ಪತನದಂಚಿಗೆ ತಲುಪಿರುವ ಮೈತ್ರಿ ಸರ್ಕಾರ

ಬೆಂಗಳೂರು,ಜು.11- ಸಮ್ಮಿಶ್ರ ಸರ್ಕಾರ ಅಲ್ಪಮತದತ್ತ ಕುಸಿಯುತ್ತಿದ್ದು, ಪತನದಂಚಿಗೆ ತಲುಪಿದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದ್ದು, ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಮಲ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಇಂದು ಸಂಜೆ ಬಿಜೆಪಿ ಶಾಸಕಾಂಗ ಸಭೆ ಕರೆದಿದ್ದಾರೆ. ಅಲ್ಲದೆ ಯಡಿಯೂರಪ್ಪನವರು ಮತ್ತೊಮ್ಮೆ ರಾಜ್ಯಪಾಲರ ಭೇಟಿಗೆ ತೀರ್ಮಾನ ಮಾಡಿದ್ದಾರೆ.

ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿ ಮಾಡಿ, ಸದ್ಯದ ರಾಜಕೀಯ ಪರಿಸ್ಥಿತಿ ಹದಗೆಟ್ಟಿದ್ದು, ಅದು ಸರಿ ಆಗುವವರೆಗೆ ತಾತ್ಕಾಲಿಕವಾಗಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡುವಂತೆ ಮನವಿ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಒಂದು ವೇಳೆ ರಾಜ್ಯಪಾಲರು, ರಾಷ್ಟ್ರಪತಿಗಳ ಆಳ್ವಿಕೆಗೆ ಶಿಫಾರಸ್ಸು ಮಾಡಿ, ಅದು ಜಾರಿಯಾದಲ್ಲಿ ಮುಂದಿನ ಒಂದು ತಿಂಗಳಲ್ಲಿ ಸರ್ಕಾರ ರಚನೆಗೆ ಬಿಜೆಪಿ ಹಕ್ಕು ಮಂಡಿಸುವ ಸಾಧ್ಯತೆಗಳಿವೆ.
ಸ್ಪೀಕರ್ ರಮೇಶ್ ಕುಮಾರ್ ವಿಳಂಬ ನೀತಿ ಖಂಡಿಸಿ ನಿನ್ನೆ ಪ್ರತಿಭಟನೆ ನಡೆಸಿದ್ದ ಬಿಜೆಪಿ ನಾಯಕರು ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಸಂಖ್ಯಾಬಲವನ್ನು ತೋರಿಸಿದ್ದರು.

ಸಮ್ಮಿಶ್ರ ಸರ್ಕಾರದ 13 ಶಾಸಕರು ರಾಜೀನಾಮೆ ನೀಡಿದ್ದಾರೆ.ಮೈತ್ರಿಗೆ ಬೆಂಬಲ ನೀಡಿದ್ದ ಪಕ್ಷೇತರ ಶಾಸಕರಿಬ್ಬರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷೇತರ ಶಾಸಕರ ಬೆಂಬಲದೊಂದಿಗೆ ನಾವು ಬಹುಮತ ಹೊಂದಿದ್ದೇವೆ ಎಂಬುದನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ ಎಂದು ಬಿಎಸ್‍ವೈ ತಿಳಿಸಿದ್ದರು.
ಸರ್ಕಾರವೇ ಅಲ್ಪಮತಕ್ಕೆ ಕುಸಿದ ಕಾರಣ ಅಧಿವೇಶನ ಹೇಗೆ ನಡೆಸುತ್ತಾರೆ.ಸ್ಪೀಕರ್ ವಿಳಂಬ ನೀತಿಯನ್ನು ಅನುಸರಿಸಬಾರದು.ಸಿಎಂ ಸ್ಥಾನದಲ್ಲಿರಲು ಕುಮಾರಸ್ವಾಮಿ ಅವರಿಗೆ ಯಾವುದೇ ನೈತಿಕತೆ ಇಲ್ಲ. ಹಾಗಾಗಿ ಕೂಡಲೇ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದರು.
ಮೈತ್ರಿ ಸರ್ಕಾರದ ನಡೆ ವಿರುದ್ಧ, ಸಿಎಂ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ, ಸುಧಾಕರ್ ಕೂಡಿ ಹಾಕಿದ್ದನ್ನು ಸಮರ್ಥವಾಗಿ ಬಳಿಸಿಕೊಂಡಿದೆ.ಅತ್ತ ಸ್ಪೀಕರ್ ಭೇಟಿಯಾಗಿ ಅತೃಪ್ತ ಶಾಸಕರ ರಾಜೀನಾಮೆಯನ್ನು ಶೀಘ್ರವೇ ಅಂಗೀಕರಿಸುವಂತೆ ಮನವಿ ಮಾಡಿದೆ. ಅಲ್ಲದೆ, ರಾಜ್ಯಪಾಲರನ್ನೂ ಭೇಟಿ ಮಾಡಿ ಬೇಗನೇ ರಾಜೀನಾಮೆ ಅಂಗೀಕರಿಸಲು ಸ್ಪೀಕರ್‍ಗೆ ಸೂಚಿಸುವಂತೆ ಮನವಿ ಮಾಡಲಿದೆ.

ರಾಜ್ಯಪಾಲರು ಪ್ರಮುಖ ಪಾತ್ರ ವಹಿಸುವ ಸಂದರ್ಭ ಬರುವುದನ್ನೂ ಬಿಜೆಪಿ ಎದುರು ನೋಡುತ್ತಿದ್ದು, ಒಂದು ವೇಳೆ ರಾಜ್ಯಪಾಲರು ಪ್ರಮುಖ ಪಾತ್ರವಹಿಸಿದಲ್ಲಿ ದೆಹಲಿಯ ಬಿಜೆಪಿ ನಾಯಕರು ನೇರವಾಗಿಯೇ ಆಕಾಡಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸರ್ಕಾರ ಬೀಳಿಬೇಕಾದರೆ, ಬಿಜೆಪಿ ಕನಿಷ್ಠ 14 ಶಾಸಕರನ್ನು ತನ್ನತ್ತ ಸೆಳೆದುಕೊಳ್ಳಬೇಕು. ನಂತರ ನಡೆಯುವ ಉಪ ಚುನಾವಣೆಯಲ್ಲಿ ಕನಿಷ್ಠ 8-10 ಸ್ಥಾನ ಗೆಲ್ಲಬೇಕಾಗಿದೆ ಎಂಬ ಸಣ್ಣ ಸತ್ಯ ಬಿಜೆಪಿಗೆ ಚೆನ್ನಾಗಿ ಗೊತ್ತಿದೆ.14 ಅಲ್ಲ 20 ಮಂದಿ ಶಾಸಕರು ರಾಜೀನಾಮೆ ಸಲ್ಲಿಕೆ ಮಾಡಿದರೂ ಎಚ್ಚರಿಕೆ ಹೆಜ್ಜೆಯನು ಇಡಲು ತೀರ್ಮಾನಿಸಿದೆ.

ಹೊಸ ಸರ್ಕಾರದ ಉದಯ, ಮೈತ್ರಿ ಸರ್ಕಾರದ ಪತನ ಎಲ್ಲವೂ ಸ್ಪೀಕರ್ ರಮೇಶ್ ಕುಮಾರ್ ಕೈಲಿದೆ. ಸದ್ಯ ಸರಣಿ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದರೆ ಮಾತ್ರ ಬಿಜೆಪಿ ತನ್ನ ಮುಂದಿನ ಹೆಜ್ಜೆ ಇಡಬಹುದು. ಈಗ ರಾಜೀನಾಮೆ ಸಲ್ಲಿಸಿರುವ ಶಾಸಕರು ಮತ್ತೊಮ್ಮೆ ಸ್ಪೀಕರ್ ಅವರನ್ನು ಭೇಟಿ ಮಾಡಿ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸುವುದು ಅನಿವಾರ್ಯವಾಗಿದೆ.

ಇನ್ನೊಂದೆಡೆ, ಮೈತ್ರಿ ಸರ್ಕಾರವನ್ನು ರಕ್ಷಣೆ ಮಾಡಲು ಎಲ್ಲಾ ಸಚಿವರು ರಾಜೀನಾಮೆ ಪಡೆದು, ಅತೃಪ್ತರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಮತ್ತೊಮ್ಮೆ ಸಂಪುಟ ವಿಸ್ತರಣೆಗೆ ಕುಮಾರಸ್ವಾಮಿ ಮುಂದಾಗಿದ್ದರೂ ಯಾವುದೇ ಪ್ರಯೋಜನ ಆಗಲಿಲ್ಲ. ಒಟ್ಟಾರೆ ಸರ್ಕಾರ ಇಕಟ್ಟಿಗೆ ಸಿಲುಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ