ಬೆಂಗಳೂರು: ಶಾಸಕ ರೋಷನ್ ಬೇಗ್ ಅವರು ನನ್ನಿಂದ ಹಣ ಪಡೆದು ಕೊಡದೆ ರೌಡಿಗಳನ್ನು ಬಿಟ್ಟು ಹೆದರಿಸುತ್ತಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇರುವುದರಿಂದ ತಲೆಮರೆಸಿಕೊಂಡಿದ್ದೇವೆ ಎಂದು ವಿಡಿಯೋ ಮಾಡಿ ನಾಪತ್ತೆಯಾಗಿರುವ ಐಎಂಎ ಜ್ಯುವೆಲರಿ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್ ಅವರಿಗೆ ಸಚಿವ ಜಮೀರ್ ಅಹಮ್ಮದ್ ಖಾನ್ ದೈರ್ಯ ತುಂಬಿದ್ದಾರೆ.
ಘಟನೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಜಮೀರ್, “ಮನ್ಸೂರ್ ನೀವು ಯಾರಿಗೂ ಹೆದರಬೇಡಿ. ಬನ್ನಿ ಮಾತನಾಡೋಣ. ನಾವು ನಿಮ್ಮ ಜೊತೆ ಇದ್ದೇವೆ. ಸರ್ಕಾರ ನಿಮ್ಮ ಜೊತೆ ಇದೆ. ನಿಮಗೆ ಯಾರು ಬೆದರಿಕೆ ಹಾಕಿದ್ದಾರೆ ಹೇಳಿ. ಯಾವ ಅಧಿಕಾರಿಗಳು, ರಾಜಕಾರಣಿಗಳು ಬೆದರಿಕೆ ಹಾಕಿದ್ದಾರೆ ಹೇಳಿ. ಆಗಿದ್ದು ಆಗಿ ಹೋಗಿದೆ. ಬಡವರ ಹಣ ವಾಪಸ್ ನೀಡಿ. ಬಡವರ ಹಣ ಬೇರೆಯವರಿಗೆ ಯಾಕೆ ಹೋಗಬೇಕು. ಬಂದು ಅವರ ಹಣ ವಾಪಸ್ ನೀಡಿ. ನೀವು ಯಾರಿಗೂ ಹೆದರಬೇಡಿ, ಯಾವ ರಾಜಕಾರಣಿಗೆ ಹಣ ನೀಡಿದ್ದಿರಾ ಹೇಳಿ ವಸೂಲಿ ಮಾಡೋಣ,” ಎಂದು ಹೇಳಿದ್ದಾರೆ.
ಐಎಂಎ ಜ್ಯುವೆಲರಿಯಲ್ಲಿ ಸಾವಿರಾರು ಜನರು ಹಣ ಮಾಡಿದ್ದಾರೆ. ಈ ಮಧ್ಯೆ ನಾಪತ್ತೆಯಾಗಿರುವ ಜ್ಯುವೆಲರಿ ಮಾಲೀಕ ಮನ್ಸೂರ್, ತನಗೆ ಶಾಸಕ ರೋಷನ್ ಬೇಗ್ ನನ್ನಿಂದ ಪಡೆದಿರುವ 400 ಕೋಟಿ ಹಣ ನೀಡದೆ ಬೆದರಿಕೆ ಹಾಕುತ್ತಿದ್ದಾರೆ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಿಡಿಯೋ ಮಾಡಿ ಪೊಲೀಸ್ ಕಮಿಷನರ್ಗೆ ಕಳುಹಿಸಿದ್ದರು.
ಸಾವಿರಾರು ಕೋಟಿ ಹಣ ವಂಚನೆ ಮಾಡಿರುವ ಪ್ರಕರಣವಾಗಿದ್ದರಿಂದ ಈ ಕೇಸ್ಅನ್ನು ಸರ್ಕಾರ ಎಸ್ಐಟಿಗೆ ತನಿಖೆಗೆ ವಹಿಸಿದೆ. ಇನ್ನು ಆರೋಪಿ ಮನ್ಸೂರ್ ಖಾನ್ ದುಬೈಗೆ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದ್ದು, ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ರಾಜ್ಯ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.