ಕೊಲ್ಕತಾ, ಜೂ.5-ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಿರುವ ಬಿಜೆಪಿ, ತೃಣಮೂಲ ಕಾಂಗ್ರೆಸ್ ಪ್ರಾಬಲ್ಯವಿರುವ ಪಶ್ಚಿಮ ಬಂಗಾಳದಲ್ಲೂ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಪಾರಮ್ಯ ಮೆರೆದಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ತೀವ್ರ ಮುಖಭಂಗವಾಗಿದೆ.
ಲೋಕಸಭಾ ಚುನಾವಣೆ ಬಳಿಕ ಬಂಗಾಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಬಿಜೆಪಿ ತನ್ನ ಸಾಮಥ್ರ್ಯ ಹೆಚ್ಚಿಸಿಕೊಂಡಿದ್ದು, ಒಟ್ಟು 34 ವಾರ್ಡ್ಗಳ ಪೈಕಿ 26 ಕೌನ್ಸಿಲರ್ಗಳು ಬಿಜೆಪಿ ಪರ ಮತ ನೀಡಿದ್ದು, 8 ಮಂದಿ ಕೌನ್ಸಿಲರ್ಗಳು ಮತದಾನದಿಂದ ದೂರ ಉಳಿಯುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಆ ಮೂಲಕ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಆಡಳಿತ ಆರಂಭವಾಗಲಿದೆ.
ಈ ಬೆಳವಣಿಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹಾಗೂ ಮಮತಾ ಬ್ಯಾನರ್ಜಿ ಅವರಿಗೆ ತೀವ್ರ ಮುಖಭಂಗವಾದಂತಾಗಿದೆ.
ಇಲ್ಲಿನ ಭಾತ್ ಪಾರಾ ಮುನ್ಸಿಪಾಲಿಟಿಯಲ್ಲಿ ಬಿಜೆಪಿ ಗೆಲ್ಲುವ ಮೂಲಕ ಟಿಎಂಸಿಯಿಂದ ಅಧಿಕಾರ ಕಸಿದಿದೆ. ಬಂಗಾಳದ ನಾರ್ತ್ 24 ಪರಗಣ ಜಿಲ್ಲೆಯ ಬರಾಕ್ ಪೋರ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ಸಹೋದರ ಸೌರವ್ ಸಿಂಗ್ ಇಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಅರ್ಜುನ್ ಸಿಂಗ್ ನಾಲ್ಕು ಬಾರಿ ಟಿಎಂಸಿ ಪಕ್ಷದ ಮೂಲಕ ಸಂಸತ್ ಗೆ ಆಯ್ಕೆಯಾಗಿದ್ದರು. ಆದರೆ ಬದಲಾದ ಸ್ಥಿತಿಯಲ್ಲಿ ಇತ್ತೀಚೆಗಷ್ಟೇ ಅವರು ಬಿಜೆಪಿ ಸೇರ್ಪಡೆಯಾಗಿ ಸ್ಪರ್ಧಿಸಿ ಜಯ ಗಳಿಸಿದ್ದರು.
ಅಲ್ಲದೆ 2010ರಿಂದಲೂ ಇದೇ ಅರ್ಜುನ್ ಸಿಂಗ್ ಭಾತ್ ಪಾರಾ ಮುನ್ಸಿಪಾಲಿಟಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.