ಸದ್ಧು ಗದ್ಧಲವಿಲ್ಲದೆ ನಡೆದ ಆಪರೇಷನ್ ಕಮಲ

ಬೆಂಗಳೂರು, ಜು.6-ರಾಜ್ಯದ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ಆಪರೇಷನ್ ಕಮಲವನ್ನು ಸದ್ದು ಗದ್ದಲವಿಲ್ಲದೆ ನಡೆಸಲಾಗಿದ್ದು, ಶಾಸಕರ ಕುಟುಂಬದ ಸದಸ್ಯರಿಗೂ ಮಾಹಿತಿ ನೀಡದೆ ಶಾಸಕರನ್ನು ನಗರದ ಸೆವೆನ್‍ಸ್ಟಾರ್ ಹೊಟೇಲ್‍ನಲ್ಲಿ ಅಡಗಿಸಿಡಲಾಗಿತ್ತು ಎಂದು ಹೇಳಲಾಗಿದೆ. ಮೊದಲ ಹಂತದಲ್ಲಿ 7 ಮಂದಿ, ಎರಡನೇ ಹಂತದಲ್ಲಿ 5 ಮಂದಿ ಶಾಸಕರನ್ನು ನಗರದ ಯುಬಿ ಸಿಟಿಯಲ್ಲಿರುವ ಹೊಟೇಲ್‍ವೊಂದರಲ್ಲಿ ಇರಿಸಲಾಗಿತ್ತು ಎನ್ನಲಾಗಿದ್ದು, ಬೆಂಗಳೂರಿನ ಜೆಡಿಎಸ್ ಶಾಸಕರೊಬ್ಬರು ತಡರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಬಿಬಿಎಂಪಿ ಸದಸ್ಯರೂ ಆಗಿರುವ ಅವರ ಪತ್ನಿ ಕರೆ ಮಾಡಿದ್ದಾರೆ. ಅದಕ್ಕೆ ಉತ್ತರ ನೀಡಿರುವ ಶಾಸಕರು ನಾನು ಬರುವುದು ತಡವಾಗಬಹುದು. ನನಗಾಗಿ ಕಾಯದೆ ಊಟ ಮಾಡಿ ಮಲಗಿ ಎಂದು ತಿಳಿಸಿದರು ಎನ್ನಲಾಗಿದೆ.

ನಂತರ ಬೆಳಗ್ಗೆಯಾದರೂ ಶಾಸಕರು ಬಾರದಿದ್ದಾಗ ಮತ್ತೆ ಮುಂಜಾನೆ ಪತ್ನಿ ಕರೆ ಮಾಡಿದ್ದಾರೆ. ನಾನು ಮಧ್ಯಾಹ್ನದ ವೇಳೆಗೆ ಮನೆ ಬರುತ್ತೇನೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳಿ ಪೋನ್ ಕಟ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ 12 ಗಂಟೆ ವೇಳೆಗೆ ಮಾಧ್ಯಮದಲ್ಲಿ ಶಾಸಕರು ರಾಜೀನಾಮೆ ನೀಡಲು ಸ್ಪೀಕರ್ ಕಚೇರಿಗೆ ತೆರಳಿರುವ ಸುದ್ದಿ ನೋಡಿ ಪತ್ನಿಯೇ ಹೌಹಾರಿದರು ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ