ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ನಿರಂತರ ಪ್ರಚಾರದಿಂದ ಬಸವಳಿದಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಆಯುರ್ವೇದ ಚಿಕಿತ್ಸೆಗಾಗಿ ಉಡುಪಿಗೆ ತೆರಳಿದ್ದಾರೆ. ಇವರೊಂದಿಗೆ ತಂದೆ ಎಚ್.ಡಿ.ದೇವೇಗೌಡ ಅವರು ತೆರಳಿರುವುದು ಕುತೂಹಲ ಮೂಡಿಸಿದೆ.
ಭಾನುವಾರ ರಾತ್ರಿ ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಉಡುಪಿಗೆ ತೆರಳಿದ ಎಚ್ಡಿಕೆ ಕಾಪುವಿನಲ್ಲಿರುವ ಪ್ರಾಕೃತಿಕ ಚಿಕಿತ್ಸಾ ಕೇಂದ್ರಕ್ಕ ತೆರಳಿದ್ದಾರೆ.
ವಾರದ ಹಿಂದೆ ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ಮುಗಿದ ಬಳಿಕ ಕುಮಾರಸ್ವಾಮಿ ಅವರು ಇದೇ ಕೇಂದ್ರದಲ್ಲಿ ಒಂದು ದಿನದ ಮಟ್ಟಿಗೆ ಚಿಕಿತ್ಸೆ ಪಡೆದಿದ್ದರು. ಕೆಲವು ದಿನಗಳ ಕಾಲ ಇಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕೆಲ ರಾಜಕೀಯ ಬದಲಾವಣೆಗಳು ಘಟಿಸಿದ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆ ಮೊಟಕುಗೊಳಿಸಿ ಬೆಂಗಳೂರಿಗೆ ಆಗಮಿಸಿದ್ದರು. ಇದೀಗ ಮತ್ತೆ ಕುಮಾರಸ್ವಾಮಿ ಅವರು ತಂದೆಯೊಂದಿಗೆ ಚಿಕಿತ್ಸೆಗಾಗಿ ಕಾಪುವಿಗೆ ತೆರಳಿದ್ದಾರೆ.
ಮುಂಗಾರು ಸಿದ್ಧತೆಗೆ ಸಿಎಂ ಸೂಚನೆ
ಉಡುಪಿಗೆ ತೆರಳುವ ಮುನ್ನ ಸಿಎಂ ಎಚ್ಡಿಕೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಮಳೆಗಾಲ ಸಮೀಪಿಸುತ್ತಿದ್ದು, ರಾಜ್ಯ ಹಾಗೂ ವಿಶೇಷವಾಗಿ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಕಳೆದ ವರ್ಷ ಮಳೆಗಾಲದಲ್ಲಿ ಕೊಡಗು ಸೇರಿದಂತೆ ಮಲೆನಾಡು, ಕರಾವಳಿ ಭಾಗಗಳಲ್ಲಿ ಭಾರಿ ಅನಾಹುತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಜನಪ್ರತಿಧಿಗಳು ಅಧಿಕಾರಿಗಳೊಂದಿಗೆ ಸಭೆ ನಡೆಸಲು ಅವಕಾಶ ಇಲ್ಲ. ಹೀಗಾಗಿ ಮುಖ್ಯ ಕಾರ್ಯದರ್ಶಿಗಳು ಅಧಿಕಾರಿಗಳ ತಂಡ ರಚಿಸಿ ಈ ಜಿಲ್ಲೆಗಳಲ್ಲಿ ಮುಂಗಾರಿನ ಪೂರ್ವಸಿದ್ಧತೆಯನ್ನು ಪರಿಶೀಲಿಸುವಂತೆ ಸಿಎಂ ದೂರವಾಣಿಯಲ್ಲಿ ತಿಳಿಸಿದ್ದಾರೆ.