ಇಂದಿನಿಂದ ರಾಜ್ಯಾದ್ಯಾಂತ ಸಿಇಟಿ ಪರೀಕ್ಷೆ

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇಂಜಿನಿಯರಿಂಗ್​ ಪದವಿಗೆ ಪ್ರವೇಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಇಂದು ರಾಜ್ಯದಲ್ಲಿ ನಡೆಯುತ್ತಿದೆ.

ರಾಜ್ಯದ ಒಟ್ಟು 431 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಯುತ್ತಿದ್ದು, 1, 94, 311 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ. ರಾಜಧಾನಿಯಲ್ಲಿ 84 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಆಯಾ ಜಿಲ್ಲಾ ಆಯುಕ್ತರ ಸುಪರ್ದಿಯಲ್ಲಿ ಪರೀಕ್ಷೆ ನಡೆಯಲಿದ್ದು,431 ವೀಕ್ಷಕರು, 862 ವಿಶೇಷ ಜಾಗೃತಿ ದಳದ ಸದಸ್ಯರು ,9700ಕೊಠಡಿ ಮೇಲ್ವಿಚಾರಕರು, 28,245ಪರೀಕ್ಷಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

ಇಂದು 10.30ಕ್ಕೆ ಸರಿಯಾಗಿ ಪರೀಕ್ಷೆ ಶುರುವಾಗಲಿದ್ದು, ಪರೀಕ್ಷಾ ಕೊಠಡಿಗೆ ಬರುವ ಮುನ್ನ ವಿದ್ಯಾರ್ಥಿಗಳು ಹಾಲ್ ಟಿಕೇಟ್ ಜೊತೆ ಕಾಲೇಜ್ ಐಡಿ, ಬಸ್ ಪಾಸ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್ ನಂತಹ ಯಾವುದಾದರೂ ಒಂದು ಗುರುತಿನ ಚೀಟಿ ಕೊಂಡೊಯ್ಯುವುದು ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಪರೀಕ್ಷಾ ಕೇಂದ್ರಕ್ಕೆ ಕೈ ಗಡಿಯಾರ,ಕ್ಯಾಲ್ಕುಲೇಟರ್, ಟ್ಯಾಬ್ಲೆಟ್ ನಂತಹ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ನಿಷೇಧಿಸಲಾಗಿದೆ.

ಪರೀಕ್ಷೆಯ ವಿವರ:  ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ಪರೀಕ್ಷೆಯಲ್ಲಿ ದಿನಕ್ಕೆ ಎರಡು ಪೇಪರ್​ನಂತೆ ನಾಲ್ಕು ವಿಷಯಗಳ ಪರೀಕ್ಷೆಯನ್ನು ವಿದ್ಯಾರ್ಥಿಗಳು ಎದುರಿಸಲಿದ್ದಾರೆ.  ಇಂದು ಮೊದಲ ಪತ್ರಿಕೆ ಜೀವಶಾಸ್ತ್ರ ಆಗಿದ್ದು ನಂತರ ಗಣಿತಶಾಸ್ತ್ರ ಪರೀಕ್ಷೆ ನಡೆಯಲಿದೆ. ನಾಳೆ ಭೌತಶಾಸ್ತ್ರ ಹಾಗೂ ರಾಸಾಯನಿಕಶಾಸ್ತ್ರ ಪರೀಕ್ಷೆ ನಡೆಯಲಿದೆ. ಮೇ 1ರಂದು ಕನ್ನಡೇತರ ವಿದ್ಯಾರ್ಥಿಗಳು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ