ಸಿಎಂ ಕುಮಾರಸ್ವಾಮಿ ಹೊಣೆಗೇಡಿತನದಿಂದ ಮಾತನಾಡುವುದು ಸರಿಯಿಲ್ಲ-ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು, ಜೂ.18- ತಾವು ಸಿಎಂ ಆಗಿದ್ದಾಗ ಜಿಂದಾಲ್ ಕಂಪೆನಿಯಿಂದ 20 ಕೋಟಿ ಚೆಕ್ ಪಡೆಯಲಾಗಿತ್ತೆಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಈ ಸಂಬಂಧ ಯಡಿಯೂರಪ್ಪನವರು ಟ್ವಿಟರ್‍ನಲ್ಲಿ ಕುಮಾರಸ್ವಾಮಿ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ.

ಮುಖ್ಯಮಂತ್ರಿ ಸ್ಥಾನದಲ್ಲಿದ್ದು, ಹೊಣೆಗೇಡಿತನದಿಂದ ಮಾತನಾಡುವುದು ಸರಿಯಲ್ಲ. ಸಿಬಿಐ ನ್ಯಾಯಾಲಯ ನನ್ನನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿದೆ. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವಂತೆ ಹಗುರವಾಗಿ ಮಾತನಾಡಬೇಡಿ. ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲರಾಗಿ ದಿಕ್ಕೆಟ್ಟಿರುವ ನೀವು ನಿಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ವ್ಯರ್ಥ ಪ್ರಯತ್ನ ಮಾಡಬೇಡಿ ಎಂದು ತಿರುಗೇಟು ನೀಡಿದ್ದರು.

ನಿನ್ನೆ ಚನ್ನಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಂದಾಲ್ ಕಂಪೆನಿಯಿಂದ 20 ಕೋಟಿ ಹಣವನ್ನು ಪಡೆದಿದ್ದರು. ಇದರ ದಾಖಲೆಯನ್ನು ನಾನೇ ಬಿಡುಗಡೆ ಮಾಡಿದ್ದೆ ಎಂದು ಗಂಭೀರ ಆರೋಪ ಮಾಡಿದ್ದರು.

ಜಿಂದಾಲ್ ಕಂಪೆನಿಗೆ ಜಮೀನು ಪರಭಾರೆ ಮಾಡುವ ವಿಷಯದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಸಂಘರ್ಷವೇ ಏರ್ಪಟ್ಟಿದೆ. ಜಮೀನು ನೀಡಬಾರದೆಂದು ಬಿಜೆಪಿ ಎರಡು ದಿನಗಳ ಅಹೋರಾತ್ರಿ ಪ್ರತಿಭಟನೆ ನಡೆಸಿತ್ತು. ಇದಕ್ಕೆ ಕುಮಾರಸ್ವಾಮಿ ತೀವ್ರವಾಗಿ ಕಿಡಿಕಾರಿದ್ದರು.

ನಿಮ್ಮ ಜತೆ ಬರಗಾಲ, ರೈತರ ಸಾಲಮನ್ನಾ, ಜಿಂದಾಲ್ ಕಂಪೆನಿಗೆ ಜಮೀನು ನೀಡಿರುವುದು ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ಸಿದ್ಧನಿದ್ದೇನೆ. ಸಮಯ, ಸ್ಥಳ ನಿಗದಿಪಡಿಸಿಕೊಳ್ಳಿ ಎಂದು ಸವಾಲು ಹಾಕಿದ್ದರು.

ಆದರೆ, ಈ ಸವಾಲಿಗೆ ಬಿಜೆಪಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ