ನವದೆಹಲಿ, ಫೆ.27- ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ನಡೆಸಿದ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಎದುರಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸಿವೆ.
ಕದನ ವಿರಾಮ ಉಲ್ಲಂಘಿಸಿ ಭಾರತದ ಗಡಿಯೊಳಗೆ ನುಸುಳಿ ದಾಳಿ ನಡೆಸಲು ಯತ್ನಿಸಿದ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ.
ಇನ್ನೊಂದೆಡೆ ಭಾರತದ 2 ಯುದ್ಧ ವಿಮಾನಗಳನ್ನು ನಾವು ಕೂಡ ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ ಭಾರತೀಯ ಸೇನಾ ಪಡೆ ಸ್ಪಷ್ಟವಾಗಿ ತಳ್ಳಿಹಾಕಿದೆ.
ಬೆಳಗ್ಗೆ ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ನಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಮಿಗ್-17 ಸರಕು ಸಾಗಾಣಿಕೆ ವಿಮಾನ ತಾಂತ್ರಿಕ ದೋಷದಿಂದ ಸ್ಫೋಟಗೊಂಡು ಇಬ್ಬರು ಪೈಲೆಟ್ಗಳು ಹಾಗೂ ಒಬ್ಬ ನಾಗರಿಕ ಮೃತಪಟ್ಟಿದ್ದ.
ಈ ಘಟನೆ ನಡೆದ ಮರುಕ್ಷಣವೇ ಪಾಕಿಸ್ತಾನದ ಮೇಜರ್ ಜನರಲ್ ಅಸೀಫ್ ಗಫೂರ್ ಮಿಗ್-21 ವಿಮಾನವನ್ನು ಪಾಕ್ನ ವಾಯುಸೇನೆಗೆ ಸೇರಿದ ಎಫ್16 ಹೊಡೆದುರುಳಿಸಿದೆ ಎಂದು ಹೇಳಿಕೊಂಡಿದ್ದರು.
ಅಲ್ಲದೆ ಓರ್ವ ಪೈಲೆಟ್ನನ್ನು ಬಂಧಿಸಲಾಗಿದೆ. ಭಾರತ ಮಂಗಳವಾರ ನಡೆಸಿದ ದಾಳಿಗೆ ಇದು ಪ್ರತೀಕಾರ ಎಂದು ಜಂಭ ಕೊಚ್ಚಿಕೊಂಡಿದ್ದರು.
ಇದಕ್ಕೆ ಅಷ್ಟೇ ವೇಗದಲ್ಲಿ ತಿರುಗೇಟು ನೀಡಿದ ಭಾರತದ ಸೇನಾಪಡೆ ನೌಶೇರಾ ಸೆಕ್ಟರ್ನಲ್ಲಿ ತಾಂತ್ರಿಕ ದೋಷದಿಂದ ಪತನಗೊಂಡಿರುವುದು ಎಂ-17 ಸರಕು ಸಾಗಾಣಿಕೆಯ ವಿಮಾನ. ನೀವು ಹೇಳಿದಂತೆ ಎಂ-21 ಪತನಗೊಂಡಿಲ್ಲ ಎಂದು ತಿರುಗೇಟು ನೀಡಿ ಪಾಕ್ನ ನರಿ ಬುದ್ಧಿಯನ್ನು ಬಯಲು ಮಾಡಿತು.
ಪಾಕಿಸ್ತಾನದಿಂದ ಭಾರತದ ಮೇಲೆ ಯಾವುದೇ ಸಂದರ್ಭದಲ್ಲಿ ದಾಳಿ ನಡೆಯುವ ಸಾಧ್ಯತೆಯಿದ್ದು, ಹಿಂಸಾಪೀಡಿತ ಕಣಿವೆ ರಾಜ್ಯದ ಜಮ್ಮುಕಾಶ್ಮೀರ ಸೇರಿದಂತೆ ಎಲ್ಲೆಡೆ ಹೈ ಅಲರ್ಟ್ ಘೋಷಣೆ ಮಾಡಿರುವುದರಿಂದ ನಡೆಯಬಹುದಾದ ದೊಡ್ಡ ಪ್ರಮಾಣದ ಅನಾಹುತ ತಪ್ಪಿದಂತಾಗಿದೆ.
ಪಾಕ್ನ ಎಫ್16 ಯುದ್ಧ ವಿಮಾನ ಛಿದ್ರ:
ಇನ್ನು ನಿನ್ನೆ ಪಾಕ್ ಆಕ್ರಮಿತ ಜಮ್ಮುಕಾಶ್ಮೀರದ ಮುಜಾಫರಾಬಾದ್, ಬಾಲ್ಕೋಟ್ ಮತ್ತು ಚಕೋತಿಯಲ್ಲಿ ಭಾರತೀಯ ವಾಯುಪಡೆಯ ಮೀರಜ್-2000ಯುದ್ಧ ವಿಮಾನಗಳು ಜೈಷ್-ಇ-ಮೊಹಮ್ಮದ್ ಉಗ್ರರ ಶಿಬಿರಗಳನ್ನು ನಿರ್ನಾಮ ಮಾಡಿ 350 ಉಗ್ರರನ್ನು ಹತ್ಯೆ ಮಾಡಿತ್ತು.
ಇದಕ್ಕೆ ಪ್ರತೀಕಾರವಾಗಿ ಇಂದು ಬೆಳಗ್ಗೆ ಪಾಕ್ ವಾಯುಪಡೆಗೆ ಸೇರಿದ ಎಫ್16 ಮೂರು ಯುದ್ಧ ವಿಮಾನಗಳು ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್ ಮತ್ತು ಕಿಶಾನ್ಗಂಜ್ ಎಂಬಲ್ಲಿ ದಾಳಿ ನಡೆಸಲು ಮುಂದಾಯಿತು.
ತಕ್ಷಣವೇ ಎಚ್ಚೆತ್ತುಕೊಂಡ ಭಾರತದ ವಾಯುಸೇನೆ ಪಾಕ್ಗೆ ಸೇರಿದ ಮೂರು ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದವು.
ಗಡಿ ನಿಯಂತ್ರಣ ರೇಖೆ(ಎಲ್ಒಸಿ)ಗೆ 3 ಕಿ.ಮೀ ಅಂತರದಲ್ಲಿರುವ ಲಾಮಾ ವ್ಯಾಲಿ ಎಂಬಲ್ಲಿ ಪಾಕಿಸ್ತಾನದ ಎಫ್16 ವಿಮಾನವನ್ನು ಭಾರತದ ಸುಖೋಯ್-30 ಯುದ್ಧ ವಿಮಾನ ಹೊಡೆದುರುಳಿಸಿದೆ.
ವಿಮಾನ ನೆಲಕ್ಕುರುಳಿ ಬೀಳುತ್ತಿದ್ದಂತೆ ಎಫ್16ನಲ್ಲಿದ್ದ ಪೈಲೆಟ್ ಪ್ಯಾರಾಚೂಟ್ ಮೂಲಕ ಕೆಳಗಿಳಿದು ಪರಾರಿಯಾಗಿದ್ದಾನೆ. ಈತನನ್ನು ಜೀವಂತವಾಗಿ ಹಿಡಿಯಲು ಭಾರತದ ಸೇನಾಪಡೆ ಇಡೀ ಪ್ರದೇಶವನ್ನು ಸುತ್ತುವರೆದಿದ್ದು, ಶೋಧ ಮುಂದುವರೆಸಿವೆ.
ಹೈ ಅಲರ್ಟ್:
ಬೆಳಗ್ಗೆ ಇದ್ದಕ್ಕಿದ್ದಂತೆ ಗಡಿ ನಿಯಂತ್ರಣ ರೇಖೆಯಿಂದ ಪಾಕಿಸ್ತಾನದ ಮೂರು ಯುz-್ಧ ವಿಮಾನಗಳು ಭಾರತದೊಳಗೆ ನುಸುಳಿದ್ದವು. ಭಾರತದ ಮೇಲೆ ನೆರೆ ರಾಷ್ಟ್ರ ಯಾವುದೇ ಸಂದರ್ಭದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಹಿನ್ನೆಲೆಯಲ್ಲಿ ಜಮ್ಮುಕಾಶ್ಮೀರ ಸೇರಿದಂತೆ ಎಲ್ಲೆಡೆ ಹೈ ಅಲರ್ಟ್ ಘೋಷಣೆ ಮಾಡಲಾಗಿತ್ತು.
ಭೂಸೇನೆ ಮತ್ತು ವಾಯುಸೇನೆಯನ್ನು ಸರ್ವ ಸನ್ನದ್ಧವಾಗಿ ಇಟ್ಟಿರುವುದರಿಂದ ಪಾಕ್ನ ಮೂರು ಯುದ್ಧ ವಿಮಾನಗಳು ಒಳನುಸುಳಿದರೂ ಬಗ್ಗುಬಡಿಯುವಲ್ಲಿ ಭಾರತ ಯಶಸ್ವಿಯಾಗಿದೆ.
ಮೀರಜ್, ಸುಕೋಯ್ ಸೇರಿದಂತೆ ಮತ್ತಿತರ ಯುದ್ಧ ವಿಮಾನಗಳು ತಕ್ಷಣವೇ ಸಂಭಾವ್ಯ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಗಿವೆ ಎಂದು ವರದಿಯಾಗಿದೆ.
ವಿಮಾನ ಹಾರಾಟ ರದ್ದು:
ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸಲು ಮುಂದಾಗಿರುವುದರಿಂದ ಜಮ್ಮುಕಾಶ್ಮೀರದಲ್ಲಿ ಸೇನಾ ಪಡೆ ಹೈ ಅಲರ್ಟ್ ಘೋಷಣೆ ಮಾಡಿದೆ.
ರಾಜಧಾನಿ ಶ್ರೀನಗರ, ಲೇಹ್, ರಜೌರಿ, ಜಮ್ಮು, ನೌಶೇರಾ, ಪಠಾಣ್ಕೋಟ್ ಸೇರಿದಂತೆ ಎಲ್ಲ ಕಡೆ ಭಾರೀ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಕೆಲ ಉಗ್ರಗಾಮಿ ಸಂಘಟನೆಗಳು ವಿಮಾನ ಅಪಹರಣ ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ವಿಭಾಗ ಹೇಳಿದೆ. ಹೀಗಾಗಿ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ನಿನ್ನೆಯಷ್ಟೇ ಭಾರತದ ವಾಯುಸೇನೆ ಪಿಒಕೆಯಲ್ಲಿರುವ ಮುಜಾಫರಾಬಾದ್, ಬಾಲಕೋಟ್ ಮತ್ತು ಚಕೋತಿಯಲ್ಲಿರುವ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 350ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದರು.