ತಾತ ಮೊಮ್ಮಕ್ಕಳಿಗೆ ಸೋಲಿನ ಭೀತಿಯೇ?; ದೇವೇಗೌಡರು ಗೆಲ್ತಾರೆ ಎಂದು ಬೆಟ್ಟಿಂಗ್​ ಕಟ್ಟಲು ಸಹ ಜನ ಹಿಂದೇಟು..!

ಬೆಂಗಳೂರು : ಕ್ರಿಕೆಟ್​ ಬೆಟ್ಟಿಂಗ್​ಗಿಂತ ಹಾಸನ, ಮಂಡ್ಯ ಹಾಗೂ ತುಮಕೂರಿನ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಯಾರು ಗೆಲ್ತಾರೆ? ಎಂಬ ಬೆಟ್ಟಿಂಗ್ ಕಳೆದ ಕೆಲ ದಿನಗಳಿಂದ ಬಲು ಜೋರಾಗಿಯೇ ನಡೆಯುತ್ತಿದೆ. ಆದರೆ, ಈವರೆಗೆ ದೇವೇಗೌಡ ಹಾಗೂ ಅವರ ಮೊಮ್ಮಕ್ಕಳ ಮೇಲೆ ಬಾಜಿ ಕಟ್ಟಲು ನಾ ಮುಂದು ತಾ ಮುಂದು ಎಂದು ಮುಗಿಬೀಳುತ್ತಿದ್ದ ಜನ ಇದೀಗ ಅವರ ಪರ ಬಾಜಿ ಕಟ್ಟಲು ಹಿಂದೇಟು ಹಾಕುತ್ತಿರುವುದು ಮಾಜಿ ಪ್ರಧಾನಿ ಸೋಲ್ತಾರೆಯೇ..? ಎಂಬ ಅನುಮಾನಕ್ಕೆ ಕಾರಣವಾಗಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಈ ಬಾರಿ ಅತಿಹೆಚ್ಚು ಕುತೂಹಲಕ್ಕೆ ಕಾರಣವಾದ ಕ್ಷೇತ್ರ ಎಂದರೆ ತುಮಕೂರು, ಮಂಡ್ಯ ಹಾಗೂ ಹಾಸನ. ಈ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಾಗಿ ತಾತ-ಮೊಮ್ಮಕ್ಕಳು ಸ್ಪರ್ಧಿಸಿದ್ದ ಕಾರಣಕ್ಕೆ ಇಷ್ಟೊಂದು ಕುತೂಹಲ ಸೃಷ್ಟಿಯಾಗಿತ್ತು. ಅಲ್ಲದೆ ಈ ಕ್ಷೇತ್ರಗಳಲ್ಲಿ ಮತದಾನ ಮುಗಿಯುತ್ತಿದ್ದಂತೆ ಮೈತ್ರಿ ಪಕ್ಷಗಳ ಆಂತರಿಕ ಸಮೀಕ್ಷೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಪರಿಣಾಮ ಇಲ್ಲಿನ ಜನ ಈ ಬಾರಿಯೂ ಈ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ ಎಂದು ಒಂದಕ್ಕೆ ಎರಡು ಆಫರ್​ ಕೊಟ್ಟು ಬಾಜಿ ಕಟ್ಟಲು ಮುಂದಾಗಿದ್ದರು.

ಅದರಲ್ಲೂ ತುಮಕೂರಿನಲ್ಲಂತೂ ಮಾಜಿ ಪ್ರಧಾನಿ ದೇವೇಗೌಡ ಈವರೆಗೆ ಗೆಲ್ಲುವ ಫೇವರಿಟ್ ಆಗಿದ್ದರು. ಅವರ ಪರವಾಗಿ ಬೆಟ್ಟಿಂಗ್​ ಕಟ್ಟಲು ಜನ ಮುಗಿ ಬೀಳುತ್ತಿದ್ದರು, ಈ ಸಲುವಾಗಿಯೇ ಹಾಸನದಿಂದ ತುಮಕೂರಿಗೆ ಬರುತ್ತಿದ್ದವರ ಸಂಖ್ಯೆಯೂ ಕಡಿಮೆ ಏನಾಗಿರಲಿಲ್ಲ. ಆದರೆ, ಇದೀಗ ಎಲ್ಲಾ ಪಕ್ಷಗಳ ಸಮೀಕ್ಷೆಗಳು ಹೊರ ಬಿದ್ದಿದ್ದು ಒಂದಕ್ಕೊಂದು ತದ್ವಿರುದ್ಧವಾಗಿದೆ. ಹೀಗಾಗಿ ಮೇ.10 ಬಳಿಕ ಪರಿಸ್ಥಿತಿ ನೋಡಿಕೊಂಡು ದೇವೇಗೌಡರ ಪರ ಬೆಟ್ಟಿಂಗ್ ಕಟ್ಟೋಣ ಎನ್ನುತ್ತಿದ್ದವರು ಇದೀಗ ಫಲಿತಾಂಶದ ಅಂದಾಜೇ ಸಿಗುತ್ತಿಲ್ಲ ಎಂದು ಪೇಚಾಡುತ್ತಿದ್ದಾರೆ. ಅಲ್ಲದೆ ಈಗಾಗಲೆ ಬೆಟ್ಟಿಂಗ್ ಕಟ್ಟಿದವರು ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ತುಮಕೂರಿನಲ್ಲಿ ದೇವೇಗೌಡರು 1 ಲಕ್ಷಕ್ಕಿಂತ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎನ್ನಲಾಗುತ್ತಿತ್ತು.

ಆದರೆ, ಇದೀಗ ಬಿಜೆಪಿ ಅಭ್ಯರ್ಥಿ ಜಿ.ಎಸ್​. ಬಸವರಾಜು ಅವರೇ ಗೆಲ್ಲುವ ಫೇವರಿಟ್ ಎನ್ನುವ ಸಮೀಕ್ಷೆ ಜಿಲ್ಲೆಯಾದ್ಯಂತ ಬಿಸಿಬಿಸಿಯಾಗಿ ಹರಿದಾಡುತ್ತಿದೆ. ಇದೇ ಕಾರಣಕ್ಕೆ ಜೆಡಿಎಸ್ ಪರ ಇರುವವರು ಸಹ ದೇವೇಗೌಡರು ಗೆಲ್ಲುತ್ತಾರೆ ಎಂದು ಬೆಟ್ಟಿಂಗ್ ಕಟ್ಟಲು ಮುಂದಾಗುತ್ತಿಲ್ಲ. ಅಲ್ಲದೆ ಹಾಸನ ಮಂಡ್ಯದಲ್ಲೂ ಇದೇ ಪರಿಸ್ಥಿತಿ ಇದೆ ಎನ್ನಲಾಗುತ್ತಿದೆ.

ಹಾಸನ ಮಂಡ್ಯದಲ್ಲೂ ಕಾಡಲಿದೆಯೇ ಕಹಿ? : ತುಮಕೂರಿನಂತೆಯೇ ಹಾಸನ ಹಾಗೂ ಮಂಡ್ಯ ಜಿಲ್ಲೆಯಲ್ಲೂ ಆರಂಭದಲ್ಲಿ ಜೆಡಿಎಸ್​ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಜೋರಾಗಿಯೇ ಇತ್ತು. ಮಂಡ್ಯದಲ್ಲಂತೂ ಜನ ನಿಖಿಲ್ ಕುಮಾರಸ್ವಾಮಿ ಗೆಲ್ಲುತ್ತಾರೆ ಎಂದು ಕೋಳಿ, ಕುರಿಯನ್ನೂ ಬೆಟ್ಟಿಂಗ್ ಕಟ್ಟಲು ಮುಂದಾಗಿದ್ದರು. ಆದರೆ, ಇದೀಗ ಅಲ್ಲೂ ಜೆಡಿಎಸ್ ಪರ ಬೆಟ್ ಕಟ್ಟಲು ಜನ ಹಿಂದೂ ಮುಂದು ನೋಡುವಂತಾಗಿದೆ.

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸುಮಲತಾ ಭರ್ಜರಿ ಸವಾಲು ಎಸೆದಿದ್ದರೆ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ, ಹಿರಿಯ ರಾಜಕಾರಣಿ ಎ.ಮಂಜು ನಡುವಿನ ಹಣಾಹಣಿ ಜಿಲ್ಲೆಯಾದ್ಯಂತ ಕಾವೇರಿದ ವಾತಾವರಣವನ್ನೇ ನಿರ್ಮಾಣಮಾಡಿತ್ತು. ಎಷ್ಟೇ ಪ್ರತಿರೋಧ ಇದ್ದಾಗ್ಯೂ ನಿಖಿಲ್ ಹಾಗೂ ಪ್ರಜ್ವಲ್ ಗೆಲುವು ಖಚಿತ ಎನ್ನಲಾಗುತ್ತಿತ್ತು. ಆದರೆ, ಇದೀಗ ಎಲ್ಲಾ ಸಮೀಕ್ಷೆಗಳು ಉಲ್ಟಾ ಹೊಡೆಯುವ ಸಾಧ್ಯತೆಯನ್ನು ಮುಂದಿಟ್ಟಿದೆ.

ಅದರಲ್ಲೂ ಮಂಡ್ಯ ಚುನಾವಣಾ ಫಲಿತಾಶ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿಯವರ ನಿದ್ದೆಗೆ ಕುತ್ತು ತಂದಿರುವುದು ಮಾತ್ರ ಸುಳ್ಳಲ್ಲ. ಇದೇ ಕಾರಣಕ್ಕೆ ಈ ಎರಡೂ ಕ್ಷೇತ್ರಗಳಲ್ಲೂ ಸಹ ಜೆಡಿಎಸ್ ಪರ ಬೆಟ್ಟಿಂಗ್ ಇಳಿಮುಖವಾಗಿದೆ. ಅಲ್ಲದೆ ಈ ಬೆಳವಣಿಗೆ ಮೂರೂ ಕ್ಷೇತ್ರದಲ್ಲಿ ಜೆಡಿಎಸ್ ಸೋಲನುಭವಿಸಲಿದೆಯೇ..? ಎಂಬ ಸಂಶಯಕ್ಕೂ ಕಾರಣವಾಗಿದೆ.

ಅಸಲಿಗೆ ಜೂಜು ಕಾನೂನು ಬಾಹಿರವಾದ ಕ್ರಿಯೆಯಾಗಿದ್ದು ಮಂಡ್ಯ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಚುನಾವಣಾ ಫಲಿತಾಂಶ ಸಂಬಂಧ ನಡೆಯುತ್ತಿರುವ ಬೆಟ್ಟಿಂಗ್ ನಿಯಂತ್ರಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಾಕಷ್ಟು ಕ್ರಮ ಜರುಗಿಸಿತ್ತು. ಆದರೂ ಬೆಟ್ಟಿಂಗ್ ನಿಯಂತ್ರಣಕ್ಕೆ ಬಂದಿರಲಿಲ್ಲ. ಆದರೆ, ಇದೀಗ ಜೆಡಿಎಸ್ ಅಭ್ಯರ್ಥಿಗಳಾದ ತಾತ-ಮೊಮ್ಮಕ್ಕಳ ಗೆಲುವಿನ ಕುರಿತು ಎಲ್ಲರಿಗೂ ಅನುಮಾನ ವ್ಯಕ್ತವಾಗಿದ್ದು, ಬೆಟ್ಟಿಂಗ್ ದಂಧೆ ತಾನಾಗಿಯೇ ಕುಸಿತಕಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ