ಬೆಂಗಳೂರು,ಜು.11- ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಹಾಲಕ್ಷ್ಮಿಲೇಔಟ್ನ ಗೋಪಾಲಯ್ಯ ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದೆಂದು ರಾಜ್ಯಾಧ್ಯಕ್ಷ ಬಿ.ಎಸ್ಯಡಿಯೂರಪ್ಪನವರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.
ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್ ನೇತೃತ್ವದಲ್ಲಿ ಆಗಮಿಸಿದ ಮಹಾಲಕ್ಷ್ಮಿಲೇಔಟ್ನ 50ಕ್ಕೂ ಹೆಚ್ಚು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗೋಪಾಲಯ್ಯ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದೆಂದು ಒತ್ತಾಯಿಸಿದ್ದಾರೆ.
ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ದೂರು ನೀಡಿದ ಎಸ್.ಹರೀಶ್ ಅವರು ಒಂದು ವೇಳೆ ವಿಧಾನಸಭೆ ಸ್ಪೀಕರ್ ರಮೇಶ್ಕುಮಾರ್ ಅವರು ಗೋಪಾಲಯ್ಯ ನೀಡಿರುವ ರಾಜೀನಾಮೆಯನ್ನು ಅಂಗೀಕಾರ ಮಾಡಿದರೆ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತದೆ.
ಈವರೆಗೂ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾರ್ಯಕರ್ತರ ವಿರುದ್ಧ ಗೋಪಲಯ್ಯ ಸಾಕಷ್ಟು ಕಿರುಕುಳ ನೀಡಿದ್ದಾರೆ.ಕೇವಲ ರಾಜಕೀಯದ ಭವಿಷ್ಯಕ್ಕಾಗಿ ಅವರು ಪಕ್ಷಕ್ಕೆ ಬರುತ್ತಿದ್ದಾರೆ.
ಉಪಚುನಾವಣೆಯಲ್ಲಿ ನಾವು ಅವರನ್ನು ಹೇಗೆ ಬೆಂಬಲಿಸಬೇಕು.ಮಂತ್ರಿ ಸ್ಥಾನದ ಆಸೆಗಾಗಿ ಪಕ್ಷಕ್ಕೆ ಬರುವವರನ್ನು ಸೇರ್ಪಡೆ ಮಾಡಿಕೊಂಡರೆ ನಮ್ಮ ರಾಜಕೀಯ ಭವಿಷ್ಯವೇನು ಎಂದು ಬಿಎಸ್ವೈಗೆ ಪ್ರಶ್ನೆ ಮಾಡಿದರು.
ನಮ್ಮ ಕಾರ್ಯಕರ್ತರಿಗೆ ಹಲವಾರು ವರ್ಷಗಳಿಂದ ಗೋಪಾಲಯ್ಯನವರು ಕಿರುಕುಳ ಕೊಟ್ಟಿದ್ದಾರೆ.ಅವರ ವಿರುದ್ಧ ಹೋರಾಟ ಮಾಡಿದವರು ಈಗಲೂ ಕಾನೂನು ಹೋರಾಟ ಮಾಡುತ್ತಿದ್ದಾರೆ.ಇಂಥವರನ್ನು ಪಕ್ಷಕ್ಕೆ ಬರಮಾಡಿಕೊಂಡರೆ ನಾವು ಬಿಜೆಪಿಯಲ್ಲಿ ಇರಬೇಕೇ ಬೇಡವೇ ಎಂದು ಹರೀಶ್ ಅಸಮಾಧಾನ ಹೊರ ಹಾಕಿದರು.
ನಿಯೋಗದ ದೂರನ್ನು ಸಹನೆಯಿಂದಲೇ ಆಲಿಸಿದ ಬಿಎಸ್ವೈ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆ?ಬೇಡವೇ?ಗೋಪಾಲಯ್ಯ ನೀಡಿರುವ ರಾಜೀನಾಮೆಯನ್ನು ಸ್ಪೀಕರ್ ಇನ್ನು ಅಂಗೀಕಾರವೇ ಮಾಡಿಲ್ಲ. ಒಂದು ವೇಳೆ ಅವರು ಬಂದರೂ ನಿಮ್ಮ ರಾಜಕೀಯ ಭವಿಷ್ಯ ಏನೂ ಆಗುವುದಿಲ್ಲ.
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಕಾರ್ಯಕರ್ತರು ಎದುರು ನೋಡುತ್ತಿದ್ದಾರೆ.ಇಂಥ ಸಂದರ್ಭದಲ್ಲಿ ಪಕ್ಷಕ್ಕೆ ಬರುವವರನ್ನು ವಿರೋಧಿಸುವುದು ಸರಿಯಲ್ಲ. ನಿಮ್ಮನ್ನು ಯಾವುದೇ ಕಾರಣಕ್ಕೂ ಪಕ್ಷದಿಂದಕೈ ಬಿಡುವುದಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ.