಡಿಎಸ್ ಶಾಸಕರು
ಬೆಂಗಳೂರು, ಜು.12- ಕಳೆದ ನಾಲ್ಕು ದಿನಗಳಿಂದ ದೇವನಹಳ್ಳಿ ಬಳಿಯ ರೆಸಾರ್ಟ್‍ನಲ್ಲಿ ಬೀಡುಬಿಟ್ಟಿದ್ದ ಜೆಡಿಎಸ್ ಶಾಸಕರು ಇಂದು ಒಟ್ಟಾಗಿ ವಿಧಾನಸೌಧಕ್ಕೆ ಆಗಮಿಸಿದರು.
ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಆರಂಭವಾಗುವ ಮುನ್ನ ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸಭೆ ಸೇರಿ ಅಧಿವೇಶನ ಹಾಗೂ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಶಾಸಕರು ಸಮಾಲೋಚನೆ ನಡೆಸಿದರು.
ಶಾಸಕಾಂಗ ಪಕ್ಷದ ನಾಯಕರೂ ಆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಾಯಿತು.ಸಭೆಯಲ್ಲಿ ಪ್ರಸಕ್ತ ಅಧಿವೇಶನದಲ್ಲಿ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಲಾಯಿತು.
ಆಡಳಿತ ಪಕ್ಷದ ಶಾಸಕರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಶಾಸಕರು ಎಂದಿನಂತೆ ಒಗ್ಗಟ್ಟಿನಿಂದ ಇರಬೇಕು.ಮೈತ್ರಿ ಸರ್ಕಾರ ಸುಭದ್ರವಾಗಿರುತ್ತದೆ.ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ಶಾಸಕರಿಗೆ ಭರವಸೆ ನೀಡಿದ್ದಾರೆ.
ವಿಧಾನಸಭೆಯ ಕಾರ್ಯ-ಕಲಾಪಗಳಲ್ಲಿ ಪಾಲ್ಗೊಂಡು ಪ್ರತಿಪಕ್ಷ ಬಿಜೆಪಿ ಎತ್ತುವ ವಿಚಾರಗಳಿಗೆ ಪ್ರತಿಯಾಗಿ ಸೂಕ್ತ ಸಮರ್ಥನೆ ನೀಡುವ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ.

ಕಲಾಪಕ್ಕೂ ಮುನ್ನ ಸ್ಪೀಕರ್ ಭೇಟಿ ಮಾಡಿದ ಸಿಎಂ
ಬೆಂಗಳೂರು, ಜು.12-ವಿಧಾನಮಂಡಲ ಕಲಾಪ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸ್ಪೀಕರ್ ರಮೇಶ್‍ಕುಮಾರ್ ಅವರು ಮಹತ್ವದ ಸಮಾಲೋಚನೆ ನಡೆಸಿದರು.
ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಭೇಟಿ ಚರ್ಚೆಗೆ ಗ್ರಾಸವಾಗಿದೆ.ಸಚಿವರಾದ ಎಚ್.ಡಿ.ರೇವಣ್ಣ, ಕೃಷ್ಣಭೆರೇಗೌಡ ಅವರು ಇಂದು ಸ್ಪೀಕರ್ ಅವರನ್ನು ಭೇಟಿ ಮಾಡಿ ಕೆಲ ಸಮಯ ಚರ್ಚೆ ನಡೆಸಿದರು.ನಂತರ ಕಲಾಪ ಆರಂಭಗೊಂಡಿತು.
ಇದಕ್ಕೂ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಕೂಡ ಸ್ಪೀಕರ್ ಅವರ ಜೊತೆ ಮಾತುಕತೆ ನಡೆಸಿದರು.

ಜೆಡಿಎಸ್ ಸಚಿವರ ಬಿಜೆಪಿ ನಾಯಕರ ಭೇಟಿ-ಕಾಂಗ್ರೇಸ್‍ನಲ್ಲಿ ತಳಮಳ
ಬೆಂಗಳೂರು,ಜು.12- ಜೆಡಿಎಸ್‍ನ ಸಚಿವರು ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಿರುವ ಬೆಳವಣಿಗೆ ಕಾಂಗ್ರೆಸ್‍ನಲ್ಲಿ ತಳಮಳ ಸೃಷ್ಟಿಸಿದೆ.
ಸಮ್ಮಿಶ್ರ ಸರ್ಕಾರ ಉಳಿಸಲು ಕಾಂಗ್ರೆಸ್‍ನ ನಾಯಕರು ಬೀದಿಗಿಳಿದು ಹೋರಾಟ ಮಾಡುವ ಮೂಲಕ ಹಗಲು-ರಾತ್ರಿ ಸರ್ಕಾರ ರಕ್ಷಣೆಗೆ ಶ್ರಮಿಸುತ್ತಿದ್ದಾರೆ.ಈ ಮಧ್ಯೆ ಜೆಡಿಎಸ್‍ನ ನಾಯಕರು ಬಿಜೆಪಿ ಜತೆ ತೆರೆಮರೆಯಲ್ಲಿ ಮಾತುಕತೆ ನಡೆಸಿರುವುದು ಕಾಂಗ್ರೆಸಿಗರನ್ನು ಕೆರಳಿಸಿದೆ.
ಮೂಲಗಳ ಪ್ರಕಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಮೆರಿಕದಿಂದ ವಾಪಸ್ ಬಂದ ತಕ್ಷಣ ಬಿಜೆಪಿಯ ರಾಷ್ಟ್ರ ನಾಯಕರನ್ನು ಭೇಟಿ ಮಾಡುವ ಪ್ರಯತ್ನ ಮಾಡಿದ್ದರು.ಆದರೆ, ಅದು ಸಾಧ್ಯವಾಗಲಿಲ್ಲ.
ಕಾಂಗ್ರೆಸ್ ಶಾಸಕರ ಅಸಮಾಧಾನ ಪಕ್ಷ ಅಥವಾ ಕಾಂಗ್ರೆಸ್‍ನ ನಾಯಕರ ಮೇಲಲ್ಲ. ಎಲ್ಲರ ಆರೋಪ ಒಂದೆ.ಅದು ಮುಖ್ಯಮಂತ್ರಿಯವರು ಸರಿಯಾಗಿ ನಡೆಸಿಕೊಂಡಿಲ್ಲ ಎಂಬುದು. ಹಾಗಾಗಿ ನಾಯಕತ್ವ ಬದಲಾವಣೆಯಾಗಬೇಕು. ಒಂದು ವೇಳೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ, ರೇವಣ್ಣ ಉಪ ಮುಖ್ಯಮಂತ್ರಿಯಾಗಲಿ ಎಂಬುದಾಗಿದೆ.
ರಾಜೀನಾಮೆ ಕೊಟ್ಟು ಮುಂಬೈ ಸೇರಿರುವ ಎಲ್ಲಾ ಶಾಸಕರು ಸಿದ್ದರಾಮಯ್ಯಅವರ ಆಪ್ತರೇ ಆಗಿದ್ದು, ಒಂದು ವೇಳೆ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದರೆ ಹಿಂದಿರುಗಿ ಬರುತ್ತಾರೆ ಎಂಬ ಮಾತುಗಳು ಇವೆ.
ಕಾಂಗ್ರೆಸ್‍ನವರ ಈ ಅಭಿಪ್ರಾಯ ಜೆಡಿಎಸ್ ನಾಯಕರನ್ನು ಕೆರಳಿಸಿದ್ದು, ಕಾಂಗ್ರೆಸ್ ನಾಯಕರು ತೆರೆಮರೆಯಲ್ಲಿ ಆಟವಾಡುತ್ತಿದ್ದಾರೆ. ನಾವು ಅದೇ ರೀತಿ ರಾಜಕಾರಣ ಮಾಡಬೇಕೆಂದು ಬಿಜೆಪಿ ನಾಯಕರೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ನಾಯಕರ ಮಾತುಕತೆಗೆ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿಯವರು ವಿರೋಧಿಸಿದ್ದಾರೆ. ಜೆಡಿಎಸ್ ಯಡಿಯೂರಪ್ಪ ಹೊರತುಪಡಿಸಿ ಯಾರನ್ನೇ ಮುಖ್ಯಮಂತ್ರಿ ಮಾಡಿದರೂ ಬೇಷರತ್ ಬೆಂಬಲ ನೀಡುವ ಭರವಸೆ ನೀಡಿದೆ ಎಂಬ ವದಂತಿ ಹರಿದಾಡುತ್ತಿದೆ. ಈ ಮಾಹಿತಿ ತಿಳಿದ ಕಾಂಗ್ರೆಸ್ ನಾಯಕರು ಜೆಡಿಎಸ್ ನಾಯಕರ ಮೇಲೆ ಅಸಮಾಧಾನಗೊಂಡಿದ್ದಾರೆ.
ಕಾಂಗ್ರೆಸ್‍ನ ಹಿರಿಯ ನಾಯಕರಾದ ಗುಲಾಬ್‍ನಬಿ ಆಜಾದ್, ಕೆ.ಸಿ.ವೇಣುಗೋಪಾಲ್‍ನಂತಹವರು ಮೂರ್ನಾಲ್ಕು ದಿನ ಬೆಂಗಳೂರಿನಲ್ಲೇ ಕೂತು ಪರಿಸ್ಥಿತಿ ಸರಿಪಡಿಸಲು ಸರ್ಕಸ್ ಮಾಡಿದ್ದಾರೆ. ಇತ್ತ ಸಚಿವ ಡಿ.ಕೆ.ಶಿವಕುಮಾರ್ ಮುಂಬೈಗೆ ತೆರಳಿದ್ದಾಗ ಬೀದಿಯಲ್ಲೇ ಧರಣಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹಾಗೂ ಪ್ರಿಯಾಂಕ್‍ಖರ್ಗೆ ರಾಜೀನಾಮೆ ಕೊಡದಂತೆ ಶಾಸಕರನ್ನು ಎಳೆದೊಯ್ದು ಹಾದಿ-ಬೀದಿಯಲ್ಲಿ ಹೋರಾಟ ನಡೆಸಿ ಸರ್ಕಾರ ರಕ್ಷಿಸಲು ಪ್ರಯತ್ನಿಸಿದ್ದಾರೆ.
ಆದರೆ, ಜೆಡಿಎಸ್‍ನವರು ಸ್ವಂತ ಲಾಭಕ್ಕಾಗಿ ಬಿಜೆಪಿ ಜತೆ ಸಖ್ಯ ಬೆಳೆಸಲು ಮುಂದಾಗಿದ್ದಾರೆ.ಹೀಗೆ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಸೌಹಾರ್ದಯುತ ವಾತಾವರಣ ಕಷ್ಟ.
ಬಿಜೆಪಿಯವರು ಬೇಡ ಎಂದರೂ ಜೆಡಿಎಸ್‍ನವರು ಹೋಗುತ್ತಿರುವುದರ ಹಿಂದೆ ಕಾಂಗ್ರೆಸ್‍ನವರನ್ನು ಬ್ಲಾಕ್‍ಮೇಲ್ ಮಾಡುವ ಉದ್ದೇಶವಿದೆ.
ಈ ಬಗ್ಗೆ ಪಕ್ಷದ ಹೈಕಮಾಂಡ್ ಗಂಭೀರ ಚಿಂತನೆ ಮಾಡಬೇಕು.ಮೊದಲು ನಾವು ಈ ಬಗ್ಗೆ ಚಿಂತನೆ ನಡೆಸಬೇಕು.ಈಗಾಗಲೇ ಶಾಸಕರು ಬೇಜಾರಾಗಿದ್ದಾರೆ.ನಮ್ಮದೇ ಶಾಸಕರನ್ನು ಎದುರು ಹಾಕಿಕೊಂಡು ಸರ್ಕಾರ ರಕ್ಷಿಸಲು ಪ್ರಯತ್ನ ನಡೆಸುತ್ತಿದ್ದರೆ, ಜೆಡಿಎಸ್ ಮಾತ್ರ ಲಾಭ ನೋಡುತ್ತಿದೆ.ಇದರಿಂದ ಕಾಂಗ್ರೆಸ್‍ಗೆ ಮುಂದಿನ ದಿನಗಳಲ್ಲಿ ಹಾನಿಯಾಗುವ ಆತಂಕವಿದೆ.ಈ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಬಗ್ಗೆ ಈಗಲೇ ಯೋಚಿಸಿ ಎಂದು ಕೆಲವು ನಾಯಕರು ಹೈಕಮಾಂಡ್‍ಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಬಹುಮತವಿಲ್ಲದಿರುವಾಗ ಮುಖ್ಯಮಂತ್ರಿಯಾಗಲು ಬಯಸುವುದಿಲ್ಲ-ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜು.12-ಆಡಳಿತ ಪಕ್ಷದ ಶಾಸಕರು ರಾಜೀನಾಮೆ ನೀಡಿ ರಾಜಕೀಯ ಪರಿಸ್ಥಿತಿ ಹದಗೆಟ್ಟಿರುವ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಲು ಬಯಸುವುದಿಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ತಮ್ಮ ಆಪ್ತ ವಲಯದಲ್ಲಿ ಮಾತನಾಡುವ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ಬಹುಮತವಿಲ್ಲ. ಬಹುಮತವಿಲ್ಲದಿರುವಾಗ ಮುಖ್ಯಮಂತ್ರಿಯಾಗಲು ಬಯಸುವುದಿಲ್ಲ ಎಂದು ತಮ್ಮ ಆಪ್ತ ಬಳಗಕ್ಕೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ವಿಧಾನಸಭೆಗೆ ಚುನಾವಣೆ ನಡೆದು ನಮ್ಮ ಪಕ್ಷಕ್ಕೆ ಬಹುಮತ ಬಂದರೆ ಆಗ ನೋಡೋಣ ಎಂದು ಹೇಳಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.
ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದು, ಮೈತ್ರಿ ಸರ್ಕಾರ ತೂಗುಯ್ಯಾಲೆಯಲ್ಲಿರುವ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆ ಮಾಡಿ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಕುರಿತಂತೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತ ನಿರ್ವಹಿಸಿದ ತೃಪ್ತಿ ಇದೆ. ಮತ್ತೆ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಬೇಕೆಂಬ ಅಪೇಕ್ಷೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಲಾಗುತ್ತದೆ ಎಂಬ ವದಂತಿಗೆ ಸಂಬಂಧಿಸಿದಂತೆ ಅವರು ತಮ್ಮ ಆಪ್ತ ವಲಯದಲ್ಲಿ ಈ ಮಾತನ್ನು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಸಂವಿಧಾನಕ್ಕೆ ಗೌರವ ಕೊಟ್ಟು ಕೆಲಸ ಮಾಡುತ್ತೇನೆ-ಸ್ಪೀಕರ್ ರಮೇಶ್‍ಕುಮಾರ್
ಬೆಂಗಳೂರು, ಜು.12 -ದೇಶ, ನ್ಯಾಯಾಂಗ, ಶಾಸಕಾಂಗ ಉಳಿಯಬೇಕು. ಸಂವಿಧಾನಾತ್ಮಕವಾಗಿ ನೇಮಕವಾದ ಒಬ್ಬ ಪ್ರತಿನಿಧಿಯಾಗಿ ಪ್ರಜಾಪ್ರಭುತ್ವದ ಘನತೆಗೆ ಕುಂದು ಬಾರದ ರೀತಿಯಲ್ಲಿ ಕೆಲಸ ಮಾಡುವುದು ನನ್ನ ಜವಾಬ್ದಾರಿಯಾಗಿದೆ ಎಂದು ಸ್ಪೀಕರ್ ರಮೇಶ್‍ಕುಮಾರ್ ಹೇಳಿದರು.
ದೊಮ್ಮಲೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರ ಮನಸ್ಸಿಗಾದ ನೋವಿಗೆ ಗೌರವ ಕೊಟ್ಟು ನನ್ನ ಕರ್ತವ್ಯದಿಂದ ವಿಮುಖನಾಗದಂತೆ ನಿರ್ವಹಿಸುವುದು ಜವಾಬ್ದಾರಿಯಾಗಿದೆ.ಸಂವಿಧಾನದ ಅಪಚಾರ ಮಾಡುವುದಿಲ್ಲ. ಅದಕ್ಕೆ ಗೌರವ ಕೊಟ್ಟು ಕೆಲಸ ಮಾಡುತ್ತೇನೆ.
ಯಾರನ್ನಾದರೂ ಖುಷಿ ಪಡಿಸಲು ಅಥವಾ ಸಂತೋಷ ಪಡಿಸಲು ನಾವು ನೃತ್ಯ ಮಾಡಲು ನೃತ್ಯಗಾರ್ತಿಯಲ್ಲ. ಸಂವಿಧಾನಾತ್ಮಕವಾಗಿ ನೇಮಕವಾದ ಒಬ್ಬ ಪ್ರತಿನಿಧಿ. ಯಾರೂ ಬೇಕಾದರೂ ಒತ್ತಡ ಹಾಕಲಿ. ನನ್ನ ಕೆಲಸ ನಾನು ಮಾಡುತ್ತೇನೆ. ಗಾಂಧೀಜಿಯವರನ್ನೇ ಕೊಂದ ದೇಶ ಇದು.ಅವರನ್ನು ನಮಸ್ಕರಿಸಿ ಕೊಂದರು.ಆದರೆ ಗಾಂಧೀಜಿಯವರ ತತ್ವಾದರ್ಶಗಳು ಸತ್ತಿವೆಯೇ ಎಂದು ಪ್ರಶ್ನಿಸಿದರು.
ಸುಪ್ರೀಂಕೋರ್ಟ್ ಏನು ತೀರ್ಮಾನ ಮಾಡುತ್ತದೋ ನೋಡೋಣ.ನಮಗೆ ಅನ್ವಯವಾಗುತ್ತದೋ ಇಲ್ಲವೋ, ನೋಡಬೇಕು. ಕೋರ್ಟ್ ಆದೇಶ ಮಾಡಿದರೆ ಅವರನ್ನೇ ಮಾಹಿತಿ ಕೇಳೋಣ ಎಂದರು.
ನನ್ನ ತೇಜೋವಧೆ ಮಾಡುತ್ತಿದ್ದಾರೆ, ಮಾಡಲಿ.ಅವರಿಗೆ ಒಳ್ಳೆಯದಾಗಲಿ.ಶಾಸಕರು ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದ್ದಾರೆ. ಆ ಬಗ್ಗೆ ತೀರ್ಮಾನಮಾಡಲು ಯೋಚಿಸುತ್ತಿದ್ದೇನೆ. ಸಂವಿಧಾನಕ್ಕೆ ಅಪಚಾರ ಮಾಡಲ್ಲ ಹಾಗೂ ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದರು.
ನಿನ್ನೆ ಕ್ರಮಬದ್ಧವಾಗಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಈ ಪೈಕಿ ಮೂವರು ಶಾಸಕರಿಗೆ ವೈಯಕ್ತಿಕ ಭೇಟಿಗೆ ಸಮಯ ಕೊಡಲಾಗಿದೆ.ಆನಂದ್‍ಸಿಂಗ್, ನಾರಾಯಣಗೌಡ ಹಾಗೂ ಪ್ರತಾಪ್‍ಗೌಡ ಪಾಟೀಲ್ ಅವರಿಗೆ ವೈಯಕ್ತಿಕ ಭೇಟಿಗೆ ಸಮಯಾವಕಾಶ ನೀಡಿದ್ದೇವೆ.
ಕಾಂಗ್ರೆಸ್‍ನವರು ವಿಪ್ ನೀಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‍ನವರು ಏನು ಮಾಡಿದ್ದಾರೋ ನನಗೇನು ಗೊತ್ತು ಎಂದು ಹೇಳಿದರು.

ಅತೃಪ್ತ ಶಾಸಕರು ಅಧಿವೇಶನಕ್ಕೆ ಹಾಜರಾಗಲಿದ್ದಾರೆ
ಬೆಂಗಳೂರು, ಜು.12 -ಅತೃಪ್ತ ಶಾಸಕರು ಅಧಿವೇಶನಕ್ಕೆ ಹಾಜರಾಗಲಿದ್ದಾರೆ ಎಂಬ ವಿಶ್ವಾಸವಿದೆ. ಬರದಿದ್ದರೆ ಕಾನೂನು ರೀತಿ ಕ್ರಮ ಜರುಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಬಹುಮತದ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿದೆ. ಎಲ್ಲಾ ಶಾಸಕರಿಗೂ ವಿಪ್ ಜಾರಿಯಾಗಿದೆ. ಅಧಿವೇಶನಕ್ಕೆ ಹಾಜರಾಗಲಿದ್ದಾರೆ ಎಂಬ ವಿಶ್ವಾಸವಿದೆ. ಇಲ್ಲದಿದ್ದರೆ ಕಾನೂನು ಕ್ರಮ ಜಾರಿಯಾಗಲಿದೆ ಎಂದರು.

ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ನಟ ಶಿವರಾಜ್‍ಕುಮಾರ್
ಲಂಡನ್, ಜು.12- ಹ್ಯಾಟ್ರಿಕ್ ಹೀರೋ, ಸೆಂಚುರಿಸ್ಟಾರ್ ಶಿವರಾಜ್‍ಕುಮಾರ್ ಅವರು ತಮ್ಮ 57ನೆ ಹುಟ್ಟುಹಬ್ಬವನ್ನು ಲಂಡನ್‍ನಲ್ಲೇ ಸರಳವಾಗಿ ಆಚರಿಸಿಕೊಂಡಿದ್ದಾರೆ.
ಲಂಡನ್‍ನಲ್ಲಿ ಶಿವರಾಜ್‍ಕುಮಾರ್‍ರ ಯೋಗಕ್ಷೇಮ ನೋಡಿಕೊಳ್ಳುತ್ತಿರುವ ಪತ್ನಿ ಗೀತಾ ಹಾಗೂ ಸಹೋದರ ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಅವರು ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಪ್ರತಿ ವರ್ಷ ಶಿವರಾಜ್‍ಕುಮಾರ್ ಅವರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದರೂ ಆದರೆ ಈ ಬಾರಿ ಶಸ್ತ್ರ ಚಿಕಿತೆÉ್ಸಗಾಗಿ ಲಂಡನ್‍ಗೆ ತೆರಳಿದ್ದು ಅಲ್ಲೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ನಿನ್ನೆಯಷ್ಟೇ ಶಿವಣ್ಣನಿಗೆ ಬಲಭುಜದ ಆಪರೇಷನ್ ಯಶಸ್ವಿಯಾಗಿ ನಡೆದಿದ್ದು, ತಮ್ಮ ಅಭಿಮಾನಿಗಳಿಗೆ ಅವರು ಸಂದೇಶ ಕಳಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ನಾನು ಲಂಡನ್‍ನಲ್ಲಿ ವಾಕ್ ಮಾಡುತ್ತಿದ್ದಾಗ ಅಚಾನಕ್ಕಾಗಿ ಬಿದ್ದು ನನ್ನ ಬಲಭುಜಕ್ಕೆ ಗಾಯವಾಗಿತ್ತು, ಅದನ್ನು ಲೆಕ್ಕಿಸದೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರಿಂದ ನೋವು ಹೆಚ್ಚಾಗಿದ್ದರಿಂದ ಈಗ ಅದರ ಶಸ್ತ್ರ ಚಿಕಿತ್ಸೆ ಆಗಿದ್ದು ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಸೂಪರ್‍ಸ್ಟಾರ್ ರಜನಿಕಾಂತ್ ಅವರಿಗೆ ಆಪರೇಷನ್ ಮಾಡಿದ ಲಂಡನ್ ವೈದ್ಯರೇ ನನಗೂ 45 ನಿಮಿಷಗಳ ಕಾಲ ಆಪರೇಷನ್ ಮಾಡಿದ್ದಾರೆ ಇನ್ನೊಂದು ತಿಂಗಳು ರೆಸ್ಟ್ ಮತ್ತು 2 ತಿಂಗಳು ರಿಸ್ಕ್ ತೆಗೆದುಕೊಂಡು ಸ್ಟಂಟ್ ಮಾಡುವ ಆಗಿಲ್ಲ ಅದಾದ ನಂತರ ಎಂದಿನಂತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಈ ಬಾರಿ ಲಂಡನ್‍ನಲ್ಲಿರುವ ಕಾರಣ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿದ್ದರೂ ಮುಂದಿನ ವರ್ಷ ಅವರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತೇನೆ ಎಂದು ಹೇಳಿದರು.
ತಮ್ಮ ನೆಚ್ಚಿನ ನಟ ಶೀಘ್ರ ಗುಣಮುಖರಾಗಲೆಂದು ಆಶಿಸಿ ಅಭಿಮಾನಿಗಳು ಪೂಜೆ, ಹೋಮ, ಹವನ ನಡೆಸಿದ್ದಾರೆ.
ಅಯುಷ್ಮಾನ್‍ಭವ ಆದ ಆನಂದ್:
ದ್ವಾರಕೀಶ್ ನಿರ್ಮಾಣದಲ್ಲಿ ವಾಸು ನಿರ್ದೇಶನದಲ್ಲಿ ಶಿವರಾಜ್‍ಕುಮಾರ್ ನಟಿಸಿರುವ ಆನಂದ್ ಚಿತ್ರಕ್ಕೆ ಈಗ ಆಯುಷ್ಮಾನ್‍ಭವ ಎಂಬ ಟೈಟಲ್ ಇಡಲಾಗಿದೆ ಎಂದು ಚಿತ್ರತಂಡವು ಶಿವಣ್ಣನ ಹುಟ್ಟುಹಬ್ಬದಂದು ಘೋಷಿಸಿದ್ದಾರೆ.
ಆಯುಷ್ಮಾನ್‍ಭವ ಚಿತ್ರದಲ್ಲಿ ಶಿವಣ್ಣನೊಂದಿಗೆ ರಚಿತಾರಾಮ್ ನಟಿಸುತ್ತಿದ್ದು, ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ಗುರುಕಿರಣ್ ಅವರ ಸಂಗೀತವಿದೆ.
ಹರ್ಷ ನಿರ್ದೇಶಿಸಿ ಶಿವರಾಜ್‍ಕುಮಾರ್ ನಟಿಸಲಿರುವ ಭಜರಂಗಿ 2 ಚಿತ್ರದ ಪೆÇೀಸ್ಟರ್ ಅನ್ನು ಇಂದು ಬಿಡುಗಡೆ ಮಾಡಲಾಯಿತು.
ಸ್ಯಾಂಡಲ್‍ವುಡ್‍ನ ಕಲಾವಿದರು, ತಂತ್ರಜ್ಞರು ಶಿವರಾಜ್‍ಕುಮಾರ್ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.

ರಾಜಕೀಯ ಘಟಾನುವಳಿಗಳನ್ನು ಗಮನಿಸಿದರೆ ವೈರಾಗ್ಯವಾಗುತ್ತಿದೆ-ಸಚಿವ ಡಿ.ಕೆ.ಶಿವಕುಮಾರ್
ಬೆಂಗಳೂರು, ಜು.12-ಇತೀಚಿನ ರಾಜಕೀಯ ಘಟನಾವಳಿಗಳನ್ನು ಗಮನಿಸಿದರೆ ವೈರಾಗ್ಯವಾಗುತ್ತಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ವಿಧಾನಸಭೆಗೆ ತಿಳಿಸಿದರು.
ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸುವ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಅವರು, ದಾಸರವಾಣಿಯನ್ನು ಉಲ್ಲೇಖಿಸಿದರು.ಆ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು ಮಠ ಏನಾದರೂ ಸ್ಥಾಪನೆ ಮಾಡುತ್ತೀರ ಎಂದರು.ಆಗ ತಾವು ಶಾಲೆಗೆ ಸೇರಿದಾಗ ನಮ್ಮ ಕ್ಷೇತ್ರದ ಶಾಸಕರಾಗಿದ್ದ ಕರಿಯಪ್ಪನವರ ಪಾದಗಳಿಗೆ ನಮಸ್ಕರಿಸುವಂತೆ ನಮ್ಮ ತಂದೆ ಹೇಳಿದ್ದರು.ಆ ಕ್ಷೇತ್ರದಿಂದ ಶಾಸಕನಾಗಿ ಬಂದವನು. ದಿನನಿತ್ಯ ಮಾಧ್ಯಮಗಳಲ್ಲಿ ರಾಜಕಾರಣಿಗಳ ಬಗ್ಗೆ ಬಿತ್ತರವಾಗುತ್ತಿರುವುದನ್ನು ನೋಡಿದರೆ ಹೀಗಾಗಿ ವೈರಾಗ್ಯ ತಾಳಿದರೆ ಸೂಕ್ತವೇನು ಎಂದೆನಿಸುತ್ತದೆ ಎಂದರು.
ಶಿವಳ್ಳಿಯವರು ತಮ್ಮ ಆತ್ಮೀಯ ಸ್ನೇಹಿತರಾಗಿದ್ದರು.ಯಮನು ಯಾರಿಗೂ ಕರುಣೆ ತೋರುವುದಿಲ್ಲ. ಶಿವಹಳ್ಳಿ ಅವರ ನಿಧನ ತುಂಬ ನೋವುಂಟು ಮಾಡಿದೆ ಎಂದು ಹೇಳಿದರು.
ಅದೇ ರೀತಿ ಸಾಹಿತಿ ಗಿರೀಶ್ ಕಾರ್ನಾಡ್ ನಿಧನ ಕೂಡ ತುಂಬಲಾರದ ನಷ್ಟವುಂಟು ಮಾಡಿದೆ.ಸರ್ಕಾರಿ ಗೌರವವನ್ನು ಅವರ ಕುಟುಂಬವರ್ಗದವರು ಬೇಡ ಎಂದು ಹೇಳಿದರು.

ಬಿಜೆಪಿಯ ನಿದ್ದೆಗೆಡಿಸಿದ ಮುಖ್ಯಮಂತ್ರಿಯವರ ವಿಶ್ವಾಸ ಮತಯಾಚನೆ ಘೋಷಣೆ
ಬೆಂಗಳೂರು,ಜು.12- ರಾಜಕೀಯ ದೊಂಬರಾಟದ ನಡುವೆಯೂ ಸದನದಲ್ಲಿ ವಿಶ್ವಾಸ ಮತಯಾಚನೆ ಮಾಡಲು ನಾನು ಸಿದ್ದ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿರುವುದು ಬಿಜೆಪಿಯ ನಿದ್ದೆಗೆಡಿಸಿದೆ.
ಈ ಬೆಳವಣಿಗೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಪಕ್ಷದ ಯಾವ ಶಾಸಕರು ಬೆಂಗಳೂರು ಬಿಟ್ಟು ಹೊರ ಹೋಗಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮತ್ತೊಮ್ಮೆ ಬೆಂಗಳೂರಿನಲ್ಲಿ ದಸ್ತಕರ್
ಬೆಂಗಳೂರು,ಜು.12- ದಸ್ತಕರ್ ಮತ್ತೊಮ್ಮೆ ಬೆಂಗಳೂರಿನಲ್ಲಿ ಕರಕುಶಲ ಜೀವನ ಶೈಲಿಗೆ ಪೂರಕವಾದ ಕಾರ್ಯಕ್ರಮದಡಿ ನೇಚರ್ ಬಜಾರ್‍ನ 15ನೇ ಆವೃತ್ತಿ ಈಗಾಗಲೇ ಆರಂಭಗೊಂಡಿದ್ದು, 14ವರೆಗೆ ನಗರದ ಜಯಮಹಲ್ ರಸ್ತೆಯ ಪ್ಯಾಲೇಸ್ ಹೋಟೆಲ್‍ನಲ್ಲಿ ನಡೆಯಲಿದೆ.
ಭಾರತೀಯ ಕರಕುಶಲತೆಯ ಅತ್ಯಂತ ಅಧಿಕೃತ ಅನುಭವವನ್ನು ಭಾರತದ 20 ರಾಜ್ಯಗಳ ಸಣ್ಣ ಉತ್ಪಾದಕರ 100ಕ್ಕೂ ಹೆಚ್ಚು ಗುಂಪುಗಳಿಂದ ಒದಗಿಸುತ್ತಾ ಬಂದಿದೆ.
ಹೊಸ ಕರಕುಶಲ ಗುಂಪುಗಳು ಹಾಗೂ ವಿನ್ಯಾಸಕರಿಗೆ ತಮ್ಮ ವಿಶಿಷ್ಟ ಉತ್ಪನ್ನಗಳನ್ನು ಮೊಟ್ಟ ಮೊದಲಿಗೆ ಪರಿಚಯಿಸಲು ಪ್ರದರ್ಶನದಲ್ಲಿ ದಸ್ತಕರ್ ಅವಕಾಶ ನೀಡುತ್ತದೆ. ಈ ಬಾರಿ ಒರಿಸ್ಸಾ ಚಂಡಮಾರುತದಿಂದ ಬಾಧಿತರಾದವರ ಬೆಂಬಲಕ್ಕಾಗಿ ಶ್ರಮವಹಿಸಿದ್ದು ಆ ಪ್ರತ್ಯೇಕ ಮಳಿಗೆಗಳನ್ನು ತೆರೆದಿದೆ.
ಬೆಳ್ಳಿಯ ಆಭರಣ, ಅಲಂಕಾರಿಕ ವಸ್ತುಗಳು ಅಲಂಕಾರಿಕ ವಸ್ತುಗಳು, ಪಾಟರಿ, ಸೆರಾಮಿಕ್, ಪೈಬರ್, ಚರ್ಮೊತ್ಪನ್ನಗಳು, ಸಾಂಪ್ರದಾಯಿಕ ಪೇಟಿಂಗ್, ಎಂರಾಡರಿ, ಪ್ರಿಂಟೆಡ್ ವಸ್ತುಗಳನ್ನು ದೇಶದ ಮೂಲೆ ಮೂಲೆಗಳಿಂದ ಆಯ್ದು ತಂದು ಸಾರ್ವಜನಿಕರಿಗೆ ಪರಿಚಯಿಸುತ್ತದೆ.
ಪ್ರತಿನಿತ್ಯ ಬೆಳಿಗ್ಗೆ 11ರಿಂದ ರಾತ್ರಿ 8ರ ವರೆಗೆ ದಸ್ತಕರ್ ನೇಜರ್ ಬಜಾರ್ ನಂಬರ್-1 ಜಯಮಹಲ್ ರಸ್ತೆ ಕಂಟ್ಮೊಂಟ್ ರೈಲ್ವೆ ನಿಲ್ದಾಣದ ಹಿಂದೆ ಬೆಂಗಳೂರು-46.ಇಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಇತ್ತೀಚೆಗೆ ನಿಧನರಾದ ಗಣ್ಯರಿಗೆ ಭಾವಪೂರ್ಣ ಸಂತಾಪ
ಬೆಂಗಳೂರು,ಜು.12-ಪೌರಾಡಳಿತ ಸಚಿವರಾಗಿದ್ದ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ, ಕೇಂದ್ರದ ಮಾಜಿ ಸಚಿವ ವಿ.ಧನಂಜಯಕುಮಾರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಸೇರಿದಂತೆ ಇತ್ತೀಚೆಗೆ ನಿಧನರಾದ 13 ಮಂದಿ ಗಣ್ಯರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಸಂತಾಪ ಸೂಚಿಸಲಾಯಿತು.
ಇಂದು ಮಧ್ಯಾಹ್ನ ವಂದೇ ಮಾತರಂ ಗೀತೆಯೊಂದಿಗೆ ವಿಧಾನಸಭೆ ಪ್ರಾರಂಭವಾದಾಗ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಸಂತಾಪ ಸೂಚಕ ನಿರ್ಣಯವನ್ನು ಕೈಗೆತ್ತಿಕೊಂಡರು.
ಇತ್ತೀಚೆಗೆ ನಿಧನರಾದ ಪೌರಾಡಳಿತ ಸಚಿವರಾಗಿ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ, ಕೇಂದ್ರ ಮಾಜಿ ಸಚಿವ ವಿ.ಧನಂಜಯಕುಮಾರ್, ವಿಧಾನಸಭೆಯ ಮಾಜಿ ಸದಸ್ಯರಾದ ಕೆ.ಎಲ್.ಶಿವಲಿಂಗೇಗೌಡ, ಎಸ್.ಎಸ್.ಅರಕೇರಿ, ಧಮಯಂತಿ ಭೋರೇಗೌಡ, ಚನ್ನವೀರಯ್ಯ ಶಾಂತಯ್ಯ ಮುತ್ತಿನ ಪೆಂಡಿಮಠ, ಡಾ.ವಿಜಯಕುಮಾರ್ ಖಂಡ್ರೆ, ಭೂಪಾಲ್ ಬಂಡಾರಿ .ಎಚ್, ಶಾರದವ್ವ ಎಂ.ಪಟ್ಟಣ, ಡಾ.ಎನ್.ಬಿ.ನಂಜಪ್ಪ , ಎಂ.ಸತ್ಯನಾರಾಯಣ, ಶಾಂಭಾಜಿ ಲಕ್ಷ್ಮಣ ಪಾಟೀಲ್ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಖಾತ್ಯ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಅವರು ನಿಧನ ಹೊಂದಿರುವುದನ್ನು ಸದನದ ಗಮನಕ್ಕೆ ತಂದರು.
ಸಿ.ಎಸ್.ಶಿವಳ್ಳಿ ಅವರು 1962ರ ಮೇ 6ರಂದು ನವಲಗುಂದ ತಾಲ್ಲೂಕಿನ ಶಲವಡಿ ಗ್ರಾಮದಲ್ಲಿ ಜನಿಸಿದ್ದು, ಬಿಎ ಪಧವಿದರರಾಗಿ, ವೃತ್ತಿಯಲ್ಲಿ ಕೃಷಿಕರಾಗಿದ್ದರು.ರೈತಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಇವರು ಕಳಸಾ ಬಂಡೂರಿ ಜಾರಿಗಾಗಿ ಕುಂದಗೋಳದಿಂದ ಧಾರವಾಡದವರೆಗೆ ಪಾದಯಾತ್ರೆ ಮಾಡಿದ್ದಲ್ಲದೆ ದೆಹಲಿ ಜಂತರ್‍ಮಂತರ್‍ನಲ್ಲಿ ಧರಣಿ ನಡೆಸಿದ್ದರು.
ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು ನಾಲ್ಕು ಭಾರಿ ಆಯ್ಕೆಯಾಗಿದ್ದರು.ಸರಳ ಸಜ್ಜನ ವ್ಯಕ್ತಿಯಾಗಿದ್ದ ಇವರು ಮಾ.22ರಂದು ನಿಧನರಾಗಿದ್ದಾರೆ ಎಂದು ಸಭಾಧ್ಯಕ್ಷರು ತಿಳಿಸಿದರು.
ಕೇಂದ್ರದ ಮಾಜಿ ಸಚಿವ ವಿ.ಧನಂಜಯ್ಯ ಕುಮಾರ್ ಅವರು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದ್ದರು.ಆನಂತರ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ಮಂಗಳೂರು ಕ್ಷೇತ್ರದಿಂದ ವಿಧಾನಸಭೆಗೆ ಹಾಗೂ ಮಂಗಳೂರು ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಕೇಂದ್ರ ಸರ್ಕಾರದಲ್ಲಿ ನಾಗರಿಕ ವಿಮಾನಯಾನ, ಪ್ರವಾಸೋದ್ಯಮ, ಜವಳಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು .ಅವರು ಕಳೆದ ಮಾ.4ರಂದು ನಿಧನ ಹೊಂದಿದ್ದರು ಎಂದು ವಿಷಾದಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಅವರು ಮಹಾರಾಷ್ಟ್ರದ ಮಥೇರ್‍ನಲ್ಲಿ ಜನಿಸಿದ್ದರು. ಆಕ್ಸ್‍ಫರ್ಡ್ ವಿವಿಯಲ್ಲಿ ಎಂಎ ಪದವಿ ಪಡೆದಿದ್ದ ಅವರು ಕರ್ನಾಟಕ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿದ್ದರು. ವೈಚಾರಿಕ ನೆಲೆಗಟ್ಟಿನ ಮೇಲೆ ಸಾಹಿತ್ಯ ರಚಿಸಿರುವ ಅವರು 1998ರಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಪುರಸ್ಕøತರಾಗಿದ್ದರು. ನಾಟಕ, ಸಿನಿಮಾ ರಂಗದಲ್ಲಿ ತಮ್ಮದೇ ವಿಶೇಷ ಛಾಪು ಮೂಡಿಸಿದ್ದ ಅವರು, ಪದ್ಮಶ್ರೀ, ಪದ್ಮಭೂಷಣ, ಕಾಳಿದಾಸ ಸಮ್ಮಾನ್ , ಕರ್ನಾಟಕ ರಾಜ್ಯೋತ್ಸವ ಗುಬ್ಬಿ ವೀರಣ್ಣ ಪ್ರಶಸ್ತಿಗಳು ಭಾಜನರಾಗಿದ್ದರು.
ಪುರಾಣ, ಇತಿಹಾಸ, ಜನಪದಗಳಿಗೆ ಸಮಕಾಲೀನ ರಂಗ ವ್ಯಾಖ್ಯಾನ ನೀಡಿದ ಕಾರ್ನಾಡ್ ಅವರು ವಿವಿಧ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿದ್ದರು.ಪ್ರಗತಿಪರ ಚಿಂತಕರಾಗಿದ್ದ ಅವರು ಜೂ.10ರಲ್ಲಿ ನಿಧನರಾದರು ಎಂದು ಸ್ಮರಿಸಿದರು.
ಇತ್ತೀಚೆಗೆ ನಿಧನರಾದ ಶಿವಲಿಂಗೇಗೌಡ, ಎಸ್.ಎಸ್.ಅರಕೇರಿ, ಧಮಯಂತಿ ಬೋರೇಗೌಡ, ಚನ್ನವೀರಯ್ಯ ಶಾಂತಯ್ಯ ಮುತ್ತಿನ ಪೆಂಡಿಮಠ, ಡಾ.ವಿಜಯಕುಮಾರ್ ಖಂಡ್ರೆ, ಭೂಪಾಲ್ ಬಂಡಾರಿ .ಎಚ್, ಶಾರದವ್ವ ಎಂ.ಪಟ್ಟಣ, ಡಾ.ಎನ್.ಬಿ.ನಂಜಪ್ಪ , ಎಂ.ಸತ್ಯನಾರಾಯಣ, ಶಾಂಭಾಜಿ ಲಕ್ಷ್ಮಣ ಪಾಟೀಲ್ ನಿಧನವನ್ನು ಪ್ರಸ್ತಾಪಿಸಿದ ಸಭಾಧ್ಯಕ್ಷರು ಮೃತರ ಗುಣಗಾನ ಮಾಡಿದರು.
ಸಭಾಧ್ಯಕ್ಷರು ಮಂಡಿಸಿದ ಸಂತಾಪ ಸೂಚಕ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿಎ ಚ್.ಡಿ.ಕುಮಾರಸ್ವಾಮಿ, ಇತ್ತೀಚಿಗೆ ನಿಧನರಾದ ಶಿವಳ್ಳಿ ಅವರು ಜನಪರ ಹೋರಾಟಗಾರರಾಗಿದ್ದರು. ಅವರ ನಿಧನ ತುಂಬ ನೋವುಂಟಾಗಿದೆ ಎಂದರು.
ಮಾಜಿ ಶಾಸಕ ಗೋಪಾಲ ಬಂಡಾರಿ ಅವರು ಸರಳ ಸಜ್ಜನಿಕೆ ರಾಜಕಾರಣಿ.ಸರ್ಕಾರಿ ಬಸ್‍ನಲ್ಲಿ ಪ್ರಯಾಣಿಸುವಾಗ ಮರಣ ಹೊಂದಿರುವುದು ನೋವು ತಂದಿದೆ ಎಂದು ಹೇಳಿದರು.
ಸಾಹಿತಿ ಗಿರೀಶ್ ಕಾರ್ನಾಡ್ ಅವರು ರಾಜ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ.ಅವರು ಇತ್ತೀಚೆಗೆ ನಿಧನದಿಂದ ಸಾಹಿತ್ಯ ಲೋಕ ಬಡವಾಗಿದೆ ಎಂದರು.
ಇತ್ತೀಚೆಗೆ ನಿಧನ ಹೊಂದಿದ ಗಣ್ಯರ ಆತ್ಮಕ್ಕೆ ಚಿರಶಾಂತಿ ಕೋರಿ ಅವರ ಕುಟುಂಬಕ್ಕೆ ದುಃಖಭರಿಸುವ ಶಕ್ತಿ ನೀಡಲಿ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಪೌರಾಡಳಿತ ಸಚಿವರಾಗಿದ್ದ ಶಿವಳ್ಳಿ, ಮಾಜಿ ಸಚಿವ ಧನಂಜಯ್ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರ ಗುಣಗಾನ ಮಾಡಿದರು.
ನಂತರ ಮೃತರ ಗೌರವಾರ್ಥ ಸದನದಲ್ಲಿ ಭಾವಪೂರ್ಣ ಸಂತಾಪ ಸೂಚಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ