ಮಹಿಳೆರನ್ನು ಎಲ್ಲಿ ಪೂಜ್ಯ ಭಾವದಿಂದ ನೋಡಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲಸಿರುತ್ತಾರೆ: ಸಿ.ಎಂ.ಕುಮಾರಸ್ವಾಮಿ

ಬೆಂಗಳೂರು, ಮಾ.8-ಖಾಸಗಿ ಸುದ್ದಿವಾಹಿನಿ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಾಕಥಾನ್ ನಂತರ ಎಫ್‍ಕೆಸಿಸಿಐ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಎಲ್ಲಿ ಮಹಿಳೆಯರನ್ನು ಪೂಜ್ಯ ಭಾವದಿಂದ ನೋಡಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬುದು ನಮ್ಮ ಪರಂಪರೆ. ನಾಟ್ಯರಾಣಿ ಶಾಂತಲೆ, ದಾನಚಿಂತಾಮಣಿ ಅತ್ತಿಮಬ್ಬೆ, ಕಿತ್ತೂರುರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ದೇವಿ, ವಚನಗಾರ್ತಿ ಅಕ್ಕಮಹಾದೇವಿಯಂತಹ ಪ್ರಾತಃಸ್ಮರಣೀಯರನ್ನು ಕಂಡ ಭವ್ಯ ಇತಿಹಾಸ ನಮ್ಮದು ಎಂದರು.

ಮಹಿಳೆಯರು ವಿಧಾನಸಭೆ ಅಧ್ಯಕ್ಷಗಿರಿಯಿಂದ ಹಿಡಿದು ಸಚಿವ, ಶಾಸಕ ಸ್ಥಾನಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ರಾಜಕೀಯ,ಕ್ರೀಡೆ, ವಿಜ್ಞಾನ, ಉದ್ಯಮ, ಶಿಕ್ಷಣ, ಪತ್ರಿಕೋದ್ಯಮ, ಆರ್ಥಿಕ ನೀತಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಅಸಾಧಾರಣ ಸಾಧನೆ ಮಾಡಿರುವ ಮಹಿಳೆಯರಿದ್ದಾರೆ. ಮಹಿಳೆ ಮನಸ್ಸು ಮಾಡಿದರೆ ಯಾವ ಕೆಲಸವೂ ಅಸಾಧ್ಯವಲ್ಲ ಎಂಬ ನಾಣ್ಣುಡಿ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಡಾ.ಅರುಣಾ, ಕೃಷಿಕರಾದ ವಲ್ಲಿಯಮ್ಮಾಳ್, ತುಮಕೂರಿನ ರಹಾನಾ ಬೇಗಂ, ರಾಯಚೂರಿನ ವಿದ್ಯಾಪಾಟೀಲ್, ಡಾ.ಭುವನೇಶ್ವರಿ ಮೇಲಿನಮಠ ಅವರುಗಳ ಸಾಧನೆಯನ್ನು ಮುಖ್ಯಮಂತ್ರಿ ಕೊಂಡಾಡಿದರು.

ನಮ್ಮ ಹಿರಿಯಕ್ಕಂದಿರಿಗೂ ಮಾತೃಹೃದಯ ಮಾನವೀಯ ಅಂತಃಕರಣಗಳ ಸಾಕ್ಷಿ ಪ್ರಜ್ಞೆಯಂತಹ ಮಹಾನ್ ಸಾಧಕಿಯರ ಮುಂದೆ ನಾವೆಲ್ಲ ಅಲ್ಪರು ಎಂಬ ಭಾವನೆ ಮೂಡುತ್ತದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಜಯಮಾಲಾ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ಶುಭ ಹಾರೈಸಿದರು.

ಮೇಯರ್ ಗಂಗಾಂಬಿಕೆ, ಪತ್ರಕರ್ತರಾದ ಸುಭಾಷ್ ಹೂಗಾರ್, ಚನ್ನೇಗೌಡ, ನಟಿ ಹರಿಪ್ರಿಯಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ