ಯಡಿಯೂರಪ್ಪನವರ ಹೇಳಿಕೆಯಿಂದ ಬಿಜೆಪಿ ಬಣ್ಣ ಬಯಲಾಗಿದೆ-ಸಿ.ಎಂ.ಕುಮಾರಸ್ವಾಮಿ

ಬೆಂಗಳೂರು, ಫೆ.28- ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ವಾಯುಸೇನೆ ಪಾಕಿಸ್ತಾನದ ಮೇಲೆ ನಡೆಸಿದ ಸರ್ಜಿಕಲ್ ದಾಳಿಯಿಂದ ಬಿಜೆಪಿಗೆ ರಾಜಕೀಯವಾಗಿ ಅನುಕೂಲವಾಗಲಿದೆ.ಲೋಕಸಭೆಯಲ್ಲಿ 22ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರು ನೀಡಿರುವ ಹೇಳಿಕೆಯಿಂದ ಬಿಜೆಪಿಯ ನಿಜಬಣ್ಣ ಬಯಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೈನಿಕರ ಜೀವಗಳೊಂದಿಗೆ ಬಿಜೆಪಿಯವರು ಆಟವಾಡುತ್ತಿದ್ದಾರೆ.ಸೈನಿಕರ ಸಾವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಬಿಜೆಪಿಯ ಅಜೆಂಡಾ ಬಯಲಾಗಿದೆ ಎಂದು ಅವರು ಹೇಳಿದರು.

ಯೋಧರ ತಂದೆ-ತಾಯಿಯನ್ನು ಅನಾಥರಾಗಿರುವುದು, ಅವರ ಪತ್ನಿಯರು ವಿಧವೆರಾಗಿರುವುದರನ್ನು ಬಿಜೆಪಿ ಕೀಳುಮಟ್ಟದ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಅತ್ತ ನಮ್ಮ ಸೈನಿಕರು ಪಾಕಿಸ್ತಾನದ ಮೇಲೆ ಬಾಂಬ್ ಹಾಕುತ್ತಿದ್ದರೆ, ಇತ್ತ ಬಿಜೆಪಿಯವರು ತಾವೇ ಬಾಂಬ್ ಹಾಕಿದ ರೀತಿ ಸಂಭ್ರಮಾಚರಣೆ ಮಾಡುತ್ತಾರೆ. ಲಾಲ್‍ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ನೆಹರೂ ಅವರ ಕಾಲದಲ್ಲಿ ಯುದ್ಧಗಳಾಗಿವೆ. ಆದರೆ ಯಾರೂ ಅದನ್ನು ಪಕ್ಷಕ್ಕೆ ಬಳಸಿಕೊಂಡಿಲ್ಲ.ನರೇಂದ್ರ ಮೋದಿಯವರು ಮತ ಗಳಿಕೆಗಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದರು.

ಯೋಧರ ಬಲಿದಾನವನ್ನು ರಾಜಕೀಯವಾಗಿ ದುರುಪಯೋಗ ಮಾಡಿಕೊಳ್ಳುತ್ತಿರುವ ಇವರ ಬಣ್ಣ ಯಡಿಯೂರಪ್ಪ ಅವರ ಹೇಳಿಕೆಯಿಂದ ಬಟಾ ಬಯಲಾಗಿದೆ.

ದೇಶದ ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ ಎಂದು ಹೇಳಿದರು.

ರಾಷ್ಟ್ರದ ಜನ ಸುರಕ್ಷತೆ ಕಡೆ ಗಮನ ಹರಿಸಿದರೆ ಬಿಜೆಪಿಯವರು ಈ ವಿಷಯ ಮುಂದಿಟ್ಟುಕೊಂಡು ರಾಜಕೀಯ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಬಿ.ಎಸ್.ಯಡಿಯೂರಪ್ಪ ಅವರ ಈ ಹೇಳಿಕೆಯಿಂದ ಬಿಜೆಪಿಯಿಂದ ಅವರನ್ನು ಉಚ್ಛಾಟನೆ ಮಾಡುವುದು ಬಿಡುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟ ವಿಷಯ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ