ಅತೃಪ್ತ ಶಾಸಕರ ರಾಜೀನಾಮೆ ಮಾಹಿತಿ ದೊರೆತ ಹಿನ್ನಲೆ-ತರಾತುರಿಯಲ್ಲಿ ಕಚೇರಿಯಿಂದ ನಿರ್ಗಮಿಸಿದ ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು, ಜು.6-ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು ರಾಜೀನಾಮೆ ನೀಡಲು ವಿಧಾನಸೌಧಕ್ಕೆ ಆಗಮಿಸುತ್ತಿರುವ ಸುದ್ದಿ ಕೇಳುತ್ತಿದ್ದಂತೆ ಸ್ಪೀಕರ್ ರಮೇಶ್‍ಕುಮಾರ್ ಅವರು ಹರಿಬರಿಯಲ್ಲಿ ವಿಧಾನಸೌಧದಿಂದ ನಿರ್ಗಮಿಸಿದರು.

ಬೆಳಿಗ್ಗೆ ಮನೆಯಿಂದ ಹೊರಟ ಸ್ಪೀಕರ್ ರಮೇಶ್‍ಕುಮಾರ್ ಅವರು ಇತ್ತೀಚೆಗೆ ನಿಧನರಾದ ತಮ್ಮ ಸ್ನೇಹಿತರ ಪುಣ್ಯಸ್ಮರಂಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಧಾನಸೌಧಕ್ಕೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಾವ ಶಾಸಕರು ತಮ್ಮನ್ನು ಭೇಟಿ ಮಾಡಲು ಸಮಯ ಕೇಳಿಲ್ಲ. ರಾಜೀನಾಮೆ ವದಂತಿಗಳನ್ನು ಹರಿಬಿಡುವ ಮೂಲಕ ತಮ್ಮ ಮಾರುಕಟ್ಟೆ ದರವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ನಂತರ ಸುಮಾರು 12.30ರ ವೇಳೆಗೆ ಸ್ಪೀಕರ್ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಕುಳಿತಿದ್ದರು.ಸುಮಾರು 8 ರಿಂದ 9 ಮಂದಿ ಶಾಸಕರು ರಾಜೀನಾಮೆ ನೀಡಲು ಬರುತ್ತಿದ್ದಾರೆ ಎಂಬ ಮಾಹಿತಿ ಹರಿದುಬಂತು. ತಕ್ಷಣವೇ ರಮೇಶ್‍ಕುಮಾರ್‍ಅ ವರು ತಮ್ಮ ಕಚೇರಿಯಿಂದ ಹೊರನಡೆದರು.

ಬೆಂಗಳೂರಿನಲ್ಲಿ ಶೀತ ಜಾಸ್ತಿ ಇದೆ. ಇಲ್ಲಿ ಇರಲು ನನಗೆ ಕಷ್ಟವಾಗುತ್ತದೆ. ಹಾಗಾಗಿ ನಾನು ಊರಿಗೆ ತೆರಳುತ್ತಿದ್ದೇನೆ ಎಂದು ಹೇಳಿ ಪಶ್ಚಿಮ ದ್ವಾರದ ಮೂಲಕ ನಿರ್ಗಮಿಸಿದರು. ತದನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದರು ಎಂದು ಹೇಳಲಾಗಿದೆ. ಅದೇ ವೇಳೆಗೆ ಸರಿಯಾಗಿ ಅತೃಪ್ತ ಶಾಸಕರಾದ ಕಾಂಗ್ರೆಸ್‍ನ ಬಿ.ಸಿ.ಪಾಟೀಲ್, ರಮೇಶ್‍ಜಾರಕಿ ಹೊಳಿ, ಪ್ರತಾಪ್‍ಗೌಡ ಪಾಟೀಲ್, ಶಿವರಾಮ ಹೆಬ್ಬಾರ್, ಮಹೇಸ್ ಕುಮಟಳ್ಳಿ, ಜೆಡಿಎಸ್ ಶಾಸಕರಾದ ಗೋಪಾಲಯ್ಯ, ಎಚ್.ವಿಶ್ವನಾಥ್, ನಾರಾಯಣಗೌಡ ಅವರು ವಿಧಾನಸೌಧದ ದಕ್ಷಿಣ ದ್ವಾರದಿಂದ ವಿಧಾನಸೌಧಕ್ಕೆ ಪ್ರವೇಶ ಪಡೆದರು.

ಸ್ಪೀಕರ್ ಅವರು ಕಚೇರಿಯಲ್ಲಿ ಇಲ್ಲದೆ ಇರುವುದನ್ನು ಗಮನಿಸಿದ ಅತೃಪ್ತ ಶಾಸಕರು ವಿಧಾನಸಭೆಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಸ್ಪೀಕರ್ ಅವರನ್ನು ಕರೆಸುವಂತೆ ಕಾರ್ಯದರ್ಶಿಯವರ ಮೇಲೆ ಒತ್ತಡ ಹಾಕಿದರು.

ಆದರೆ ರಮೇಶ್‍ಕುಮಾರ್ ಅವರಿಗೆ ಕಾಂಗ್ರೆಸ್‍ನ ಉನ್ನತ ನಾಐಕರೊಬ್ಬರು ಕರೆ ಮಾಡಿ ಮಾತುಕತೆ ನಡೆಸಿದದ್ದರು ಎಂದು ಹೇಳಲಾಗಿದ್ದು,ಅದರಿಂದಾಗಿ ರಮೇಶ್‍ಕುಮಾರ್ ಪರಿಚಯದವರನ್ನು ನೋಡಲಿಕ್ಕೆ ಜಯದೇವ ಆಸ್ಪತ್ರೆಗೆ ತೆರಳಿರುವುದಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ