ಔಷಧ ಖರೀದಿ ವೇಳೆ ಜಾಗ್ರತೆ ವಹಿಸಬೇಕು-ವಿಜ್ಞಾನಿ ಡಾ.ಪಿ.ದ್ವಾರಕನಾಥ್

ಬೆಂಗಳೂರು, ಫೆ.27-ಔಷಧ ಖರೀದಿ ವೇಳೆ ಜಾಗ್ರತೆ ವಹಿಸದೆ ಇದ್ದರೆ ಅಡ್ಡ ಪರಿಣಾಮಗಳುಂಟಾಗಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಜೀವ ರಾಸಾಯನಶಾಸ್ತ್ರದ ವಿಜ್ಞಾನಿ ಡಾ.ಪಿ.ದ್ವಾರಕನಾಥ್ ಎಚ್ಚರಿಕೆ ನೀಡಿದರು.

ವಿಜ್ಞಾನ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ವಿಜ್ಞಾನದ ಕಂಪನಗಳು ಕುರಿತ ಅಂತರ ಕಾಲೇಜು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು , ಭಾರತೀಯ ಔಷಧ ಪದ್ಧತಿಗಳಲ್ಲಿ ಮೊದಲಿನಿಂದಲೂ ಆಯುರ್ವೇದ, ಸಿದ್ಧ, ಯುನಾನಿ ಹೆಚ್ಚು ಬಳಕೆಯಲ್ಲಿದ್ದವು. ಇತ್ತೀಚಿನ ದಿನಗಳಲ್ಲಿ ಅಲೋಪತಿ ವಿಶ್ವದಲ್ಲೇ ಹೆಚ್ಚು ಬಳಕೆಯಾಗುತ್ತಿದೆ. ಅಲೋಪತಿ ಔಷಧಿಗಳ ಪೈಕಿ ಅದರ ಔಷಧೀಯ ಗುಣ ಮುಖ್ಯವೇ ಹೊರತು ಅದರ ಹೆಸರು, ಖ್ಯಾತಿ ಅಲ್ಲ.

ಬ್ರಾಂಡೆಡ್ ಹೆಸರಿನಲ್ಲಿ ದುಬಾರಿ ಬೆಲೆಗೆ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಔಷಧ ಗುಣ ಮತ್ತು ಪರಿಣಾಮಗಳು ಎಲ್ಲಾ ಬ್ರಾಂಡ್‍ಗಳಲ್ಲಿ ಏಕರೂಪವಾಗಿರುತ್ತವೆ. ಹಾಗಾಗಿ ಇತ್ತೀಚೆಗೆ ಜನರಿಕ್ ಔಷಧ ಬಳಕೆ ಮುಂಚೂಣಿಗೆ ಬರುತ್ತಿದೆ.

ಯಾವುದೇ ಪ್ರಚಾರವಿಲ್ಲದೆ, ಗುಣಮಟ್ಟದ ಔಷಧಿಗಳು ಜನರಿಕ್ ಮೂಲಕ ಸರಬರಾಜಾಗುತ್ತಿವೆ. ಬೇರೆ ಬ್ರಾಂಡೆಡ್ ಔಷಧಿಗಳಿಗೆ ಹೋಲಿಸಿದರೆ ಇದರ ಬೆಲೆ ಹಲವಾರು ಪಟ್ಟು ಕಡಿಮೆ ಇರುತ್ತದೆ. ಆದರೆ ಜನಸಾಮಾನ್ಯರು ಜಾಹೀರಾತುಗಳನ್ನು ನೋಡಿ ಕೆಲವು ಔಷಧ ಬಳಕೆಗೆ ಮುಂದಾಗುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ. ಕೇಂದ್ರ ಸರ್ಕಾರ ಔಷಧ ಉತ್ಪಾದನೆಗೆ ಮುನ್ನ ಹಲವಾರು ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತದೆ. ಸಂಶೋಧನೆ ಮತ್ತು ಪ್ರಯೋಗ, ಪ್ರಯೋಗ ಯಶಸ್ವಿಯಾದ ನಂತರ ಪ್ರಾಯೋಗಿಕ ಹಂತ ಇದೆಲ್ಲವನ್ನು ದಾಟಿದ ಮೇಲೆ ಔಷಧಿ ಉತ್ಪಾದನೆಗೆ ಅವಕಾಶ ನೀಡಲಾಗುತ್ತದೆ ಎಂದರು.

ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡು ತಯಾರಾಗುತ್ತಿರುವ ಔಷಧಿಗಳು ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ ಔಷಧ ಖರೀದಿ ಮತ್ತು ಬಳಕೆ ಮಾಡುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಸಾಂಕ್ರಾಮಿಕ ರೋಗಗಳು ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಜನ ವಲಸೆ ಬಂದಾಗ ಅಲ್ಲಿರುವ ಸಾಂಕ್ರಾಮಿಕ ರೋಗಗಳು ತಗಲುವ ಸಾಧ್ಯತೆ ಇದೆ. ಹೀಗಾಗಿ ಸಾಂಕ್ರಾಮಿಕರೋಗಗಳ ಪೀಡಿತ ದೇಶದ ಪ್ರಜೆಗಳು ಬಂದಾಗ ಅವರನ್ನು ತಪಾಸಣೆ ನಡೆಸಲಾಗುತ್ತದೆ.

ಔಷಧ ಕ್ಷೇತ್ರ ಅತ್ಯಮೂಲ್ಯ ಪಾತ್ರ ವಹಿಸಿದ್ದು, ಜೀವರಕ್ಷಣೆಯ ಮಹತ್ವದ ಜವಾಬ್ದಾರಿ ನಿಭಾಯಿಸುತ್ತಿದೆ. ಇಲ್ಲಿ ಅಷ್ಟೇ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕಿದೆ ಎಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಕೆ.ಎಸ್.ವೀಣಾ, ಅಧ್ಯಾಪಕರಾದ ಡಾ.ಆರ್.ಸುಮಿತ್ರಾ, ಪೆÇ್ರ.ಎಚ್.ಎಸ್.ಸುಧೀಂದ್ರ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ