ಅತೃಪ್ತ ಶಾಸಕ ಸೋಮಶೇಖರ್ ಭೇಟಿ ಮಾಡಲು ಯತ್ನಿಸಿದ ಶಿವಕುಮಾರ್

ಬೆಂಗಳೂರು,ಜು.11-ಅತೃಪ್ತ ಶಾಸಕರ ಮನವೊಲಿಸಿ ಬೆಂಗಳೂರಿಗೆ ಕರೆದುಕೊಂಡು ಬರುವ ಸಲುವಾಗಿ ಸಚಿವ ಡಿ.ಕೆ.ಶಿವಕುಮಾರ್ ನಿನ್ನೆ ಮುಂಬೈಗೆ ತೆರಳಿದ್ದ ಪ್ರಯತ್ನ ವಿಫಲವಾದ ಬೆನ್ನಲ್ಲೇ ಬೆಂಗಳೂರಿನಲ್ಲೂ ಮಧ್ಯರಾತ್ರಿ ಸಂಧಾನಕ್ಕೆ ಪ್ರಯತ್ನಿಸಿ ವಿಫಲರಾಗಿದ್ದಾರೆ.

ಕೇವಲ ಮುಂಬೈನಲ್ಲಿ ಮಾತ್ರವಲ್ಲ ಬೆಂಗಳೂರಲ್ಲಿಯೂ ಸಚಿವ ಡಿ.ಕೆ.ಶಿವಕುಮಾರ್ ಅತೃಪ್ತ ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ಭೇಟಿಯಾಗಲು ಪ್ರಯತ್ನಿಸಿದರು.ತಡರಾತ್ರಿ ಎಸ್.ಟಿ.ಸೋಮಶೇಖರ್ ಬೆಂಗಳೂರಿಗೆ ಆಗಮಿಸಿದ ವಿಷಯ ತಿಳಿದ ಕೂಡಲೇ ಶಾಸಕರ ಭೇಟಿಗೆ ಪ್ರಯತ್ನಿಸಿದರು. ಸೋಮಶೇಖರ್ ಭೇಟಿಗಾಗಿ 1 ಗಂಟೆ ಕಾಲ ರಸ್ತೆಯಲ್ಲಿಯೇ ನಿಂತಿದ್ದರು.

ಎಸ್.ಟಿ. ಸೋಮಶೇಖರ್ ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದಾರೆ ಎಂಬ ವಿಷಯ ತಿಳಿದ ತಕ್ಷಣ ಡಿಕೆಶಿ ಬಿಟಿಎಂ ಲೇಔಟ್‍ನಲ್ಲಿರುವ ಅವರ ಮನೆಗೆ ತೆರಳಿದ್ದಾರೆ.ರಾತ್ರಿ 1.30ರಲ್ಲಿ ಡಿಕೆಶಿ ಮನೆಗೆ ಬಂದಿರುವ ವಿಚಾರ ತಿಳಿದ ತಕ್ಷಣ ಎಸ್.ಟಿ.ಸೋಮಶೇಖರ್ ವಿಮಾನ ನಿಲ್ದಾಣದಿಂದ ರಹಸ್ಯ ಸ್ಥಳಕ್ಕೆ ತೆರಳಿದರು. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲದೆ ಡಿಕೆಶಿ ಸೋಮಶೇಖರ್ ಮನೆಯಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಎಲ್ಲಾ ಬಂಡಾಯ ಶಾಸಕರು ನಿನ್ನೆ ರಾತ್ರಿ ಬೆಂಗಳೂರಿಗೆ ತಲುಪಿದ್ದಾರೆ.ಆದರೆ, ಮನೆಯ ಬಳಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಜಮಾಯಿಸುವ ಸಾಧ್ಯತೆಯನ್ನು ಅರಿತು ಎಲ್ಲರೂ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ.ಇನ್ನೂ ಶಾಸಕ ಎಸ್.ಟಿ. ಸೋಮಶೇಖರ್ ಸೇರಿದಂತೆ ಎಲ್ಲಾ ಶಾಸಕರ ಮನೆಗೂ ಬಿಗಿ ಪೆÇಲೀಸ್ ಭದ್ರತೆ ನೀಡಲಾಗಿದೆ.

ಎಸ್.ಟಿ.ಸೋಮಶೇಖರ್ ಆಗಮನಕ್ಕೂ ಮುನ್ನವೇ ವಿಮಾನ ನಿಲ್ದಾಣದಲ್ಲಿ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಕಾಣಿಸಿಕೊಂಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿದೆ. ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳನ್ನು ಕಂಡ ಕೂಡಲೇ ಸೋಮಶೇಖರ್ ಅವರಿಂದ ಎಸ್.ಆರ್.ವಿಶ್ವನಾಥ್ ಅಂತರ ಕಾಯ್ದುಕೊಂಡರು.
ಇತ್ತ ಸೋಮಶೇಖರ್ ಕಾರ್‍ನ್ನು ಹಿಂಬಾಲಿಸಿಕೊಂಡು ಎಸ್.ಆರ್.ವಿಶ್ವನಾಥ್ ಹೋದರು.ಮಾಜಿ ಡಿಸಿಎಂ ಆರ್.ಅಶೋಕ್ ಅವರ ಸುಪರ್ದಿಯಲ್ಲಿಯೇ ಎಸ್.ಟಿ.ಸೋಮಶೇಖರ್ ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ಹೇಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ