ಬೆಂಗಳೂರು, ಜೂ.18- ಪಕ್ಷದ ಚಟುವಟಿಕೆಗಳು, ಸಂಘಟನೆ, ಸದಸ್ಯತ್ವ ಅಭಿಯಾನ ಸೇರಿದಂತೆ ಕೆಲವು ಮಹತ್ವದ ವಿಷಯಗಳ ಬೆಳವಣಿಗೆಗಳ ಬಗ್ಗೆ ಆರ್‍ಎಸ್‍ಎಸ್ ನಾಯಕರ ಜತೆ ಬಿಜೆಪಿ ಮುಖಂಡರು ಮಹತ್ವದ ಮಾತುಕತೆ ನಡೆಸಿದ್ದರು.
ಚಾಮರಾಜನಗರದ ಕೇಶವಕೃಪದಲ್ಲಿ ನಡೆದ ಈ ಸಭೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಮುಖಂಡರಾದ ಆರ್.ಅಶೋಕ್, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಅರವಿಂದ ಲಿಂಬಾವಳಿ, ಎನ್.ರವಿಕುಮಾರ್ ಸೇರಿದಂತೆ ಕೆಲವೇ ಕೆಲವು ಮುಖಂಡರು ಮಾತ್ರ ಹಾಜರಾಗಿದ್ದರು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆಯಲ್ಲಿ ಆರ್‍ಎಸ್‍ಎಸ್ ವರಿಷ್ಠರಿಗೆ ಕಳೆದ ಮೂರು ತಿಂಗಳಿನಿಂದ ನಡೆದಿರುವ ಪಕ್ಷದ ಚಟುವಟಿಕೆಗಳು, ಸಂಘಟನೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಇದೊಂದು ಮುಂದುವರಿದ ಸಭೆ ಎನ್ನಲಾಗಿದ್ದು, ಬಿಜೆಪಿ ಹಮ್ಮಿಕೊಂಡಿರುವ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಆರ್‍ಎಸ್‍ಎಸ್ ನಾಯಕರ ಸಲಹೆ ಪಡೆಯಲಾಗಿದೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಆರ್‍ಎಸ್‍ಎಸ್ ಬಿಜೆಪಿ ಬೆಂಬಲಕ್ಕೆ ಬಲವಾಗಿ ನಿಂತಿದ್ದರಿಂದಲೇ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಯಿತು.
ಪಕ್ಷದ ಗೆಲುವಿಗೆ ಎಲ್ಲ ರೀತಿಯ ಸಹಕಾರ ಕೊಟ್ಟ ಸಂಘ ಪರಿವಾರದ ನಾಯಕರಿಗೆ ಬಿಜೆಪಿ ಮುಖಂಡರು ಇದೇ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.
ಜತೆಗೆ ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಇದೀಗ ಬಿಜೆಪಿ ಶಕ್ತಿ ಯಾವ ಕಡೆ ಕುಂದಿದೆಯೋ ಅಂತಹ ಕಡೆ ಇನ್ನಷ್ಟು ಬಲ ಪಡಿಸುವ ಬಗ್ಗೆಯೂ ಸಲಹೆ ಪಡೆಯಲಾಗಿದೆ.
ವಿಶೇಷವಾಗಿ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಕಂಡ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾಸನ ಮತ್ತಿತರ ಕಡೆ ಸಂಘಟನೆಯನ್ನು ಅತ್ಯಂತ ಪ್ರಬಲವಾಗಿ ವಿಸ್ತಾರ ಮಾಡುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬಿಜೆಪಿ ರಾಷ್ಟ್ರಾದ್ಯಂತ ಹಮ್ಮಿಕೊಂಡಿರುವ ಸದಸ್ಯತ್ವ ಅಭಿಯಾನವನ್ನು ಸವಾಲಾಗಿ ತೆಗೆದುಕೊಂಡಿರುವ ಪಕ್ಷಕ್ಕೆ ಹೆಚ್ಚಿನ ಸದಸ್ಯರನ್ನು ಮಾಡುವ ಬಗ್ಗೆಯೂ ಚರ್ಚಿಸಲಾಗಿದೆ.
ಈ ಹಿಂದೆ ಸದಸ್ಯತ್ವ ಅಭಿಯಾನ ಸಂಘ ಪರಿವಾರದ ನಾಯಕರು ಸಕ್ರಿಯವಾಗಿ ತೊಡಗಿಕೊಂಡಿದ್ದರಿಂದ ಯಶಸ್ವಿಯಾಗಿ ನಡೆದಿತ್ತು.ಇದೀಗ ಈ ಅಭಿಯಾನಕ್ಕೆ ಆರ್‍ಎಸ್‍ಎಸ್ ಕಾರ್ಯಕರ್ತರನ್ನು ಬಳಸಿಕೊಂಡು ಅಭಿಯಾನವನ್ನು ಸಮರ್ಪಕವಾಗಿ ನಡೆಸಬೇಕೆಂಬ ಸಲಹೆ ಕೇಳಿಬಂದಿದೆ.
ಅಭಿಯಾನಕ್ಕೆ ಚಾಲನೆ ಕೊಡುತ್ತಿದ್ದಂತೆ ರಾಜ್ಯದಲ್ಲೂ ಮನೆ ಮನೆಗೆ ತೆರಳಿ ಕಾರ್ಯಕರ್ತರನ್ನು ಸದಸ್ಯರನ್ನಾಗಿ ಮಾಡಬೇಕು, ಕನಿಷ್ಟ ಪಕ್ಷ ರಾಜ್ಯದಲ್ಲಿ 50 ಲಕ್ಷ ಹೊಸ ಸದಸ್ಯರನ್ನು ಪಕ್ಷದ ಸದಸ್ಯರನ್ನಾಗಿ ಮಾಡುವ ಗುರಿ ಹೊಂದಲಾಗಿದೆ.