ನೀರನ್ನು ಮಿತಬಳಕೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಯುದ್ಧ-ಸಿ.ಎಂ.ಕುಮಾರಸ್ವಾಮಿ

ಬೆಂಗಳೂರು,ಫೆ.28-ನಗರದಲ್ಲಿ ಆಯೋಜಿಸಲಾಗಿದ್ದ ಜಲಾಮೃತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಹಿಂದೆಲ್ಲ ನಾವು ಬಾವಿ ನೀರು ಕುಡಿಯತ್ತಿದ್ದೆವು. ಈಗ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನೀರನ್ನು ಮಿತ ಬಳಕೆ ಮಾಡದಿದ್ದರೆ ಮುಂದೊಂದು ನೀರಿಗಾಗಿ ಯುದ್ಧ ನಡೆಯುವ ಸಂಭವವಿದೆ ಎಂದು ಎಚ್ಚರಿಸಿದ ಅವರು, 2019ನ್ನು ಜಲ ವರ್ಷವಾಗಿ ಆಚರಿಸುವುದಾಗಿ ಹೇಳಿದರು.

ಬಂಡೀಪುರ ಅರಣ್ಯದಲ್ಲಿ ಬೆಂಕಿ ಹೊತ್ತುಕೊಂಡಿದ್ದನ್ನು ಕಂಡು ತೀವ್ರ ಬೇಸರವಾಯಿತು ಎಂದ ಅವರು ಅರಣ್ಯ ಸಂಪತ್ತಿನ ರಕ್ಷಣೆಗೆ ತಮ್ಮ ಸರ್ಕಾರ ಬದ್ಧ ಎಂದರು.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಜನರಿಗೆ ನೀರಿನ ಮೌಲ್ಯ ಗೊತ್ತಿಲ್ಲ. ಇಂದು ಹಾಲಿಗಿಂತ ನೀರಿನ ದರ ಹೆಚ್ಚಿದೆ. ನೀರಿನ ಮಹತ್ವ ತಿಳಿಯಬೇಕಾದರೆ ಬಳಕೆದಾರರಿಗೆ ನೀರಿನ ದರ ನಿಗದಿ ಮಾಡಬೇಕೆಂಬ ಸಲಹೆಯನ್ನು ನೀಡಿದರು.

ಚುನಾವಣೆ ಕಳೆದ ನಂತರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ದಿ ಸಚಿವರಿಗೆ ಮನವಿ ಮಾಡಿದರು.

ಸಚಿವ ಕೃಷ್ಣಭೆರೇಗೌಡ ಮಾತನಾಡಿ, ನೀರಿನ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಲವರ್ಷದ ಅಂಗವಾಗಿ ಜಲಾಮೃತ ಯೋಜನೆಯನ್ನು ಎಲ್ಲಾ ಇಲಾಖೆಗಳಲ್ಲೂ ಅನ್ವಯವಾಗುವಂತೆ ಅನುಷ್ಠಾನಗೊಳಿಸಲಾಗುತ್ತಿದೆ.ಜನರಿಗೆ ನೀರಿನ ಬಳಕೆ ಸಂಬಂಧ ಸಾಕ್ಷರರನ್ನಾಗಿಸುವ ಪ್ರಾಮಾಣಿಕ ಯತ್ನ ನಡೆಸುವುದಾಗಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಸಿ.ಎಸ್.ಪುಟ್ಟರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಅಧಿಕಾರಿಗಳಾದ ಅತೀಕ್, ವಂದಿತಾ ಶರ್ಮ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ