ಬಡವರ ಪರವಾಗಿ ಕೆಲಸ ಮಾಡಲು ಅಧಿಕಾರದಲ್ಲಿ ಕುಳಿತಿದ್ದೇನೆ:ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಮಾ.8-ನಗರದ ಫ್ರೀಡಂ ಪಾರ್ಕ್‍ನಲ್ಲಿ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘ ಆಯೋಜಿಸಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಸಿ.ಎಂ.ಕುಮಾರಸ್ವಾಮಿಯವರು, ಬಡವರ ಪರವಾಗಿ ಕೆಲಸ ಮಾಡಲು ನಾನು ಅಧಿಕಾರದಲ್ಲಿ ಕುಳಿತಿದ್ದೇನೆ. ಕೆಲವು ಸಮಸ್ಯೆಗಳನ್ನು ಕಾನೂನಾತ್ಮಕ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಮಾನವೀಯ ನೆಲೆಯಲ್ಲಿಯೇ ನೋಡಬೇಕು. ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರ ಸಮಸ್ಯೆಗಳನ್ನು ನಾವು ಕಾನೂನಿನ ವ್ಯಾಪ್ತಿಯಿಂದ ಹೊರಗಿಟ್ಟು ನೋಡಬೇಕಿದೆ. ನಾನು ನಿಮ್ಮ ಜೊತೆಗಿದ್ದೇನೆ ಎಂದು ಹೇಳಿದರು.

ಏಕಾಏಕಿ ಎಲ್ಲಾ ಸಮಸ್ಯೆಗಳನ್ನು ಒಂದೇ ವರ್ಷದಲ್ಲಿ ಬಗೆಹರಿಸಲು ಸಾಧ್ಯವಾಗುವುದಿಲ್ಲ. ನಾನು ಅಧಿಕಾರ ಸ್ವೀಕರಿಸಿ ಏಳೆಂಟು ತಿಂಗಳಾಗಿದೆ. ರೈತರ ಸಾಲ ಮನ್ನಾ ಮಾಡಿದ್ದೇನೆ. ಬೇರೆ ಬೇರೆ ರೀತಿಯ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಬಡವರ, ಜನಸಾಮಾನ್ಯರ ಸಮಸ್ಯೆಗಳಿಗೆ ನನ್ನ ಮೊದಲ ಆದ್ಯತೆ. ಮುಂದಿನ ನಾಲ್ಕು ವರ್ಷಗಳ ಅವಧಿಗೆ ನಾನು ಮುಖ್ಯಮಂತ್ರಿಯಾಗಿರುತ್ತೇನೆ. ಹೊರಗುತ್ತಿಗೆ ನೌಕರರ ಸಮಸ್ಯೆಗಳನ್ನು ಪರಿಹರಿಸಿಕೊಡುವ ವಿಶ್ವಾಸ ನನಗಿದೆ. ಯಾರೂ ನಂಬಿಕೆ ಕಳೆದುಕೊಳ್ಳಬೇಡಿ ಎಂದು ಧೈರ್ಯ ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ ಅವರು, ಹೊಸ ನೇಮಕಾತಿಗೆ ಕೈ ಹಾಕಿರುವ ರಾಜ್ಯ ಸರ್ಕಾರ ಹಲವಾರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ಕೈ ಬಿಡಲು ಮುಂದಾಗಿತ್ತು. ಮಾನ್ಯ ಮುಖ್ಯಮಂತ್ರಿಯವರು ನಮಗೆ ನ್ಯಾಯ ಕೊಡಿಸುವ ಭರವಸೆ ನೀಡಿ ಚೈತನ್ಯ ತುಂಬಿದ್ದಾರೆ. ಇಲ್ಲಿಗೇ ನಮ್ಮ ಸಮಸ್ಯೆ ಬಗೆಹರಿದಿಲ್ಲ. ನಮ್ಮ ಚಳವಳಿಗಳನ್ನು ಕೈಬಿಡುವಂತಿಲ್ಲ ಎಂದು ಹೇಳಿದರು.

ನಮ್ಮ ಆತಂಕ ದೂರವಾಗಿದೆಯಾದರೂ ಗೋಳು ತಪ್ಪಿಲ್ಲ. ಅಧಿಕಾರಿಗಳು ನಮ್ಮ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಆದರೆ ನಮಗೆ ಮೈತ್ರಿ ಸರ್ಕಾರದ ಮೇಲೆ ನಂಬಿಕೆ ಇದೆ. ಸಂಬಳ ಕೊಡುವುದಿಲ್ಲ ಎಂದು ಹೇಳುವ ಮೂಲಕ ಅಧಿಕಾರಿಗಳು ನಮ್ಮ ಮೇಲೆ ದರ್ಪ ತೋರುತ್ತಿದ್ದಾರೆ. ಹೊರಗುತ್ತಿಗೆ ಆಧಾರದ ಮೇಲೆ ಹಾಸ್ಟೆಲ್‍ಗಳು ಹಾಗೂ ವಸತಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ನಿವೃತ್ತಿಯವರೆಗೂ ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯಬಾರದು ಎಂದು ಮನವಿ ಮಾಡಿದರು.

ಮುಖಂಡರಾದ ಜಿ.ಸಿ.ಬೈಯ್ಯಾರೆಡ್ಡಿ, ಮೀನಾಕ್ಷಿ ಸುಂದರಂ, ಭೀಮಶೆಟ್ಟಿ ಯಂಪಲ್ಲಿ, ಯಲ್ಲಪ್ಪ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ