ಬೆಂಗಳೂರು, ಫೆ.28-ಲೋಕಸಭಾ ಚುನಾವಣಾ ಕಣಕ್ಕಿಳಿಯದಂತೆ ಸುಮಲತಾ ಅಂಬರೀಷ್ ಅವರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ದಿವಂಗತ ಅಂಬರೀಷ್ ಅವರ ಕುಟುಂಬದ ಆತ್ಮೀಯರು ಸಹ ಒತ್ತಡ ತರುತ್ತಿದ್ದಾರೆ.
ಮಂಡ್ಯದಿಂದ ಸ್ಪರ್ಧಿಸದಂತೆ ಜೆಡಿಎಸ್ ಮುಖಂಡರು ನಿರಂತರ ಒತ್ತಡ ಹೇರಿದರೆ, ಕೆಲ ಕಾಂಗ್ರೆಸ್ ಮುಖಂಡರಿಂದಲೂ ಚುನಾವಣೆಗೆ ಸ್ಪರ್ಧಿಸಬಾರದು ಎಂದು ಸಲಹೆ ಮಾಡಲಾಗುತ್ತಿದೆ.
ಇದಲ್ಲದೆ ಚಿತ್ರರಂಗದ ಮೂಲಕವೂ ಸುಮಲತಾ ಅವರ ಮೇಲೆ ಮುಖಂಡರು ಒತ್ತಡ ಹಾಕುತ್ತಿದ್ದಾರೆ. ಆದರೆ ಸುಮಲತಾ ಅವರು, ಯಾವ ಒತ್ತಡಕ್ಕೂ ಜಗ್ಗದೆ ನಾನು ಚುನಾವಣಾ ಕಣ್ಣಕ್ಕಿಳಿದು ರಾಜಕೀಯ ನೆಲೆ ಕಂಡು ಕೊಳ್ಳಬೇಕೆಂಬ ಯಾವ ಇರಾದೆಯೂ ಇಲ್ಲ. ಮಂಡ್ಯ ಜನರ ಋಣ ತೀರಿಸಬೇಕೆಂಬ ಏಕೈಕ ಉದ್ದೇಶವಿದೆ ಅಷ್ಟೆ.ಅದರ ಹೊರತಾಗಿಯೂ ಯಾವ ರಾಜಕೀಯ ಆಕಾಂಕ್ಷೆಯೂ ಇಲ್ಲ.
ಕಾಂಗ್ರೆಸ್ ಟಿಕೆಟ್ ಸಿಗದೆ ಇದ್ದಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯುವುದು ನಿಶ್ಚಿತ ಎಂದು ಸುಮಲತಾ ಹೇಳಿದ್ದಾರೆ.ಇವರ ಈ ತೀರ್ಮಾನದಿಂದ ಜೆಡಿಎಸ್ ವರಿಷ್ಠರು ಕೆಂಡಾಮಂಡಲವಾಗಿದ್ದಾರೆ. ನಿರಾಯಸವಾಗಿ ಗೆಲ್ಲುವ ಕ್ಷೇತ್ರಕ್ಕೆ ಸುಮಲತಾ ಅಡ್ಡಗಾಲಾಗಿದ್ದಾರೆ ಎಂದು ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದರ ಬೆನ್ನಲೇ ಇಂದು ಸುಮಲತಾ ಅವರು ಮಾಜಿ ಸಂಸದ ಜಿ.ಮಾದೇಗೌಡ ಸೇರಿದಂತೆ ಹಲವು ಮುಖಂಡರ ಜತೆ ಮಾತುಕತೆ ನಡೆಸಿದ್ದಲ್ಲದೆ.ಇತ್ತೀಚೆಗಷ್ಟೆ ಮೃತಪಟ್ಟ ರೈತ ಮುಖಂಡ ಪುಟ್ಟಣಯ್ಯ ನಿವಾಸಕ್ಕೂ ಭೇಟಿ ನೀಡಿದ್ದಾರೆ. ಒಟ್ಟಾರೆ ಮಂಡ್ಯ ರಾಜಕೀಯ ಕಣ ರಂಗೇರಿದೆ.