ಎಸ್‍ಐಟಿಯಿಂದ ಮಹತ್ವದ ಮಾಹಿತಿಗಳ ಕಲೆ

ಬೆಂಗಳೂರು, ಜೂ.25- ಐಎಂಎ ಜುವೆಲ್ಸ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಐಟಿ ಅಧಿಕಾರಿಗಳ ತಂಡ ಹಲವು ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದು, ವಂಚಕ ಮಹಮದ್ ಮನ್ಸೂರ್ ಖಾನ್ ಮೂರು ದಿನಗಳಲ್ಲಿ 35 ಕೆಜಿ ಚಿನ್ನ ಕರಗಿಸಿರುವುದನ್ನು ಪತ್ತೆಹಚ್ಚಿದ್ದಾರೆ.

ಬಹುಕೋಟಿ ವಂಚನೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಇದ್ದು , ಮನ್ಸೂರ್ ಖಾನ್ ಮೊದಲೇ ಪ್ಲಾನ್ ಮಾಡಿಕೊಂಡು ಕಂಪನಿಯ ನಿರ್ದೇಶಕರಿಗೂ ತನಗೆ ಬೇಕಾದಷ್ಟು ಹಣದೊಂದಿಗೆ ಮಂಕು ಬೂದಿ ಎಚ್ಚರಚಿ ತಲೆಮರೆಸಿಕೊಂಡಿರುವ ಸಾಧ್ಯತೆ ಇದೆ.

ಅಂದುಕೊಂಡಂತೆ ಜೂ.4ರಂದು ಐಎಂಎ ಜುವೆಲ್ಸ್ ಕಚೇರಿಗೆ ಬಂದಿದ್ದ ಮಾಲೀಕ ಮಹಮದ್ ಮನ್ಸೂರ್ ಜೂ.5ರಿಂದ 10ರವರೆಗೆ ಕರೆದು ಸಭೆ ನಡೆಸಿ ರಂಜಾನ್ ನಿಮಿತ್ತ ಜೂ.5ರಿಂದ 10ರವರೆಗೆ ರಜೆ ಎಂದು ಘೋಷಿಸಿ ಎಲ್ಲರನ್ನು ಕಳುಹಿಸಿದ್ದರು.

ತದನಂತರ ಜೂ.5ರಂದು ಒಬ್ಬ ವ್ಯಕ್ತಿಯೊಂದಿಗೆ ಕಚೇರಿಗೆ ಬಂದಿದ್ದ ಮನ್ಸೂರ್ 8ರವರೆಗೆ ಮೂರು ದಿನಗಳ ಕಾಲ ಐಎಂಎ ಜುವೆಲ್ಸ್‍ನ 4ನೇ ಮಹಡಿಯಲ್ಲಿ ಸುಮಾರು 35 ಕೆಜಿ ಚಿನ್ನ ಕರಗಿಸಿ ಗಟ್ಟಿ ಮಾಡಿಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ.

ಕರಗಿಸಿದ ಚಿನ್ನದ ಗಟ್ಟಿಯನ್ನು ಬೇರೆಡೆ ಸಾಗಿಸಿರುವ ಮನ್ಸೂರ್, ಏರ್ಪೋರ್ಟ್ ಮೂಲಕ ಹಣ ಸಾಗಿಸುವುದು ಅಸಾಧ್ಯವೆಂದು ಅರಿತು ಹವಾಲ ಮೂಲಕ ಹಣವನ್ನು ದುಬೈಗೆ ರವಾನಿಸಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಇದುವರೆಗೂ ಎಸ್‍ಐಟಿ ತನಿಖಾ ತಂಡ ಜಯನಗರ ಹಾಗೂ ಲೇಡಿ ಕರ್ಜನ್ ರಸ್ತೆಯ ಐಎಂಎ ಜುವೆಲ್ಸ್ ಮಳಿಗೆಗಳ ಬೀಗ ತೆರೆದು ಚಿನ್ನಾಭರಣ, ವಜ್ರಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 50 ಕೋಟಿ ರೂ. ದಾಟಿದೆ.

ಅಲ್ಲದೆ ಮಳಿಗೆಗಳಲ್ಲಿ ದೊರೆತಿರುವ ಆಸ್ತಿ ಪತ್ರಗಳು, ವಿವಿಧ ದಾಖಲೆ ಪತ್ರಗಳನ್ನು ಎಸ್‍ಐಟಿ ವಶಕ್ಕೆ ಪಡೆದುಕೊಂಡಿದೆ. ಈ ನಡುವೆ ಆರೋಪಿ ಮಹಮ್ಮದ್ ಮನ್ಸೂರ್ ದುಬೈನ ಗೌಪ್ಯ ಸ್ಥಳದಲ್ಲಿ ಅಡಗಿಕುಳಿತು ಬಿಡುಗಡೆ ಮಾಡಿರುವ ವಿಡಿಯೋದಲ್ಲಿನ ಅಂಶಗಳನ್ನು ಗಂಭೀರವಾಗಿ ಎಸ್‍ಐಟಿ ಪರಿಗಣಿಸಿದ್ದು, ಅದರಲ್ಲಿದ್ದ ಸತ್ಯಾಸತ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ