ನವದೆಹಲಿ, ಜು.5-ಪ್ರಸಕ್ತ ವರ್ಷದಲ್ಲಿ 3 ಟ್ರಿಲಿಯನ್ ಆರ್ಥಿಕತೆಯನ್ನು ಹೊಂದುವ ಮೂಲಕ ವಿಶ್ವದ ಬಲಾಢ್ಯ ಆರ್ಥಿಕ ರಾಷ್ಟ್ರಗಳಲ್ಲಿ ಆರನೇ ಸ್ಥಾನದಲ್ಲಿರುವ ಭಾರತ, ಮುಂದಿನ ಕೆಲವೇ ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಲಿದೆ ಎಂದು ಕೇಂದ್ರ ವಿತ್ತೀಯ ಸಚಿವರಾದ ನಿರ್ಮಲಾಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿಂದು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ ಅವರು, ಆರಂಭದಲ್ಲೇ ಸಂಸ್ಕøತ ಶ್ಲೋಕ ಮತ್ತು ಉರ್ದು ಶಾಯರಿಗಳನ್ನು ವಾಚಿಸುವ ಮೂಲಕ ಬಜೆಟ್ ಮಂಡನೆಗೆ ಸುಮಧುರ ವಾತಾವರಣ ಸೃಷ್ಟಿಸಿದರು.
ಭಾರತದ ಆರ್ಥಿಕತೆ ಕಳೆದ 55 ವರ್ಷಗಳಲ್ಲಿ ಒಂದು ಟ್ರಿಲಿಯನ್ ಡಾಲರ್ನಷ್ಟು ಬೆಳೆದಿದೆ. ಕಳೆದ ಐದು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಒಂದೇ ವರ್ಷದಲ್ಲಿ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಿದೆ. ಪ್ರಸ್ತುತ ಭಾರತದ ಆರ್ಥಿಕತೆ 2.7ಟ್ರಿಲಿಯನ್ ಡಾಲರ್ನಷ್ಟಿದೆ. ಚೀನಾ, ಅಮೆರಿಕ ನಂತರದ ಆರನೇ ಸ್ಥಾನದಲ್ಲಿರುವ ಭಾರತ ಕಳೆದ 5 ವರ್ಷಗಳ ಹಿಂದೆ ವಿಶ್ವದ ಬಲಾಢ್ಯ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ 11 ಸ್ಥಾನದಲ್ಲಿತ್ತು ಎಂದು ವಿವರಿಸಿದರು.
ಮುಂದಿನ 2024ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ನ ಆರ್ಥಿಕತೆಯ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಇದಕ್ಕಾಗಿ ಆಶಾ-ವಿಶ್ವಾಸ್-ಆಕಾಂಕ್ಷ ಭಾವನೆಯೊಂದಿಗೆ ಕೆಲಸ ಮಾಡುತ್ತೇವೆ. ಅಚ್ಚರಿಯ ಸಾಧನೆಗಳೊಂದಿಗೆ ನಮ್ಮ ಉದ್ದೇಶ ಈಡೇರಲಿದೆ. ಬದ್ಧತೆಯಿಂದ ನಾಯಕತ್ವ ಹೊಂದಿರುವ ನಮ್ಮ ಸರ್ಕಾರ ಮಹಿಳೆಯರ ಘನತೆ ರಕ್ಷಣೆ, ವಿದ್ಯುತ್ ಸಂಪರ್ಕ, ಮೂಲ ಸೌಕರ್ಯಾಭಿವೃದ್ಧಿ, ಡಿಜಿಟಲ್ ಆರ್ಥಿಕತೆ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ ಎಂದು ಹೇಳಿದರು.