*
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 30 2018-19ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶವು ಇಂದು ಪ್ರಕಟವಾಗಿದ್ದು, ಒಟ್ಟು ಶೇ 88.24 ರಷ್ಟು ಫಲಿತಾಂಶ ಪಡೆದು ಬೆಂಗಳೂರು ಗ್ರಾಮಾಂತರ ಜಿಲ್ಲೆಯು ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.
ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದ 12166 ವಿದ್ಯಾರ್ಥಿಗಳಲ್ಲಿ 10763 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 88.34 ಫಲಿತಾಂಶ ದಾಖಲಾಗುವ ಮೂಲಕ ಜಿಲ್ಲೆಯು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದೆ. 2017-18 ನೇ ಸಾಲಿನಲ್ಲಿ 11935 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 9807 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 82.17 ಫಲಿತಾಂಶದೊಂದಿಗೆ ರಾಜ್ಯದಲ್ಲಿ 14ನೇ ಸ್ಥಾನ ಪಡೆದಿತ್ತು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯ ನವ್ಯ ಹಾಗೂ ನಾಗೇಂದ್ರ 625 ಅಂಕಕ್ಕೆ 619 ಅಂಕ ಗಳಿಸುವ ಮೂಲಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಇಬ್ಬರು ಹಂಚಿಕೊಂಡಿದ್ದಾರೆ. ತಾಲ್ಲೂಕುವಾರು ದೇವನಹಳ್ಳಿ 93.30%, ದೊಡ್ಡಬಳ್ಳಾಪುರ 79.69%, ಹೊಸಕೋಟೆ 89.6%, ನೆಲಮಂಗಲ 92.15% ಗಳಿಸುವ ಮೂಲಕ ದೊಡ್ಡಬಳ್ಳಾಪುರ ತಾಲ್ಲೂಕು ಹೊರತು ಪಡಿಸಿದರೆ, ಈ ಬಾರಿ ಉತ್ತಮ ಫಲಿತಾಂಶ ದಾಖಲಾಗಿದ್ದು ಜಿಲ್ಲೆಯ ಗರಿಮೆಯನ್ನು ಹೆಚ್ಚಿಸಿದೆ.
ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣಬೈರೇಗೌಡ ಅವರ ನಿರ್ದೇಶನದ ಮೇರೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಲತಾ ಅವರ ಅಧ್ಯಕ್ಷತೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಸಮಿತಿ ರಚಿಸಿ, ಕಲಿಕೆಯಲ್ಲಿ ಕಡಿಮೆ ಸಾಧನೆ ಮಾಡಿದ್ದ ಮಕ್ಕಳನ್ನು ಗುರುತಿಸಿ, ಅವರ ಕಲಿಕಾ ಪ್ರಗತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶೈಕ್ಷಣಿಕ ಮಾರ್ಗದರ್ಶನಕ್ಕಾಗಿ ತಜ್ಞರ ನೇಮಕ, ಅನುದಾನಕ್ಕಾಗಿ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯ ಆಡಳಿತಾಧಿಕಾರಿಗಳ ಸಂಪರ್ಕ, ನಿಧಾನ ಕಲಿಕಾ ಮಕ್ಕಳ ಆಯ್ಕೆಗಾಗಿ ಸೂಕ್ತ ಮಾನದಂಡಗಳ ರಚನೆ, ಜಿಲ್ಲೆಯಾದ್ಯಂತ 33 ನೋಡಲ್ ಕೇಂದ್ರಗಳ ಸ್ಥಾಪನೆ ಪ್ರತಿ ಕೇಂದ್ರಕ್ಕೂ ನೋಡಲ್ ಅಧಿಕಾರಿಗಳ ನೇಮಕ, ಬೋದಕರನ್ನಾಗಿ ನುರಿತ ಸಂಪನ್ಮೂಲ ಶಿಕ್ಷಕರ ಆಯ್ಕೆ, ಗೀತಂ ಯುನಿವರ್ಸಿಟಿ ಸಭಾಂಗಣದಲ್ಲಿ ಕಡಿಮೆ ಸಾದಕ ಮಕ್ಕಳನ್ನು ಒಗ್ಗೂಡಿಸಿ “ಪರೀಕ್ಷಾ ಸಂಭ್ರಮಕ್ಕೆ ಸಿದ್ಧರಾಗಿ” ಎಂಬ ಸ್ಫೂರ್ತಿದಾಯಕ ಕಾರ್ಯಕ್ರವiದ ಆಯೋಜನೆ, “ವಿಪಿಜಿ” ಮತ್ತು “ಏ ಒನ್” ಗುಂಪನ್ನು ರಚಿಸಿ ಈ ಮಕ್ಕಳಿಗಾಗಿ ವಿಶೇಷ ಕಲಿಕಾ ಸಿಲಬಸ್ ರಚನೆ, ಏರ್ಪಾಟು, ವಿಪಿಜಿ ಮಕ್ಕಳ ಪೋಷಕರ ಸಭೆಗೆ ಏರ್ಪಾಟು, ಗಣಿತ ಕಲಿಕೆಯನ್ನು ಸುಲಭಗೊಳಿಸಲು “ಗಣಿತ ಅಭ್ಯಾಸ ಪುಸ್ತಕ” ಎಂಬ ಕೈಪಿಡಿ ರಚನೆ, ಜಿಲ್ಲೆಯ ಎಲ್ಲಾ 234 ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಡಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ನಡೆಸಿ ಶಾಲಾವಾರು ಫಲಿತಾಂಶ ಸುಧಾರಣ ಕ್ರಮಗಳ ಪರಿಶೀಲನೆ, ಪ್ರಿಪರೇಟರಿ ಪರೀಕ್ಷಾ ಫಲಿತಾಂಶದ ವಿಶ್ಲೇಷಣೆ, ಕಲಿಕೆಯಲ್ಲಿ ಪ್ರಗತಿ ಕಾಣದ “ಏ ಒನ್ “ ಮಕ್ಕಳಿಗಾಗಿ ಪ್ರತಿಶಾಲೆಯಲ್ಲೂ ಬೋದಿಸುವ ಕ್ರಮದ ಜಾರಿ ಇತ್ಯಾದಿ ಸುಧಾರಣಾ ಕ್ರಮಗಳನ್ನು ರೂಪಿಸುವಲ್ಲಿ ಆರ್.ಲತಾ ಹೆಚ್ಚು ಆಸಕ್ತಿ ವಹಿಸಿ ಕ್ರಮ ಕೈಗೊಂಡಿದ್ದರು.
ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆಯ ಸ್ಥಾನವು ಹೆಚ್ಚಳಗೊಳ್ಳಲು ಕಾರಣರಾದ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಿಡಿಪಿಐ, ಕೃಷ್ಣಮೂರ್ತಿ ಸೇರಿದಂತೆ ಶ್ರಮವಹಿಸಿದ ಎಲ್ಲರನ್ನು ಸಿ.ಇ.ಒ ಆರ್.ಲತಾ ಅವರು ಶ್ಲಾಘಿಸಿದ್ದಾರೆ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಧೃತಿಗೆಡದೆ ಮತ್ತೊಮ್ಮೆ ಆತ್ಮವಿಶ್ವಾಸದೊಂದಿಗೆ ಪರೀಕ್ಷೆಗೆ ಸಿದ್ದರಾಗುವಂತೆ ಪ್ರೇರೆಪಿಸಿದ್ದು, ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಸಿ.ಇ.ಒ ಆರ್.ಲತಾ ರವರ ಅಧ್ಯಕ್ಷತೆಯ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಸಮಿತಿಯು ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ಅತ್ಯಂತ ಕಾಳಜಿ ವಹಿಸಿ ವಿಶೇಷ ತರಗತಿಗಳನ್ನು ನಡೆಸಿ ಪರೀಕ್ಷೆಗೆ ಅಣಿಗೊಳಿಸಿದ್ದರಿಂದ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮಗೊಂಡು ಮೂರನೇ ಸ್ಥಾನ ಪಡೆದಿದೆ ಎಂದು ಜಿಲ್ಲಾಧಿಕಾರಿ ಕರೀಗೌಡ ಅವರು ಹರ್ಷ ವ್ಯಕ್ತಪಡಿಸಿದ್ದು, ಪರೀಕ್ಷೆಯಲ್ಲಿ ಅನು ಉತ್ತೀರ್ಣರಾದ ವಿದ್ಯಾರ್ಥಿಗಳು, ಎದೆಗುಂದದೆ, ಮರು ಪರೀಕ್ಷೆಯಲ್ಲಿ ತೇರ್ಗಡೆಯಾಲು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಲು ಸಲಹೆ ನೀಡಿದ್ದಾರೆ.