ಬೆಂಗಳೂರು, ಜೂ.25-ರಾಜ್ಯದ ರಾಜಧಾನಿ ಬೆಂಗಳೂರಿನ ರಸ್ತೆಗಳು ಯಮಸ್ವರೂಪಿಯಾಗಿದ್ದು, ದಿನೇ ದಿನೇ ಅಪಘಾತಗಳು ಹೆಚ್ಚುತ್ತಲೇ ಇವೆ. ಇದರ ಸಮಗ್ರ ಅಧ್ಯಯನ ಮಾಡಿರುವ ನಗರ ಪೊಲೀಸರು ಬಿಬಿಎಂಪಿಗೆ ಬ್ಲಾಕ್ಸ್ಪಾಟ್ಗಳನ್ನು ಗುರುತಿಸಿ ವರದಿ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಗಿರುವ ಅಪಘಾತಗಳ ಮಾಹಿತಿ ಕಲೆ ಹಾಕಿ ಪ್ರತಿ ಠಾಣೆ ವ್ಯಾಪ್ತಿಯಲ್ಲಿನ ಬ್ಲಾಕ್ಸ್ಪಾಟ್ಗಳನ್ನು ಪೊಲೀಸರು ಗುರುತಿಸಿದ್ದಾರೆ.
ಬ್ಲಾಕ್ಸ್ಪಾಟ್ ಎಂದರೆ ಅತಿ ಹೆಚ್ಚು ಅಪಘಾತದ ಪ್ರದೇಶ. ಇಂತಹ ಕಡೆ ತಿಂಗಳಿಗೆ ಕನಿಷ್ಠ ಮೂರು ಸಾವುಗಳು ಸಂಭವಿಸುತ್ತಿದ್ದು, ಬ್ಲಾಕ್ಸ್ಪಾಟ್ಗಳ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸಿ ಬಿಬಿಎಂಪಿಗೆ ವರದಿ ನೀಡಿದ್ದಾರೆ.
ಈ ವರದಿ ಪ್ರಕಾರ, ನಗರದಲ್ಲಿ 39 ಬ್ಲಾಕ್ಸ್ಪಾಟ್ಗಳಿವೆ. ಈ ಬ್ಲಾಕ್ಸ್ಪಾಟ್ಗಳಲ್ಲಿ ಪ್ರತಿ ತಿಂಗಳು ಮೂರು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂಬುದು ಆಘಾತಕಾರಿ ವಿಷಯವಾಗಿದೆ.
ಬಾಣಸವಾಡಿ, ಹಲಸೂರು, ಕೆಆರ್ ಪುರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ರಸ್ತೆಗಳು ಯಮಸ್ವರೂಪಿಯಾಗಿವೆ. ಎಲೆಕ್ಟ್ರಾನಿಕ್ ಸಿಟಿ, ಏರ್ಪೋರ್ಟ್, ವೈಟ್ಫೀಲ್ಡ್ ರಸ್ತೆ, ಹುಳಿಮಾವು, ಎಚ್ಎಸ್ಆರ್ ಲೇಔಟ್, ಯಶವಂತಪುರ ರಸ್ತೆ ಹಾಗೂ ತುಮಕೂರು, ಮೈಸೂರು, ಕೆಂಗೇರಿ, ಪೀಣ್ಯ ರಸ್ತೆಗಳೂ ಕೂಡ ಸವಾರರಿಗೆ ಯಮಸ್ವರೂಪಿಯಾಗಿರುವ ಡೇಂಜರಸ್ ರಸ್ತೆಗಳಾಗಿ ಮಾರ್ಪಟ್ಟಿವೆ.
ಈ ಬ್ಲಾಕ್ಸ್ಪಾಟ್ಗಳಲ್ಲಿ ತಿಂಗಳಲ್ಲಿ ಮೂರು ಮಂದಿ ಸಾವನ್ನಪ್ಪುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಗಾಯಗೊಳ್ಳುವವರ ಸಂಖ್ಯೆಗಂತೂ ಲೆಕ್ಕವೇ ಇಲ್ಲದಂತಾಗಿದೆ. ಕೂಡಲೇ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಅಪಘಾತಗಳಿಗೆ ಮುಕ್ತಿ ಹಾಡದಿದ್ದರೆ ಬಿಬಿಎಂಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತರು ಎಚ್ಚರಿಸಿದ್ದಾರೆ.
ಬೆಚ್ಚಿಬಿದ್ದ ಮೇಯರ್: ಬ್ಲಾಕ್ಸ್ಪಾಟ್ಗಳ ವರದಿ ನೋಡುತ್ತಿದ್ದಂತೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ನಗರದಲ್ಲಿ ಪೊಲೀಸರು ಗುರುತಿಸಿರುವ 39 ಬ್ಲಾಕ್ಸ್ಪಾಟ್ಗಳನ್ನು ಮುಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇತ್ತ ವಕೀಲ ಉಮೇಶ್ ಅವರು ಬಿಬಿಎಂಪಿ ವಿರುದ್ಧ ಪಿಐಎಲ್ ಸಲ್ಲಿಸಲು ನಿರ್ಧರಿಸಿದ್ದಾರೆ.
ಬ್ಲಾಕ್ಸ್ಪಾಟ್ಗಳು: ಬಾಣಸವಾಡಿ, ಬಾಬುಸಾಬ್ಪಾಳ್ಯ ಬಸ್ ನಿಲ್ದಾಣ ರಸ್ತೆ, ಹೊರವರ್ತುಲ ರಸ್ತೆ, ಕ್ರೋಮಾ ಶೋರೂಂ ಎದುರಿನ ರಸ್ತೆ, ಭೀಮಾ ಜ್ಯುವೆಲರ್ಸ್ ಎದುರಿನ ರಸ್ತೆ, ಕೆಇಬಿ ಜಂಕ್ಷನ್ ರಸ್ತೆ, ಹಲಸೂರು-ಕೋರಮಂಗಲ ಇನ್ನರ್ ರಿಂಗ್ರಸ್ತೆ, ಹಳೆ ಏರ್ಪೋರ್ಟ್ ರೋಡ್, ಕೆಆರ್ ಪುರ-ಕೆಆರ್ ಪುರ ಯು ಟರ್ನ್ನಿಂದ ಮೇಡಳ್ಳಿ ಬ್ರಿಡ್ಜ್ ರಸ್ತೆ, ಲೌರಿ ಸ್ಕೂಲ್ ಜಂಕ್ಷನ್ನಿಂದ ದೊಡ್ಡನೆಕ್ಕುಂದಿವರೆಗಿನ ರಸ್ತೆ, ಕಸ್ತೂರಿ ನಗರದಿಂದ ಎಸ್ಆರ್ ಕನ್ವೆನ್ಷನ್ ಹಾಲ್ವರೆಗಿನ ರಸ್ತೆ, ಮಡಿವಾಳ, ಹೊಸೂರು ಮುಖ್ಯರಸ್ತೆ-ಸಿಲ್ಕ್ಬೋರ್ಡ್ ಫ್ಲೈ ಓವರ್, ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್, ವಿಮಾನ ನಿಲ್ದಾಣ, ಮಲ್ಟಿಪ್ಲೆಕ್ಸ್ ನಿಲ್ದಾಣ, ಕಾರ್ತಿಕ್ನಗರ ರಸ್ತೆ, ವೈಟ್ಫೀಲ್ಡ್, ಜೆಪಿ ಮಾರ್ಗ-ನ್ಯೂ ಹ್ಯಾರಿಜನ್ ಕಾಲೇಜು ರಸ್ತೆ, ಸ್ಟರ್ಲಿಂಗ್ ಪ್ರಾಜೆಕ್ಟ್ ಕಚೇರಿಯಿಂದ ವರ್ತೂರು ಕೆರೆ ಏರಿ ರಸ್ತೆ, ಹುಳಿಮಾವು-ಹೊಸೂರು ರಸ್ತೆ, ಸಿಂಗಸಂದ್ರ ರಸ್ತೆ, ಎಚ್ಎಸ್ಆರ್ ಲೇಔಟ್ ಔಟರ್ ರಸ್ತೆ, ಆರ್ಎಂಸಿ ಯಾರ್ಡ್ ರಸ್ತೆ, ಉಪ್ಪಾರಪೇಟೆ ಪೊಲೀಸ್ ಸ್ಟೇಷನ್ ರಸ್ತೆ, ಚಿಕ್ಕಪೇಟೆ-ಗುಬ್ಬಿ ತೋಟದಪ್ಪ ರಸ್ತೆ, ಸಿಟಿ ಮಾರುಕಟ್ಟೆ ಫ್ಲೈ ಓವರ್ ರಸ್ತೆ, ಬ್ಯಾಟರಾಯನಪುರ-ಕೆಎಸ್ಆರ್ಟಿಸಿ ಜಂಕ್ಷನ್-ನಾಗರಬಾವಿ ಸುವರ್ಣ ಲೇಔಟ್, ಮೈಸೂರು ರಿಂಗ್ ರಸ್ತೆ ಜಂಕ್ಷನ್, ಕಾಮಾಕ್ಷಿಪಾಳ್ಯ-ಕೊಟ್ಟಿಗೆಪಾಳ್ಯ ಬಸ್ ನಿಲ್ದಾಣ ರಸ್ತೆ, ಕೆಂಗೇರಿ-ಮೈಸೂರು ರಸ್ತೆ-ಆರ್ವಿ ಕಾಲೇಜು ರಸ್ತೆ, ಪೀಣ್ಯ ಚೊಕ್ಕಸಂದ್ರ ಜಂಕ್ಷನ್, ತುಮಕೂರು ರಸ್ತೆ ಟೋಲ್, ವಿವಿ ಪುರಂ-ಅನ್ನಪೂರ್ಣ ಜಂಕ್ಷನ್, ಕಲಾಸಿಪಾಳ್ಯ ಮುಖ್ಯರಸ್ತೆ, ಜೆಸಿ ರಸ್ತೆ, ಮಿನರ್ವ ಜಂಕ್ಷನ್ನಿಂದ ಕಾಮತ್ ಹೊಟೇಲ್ವರೆಗಿನ ರಸ್ತೆ, ಜಯನಗರ 15ನೆ ಅಡ್ಡರಸ್ತೆ, ಕೆಎಸ್ ಲೇಔಟ್-ನೈಸ್ ರಸ್ತೆ, ನಾಗೇಗೌಡನ ಪಾಳ್ಯ, ನೈಸ್ ರಸ್ತೆ ಪೂರ್ವಾಂಕುರ, ಯಲಹಂಕ-ಬಿಬಿ ರಸ್ತೆ, ಪಾಲನಹಳ್ಳಿ ಗೇಟ್, ಏರೋಡ್ರಮ್ ರಸ್ತೆ, ಚಿಕ್ಕಜಾಲ- ಬಿಬಿ ರಸ್ತೆ, ಮೀನಕುಂಟೆ- ಹೊಸೂರು ಕ್ರಾಸ್, ಬೆಟ್ಟಹಲಸೂರು ಕ್ರಾಸ್, ಕೆಂಪೇಗೌಡ ವಿಮಾನ ರಸ್ತೆ, ಕನ್ನಮಂಗಲ ಗೇಟ್, ಹೆಬ್ಬಾಳ-ಭದ್ರಪ್ಪ ಲೇಔಟ್ ಸೇರಿದಂತೆ ವಿವಿಧೆಡೆ 39 ಬ್ಲಾಕ್ಸ್ಪಾಟ್ಗಳನ್ನು ಗುರುತಿಸಲಾಗಿದೆ.