ನಗರದ ನಾಲ್ಕೂ ವಲಯಗಳಲ್ಲೂ ಹೈಟೆಕ್ ಆಸ್ಪತ್ರೆ ನಿರ್ಮಾಣ-ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಫೆ.27-ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿ ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಿಸುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು.

ಜಯದೇವ ಆಸ್ಪತ್ರೆ ಆವರಣದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ನೆರವಿನ 300 ಹಾಸಿಗೆಗಳ ಸಾಮಥ್ರ್ಯದ ನೂತನ ಆಸ್ಪತ್ರೆ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ವತಿಯಿಂದ ನಗರದ ನಾಲ್ಕೂ ವಲಯಗಳಲ್ಲೂ ಹೈಟೆಕ್ ಆಸ್ಪತ್ರೆ ನಿರ್ಮಿಸುವ ಚಿಂತನೆ ಇದೆ. ಪ್ರತಿ ಕುಟುಂಬಕ್ಕೂ ಉತ್ತಮ ಆರೋಗ್ಯ ಸೇವೆ ದೊರೆಯಬೇಕೆಂಬುದು ಸರ್ಕಾರದ ಉದ್ದೇಶ ಎಂದರು.

ಸಂಚಾರ ದಟ್ಟಣೆಯಿಂದಾಗಿ ರೋಗಿಗಳು ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ತೊಂದರೆ ಯಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಲ್ಕೂ ದಿಕ್ಕುಗಳಲ್ಲಿ ಆಸ್ಪತ್ರೆಗಳನ್ನು ನಿರ್ಮಿಸುವ ಚಿಂತನೆ ಇದೆ. ಅಲ್ಲದೆ, ಸಂಜಯ್‍ಗಾಂಧಿ ಆಸ್ಪತ್ರೆ ಮತ್ತು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದರು.

ಬಡವರಿಗೆ ಉಚಿತ ಆರೋಗ್ಯ ಸೇವೆ ದೊರೆಯಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೂ ಹಲವು ದಾನಿಗಳು ನೆರವು ನೀಡಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

ಯಾವುದೇ ಖಾಸಗಿ ಆಸ್ಪತ್ರೆಗಳಿಗಿಂತಲೂ ಕಡಿಮೆ ಇಲ್ಲವೆಂಬಂತೆ ಉತ್ತಮ ಮಟ್ಟದ ಚಿಕಿತ್ಸೆ ಜಯದೇವ ಆಸ್ಪತ್ರೆಯಲ್ಲಿ ದೊರೆಯುತ್ತಿದೆ. ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಉತ್ತಮ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ನಿಟ್ಟಿನಲ್ಲಿ ಜಯದೇವ ಆಸ್ಪತ್ರೆ ರಾಷ್ಟ್ರದಲ್ಲೇ ಉತ್ತಮ ಆಸ್ಪತ್ರೆಯಾಗಿದ್ದು, ಇತರೆ ಸರ್ಕಾರಿ ಆಸ್ಪತ್ರೆಗಳಿಗೆ ಮಾರ್ಗದರ್ಶಕವಾಗಿದೆ ಎಂದು ಹೇಳಿದರು.

ಮೈಸೂರು ಹಾಗೂ ಕಲಬುರಗಿಯಲ್ಲೂ ಜಯದೇವ ಆಸ್ಪತ್ರೆಗಳಿದ್ದು, ರೋಗಿಗಳಿಗೆ ಸುಲಭ ದರದಲ್ಲಿ ಚಿಕಿತ್ಸೆ ದೊರೆಯುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಾರಂಭಿಸಿದ ನಂತರ ರೋಗಿಗಳಿಂದ ಹಣ ಪಾವತಿಗೆ ಅವಕಾಶ ಕಲ್ಪಿಸುವ ಆಸ್ಪತ್ರೆ ಇದಾಗಿದೆ. ಹೃದ್ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಪ್ರತಿಷ್ಠಿತ ಆಸ್ಪತ್ರೆ ಇದಾಗಿದೆ ಎಂದು ಶ್ಲಾಘಿಸಿದರು.

ಜಯದೇವ ಆಸ್ಪತ್ರೆ ನಿರ್ದೇಶಕರಾಗಿರುವ ಡಾ.ಮಂಜುನಾಥ್ ಅವರು 45 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ ಆಸ್ಪತ್ರೆಯ ಬ್ಲಾಕ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಇನ್ಫೋಸಿಸ್ ಸಂಸ್ಥೆಯ ಡಾ.ಸುಧಾಮೂರ್ತಿ ಅವರು ಸಂಪೂರ್ಣ ಜವಾಬ್ದಾರಿ ಹೊರುವುದಾಗಿ ಹೇಳಿ ಒಂದು ವಾರದಲ್ಲಿ ಸಿದ್ಧತೆ ಮಾಡಿಕೊಳ್ಳಲು ಸಲಹೆ ಮಾಡಿದರು. ತಾಯಿ ಹೃದಯದ ಸುಧಾಮೂರ್ತಿ ಅವರ ಸಮಾಜಸೇವೆ ಇತರೆ ಕೈಗಾರಿಕೋದ್ಯಮಿಗಳಿಗೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.

ಜಯದೇವ ಆಸ್ಪತ್ರೆ ನಿರ್ದೇಶಕರಾದ ಡಾ.ಮಂಜುನಾಥ್ ಮಾತನಾಡಿ, ಜಯದೇವ ಆಸ್ಪತ್ರೆ ದೇಶದಲ್ಲೇ ದೊಡ್ಡ ಪ್ರಮಾಣದ ಹೃದ್ರೋಗ ಆಸ್ಪತ್ರೆಯಾಗಿದೆ.

ಈಗಾಗಲೇ 700 ಹಾಸಿಗೆ ಸಾಮಥ್ರ್ಯ ಹೊಂದಿದೆ. ಇನ್ಫೋಸಿಸ್‍ನ ಸುಧಾಮೂರ್ತಿ-ನಾರಾಯಣಮೂರ್ತಿ ಅವರು ಸೇವಾ ದಂಪತಿಯಾಗಿದ್ದಾರೆ. ಹಣವಿದ್ದವರಲ್ಲಿ ಸೇವಾ ಮನೋಭಾವ ಕಡಿಮೆ. ಆದರೆ ಈ ದಂಪತಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪ್ರಶಂಸಿಸಿದರು.

ಹೊಸ ಆಸ್ಪತ್ರೆ ಕಟ್ಟಡ 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕಟ್ಟಡದ ಪೂರ್ಣ ಹೊಣೆಯನ್ನು ಇನ್ಫೋಸಿಸ್ ವಹಿಸಿಕೊಂಡಿದೆ ಎಂದರು.

ಇನ್ಫೋಸಿಸ್‍ನ ಸುಧಾಮೂರ್ತಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳು ಉತ್ತಮ ಕೆಲಸ ಮಾಡುತ್ತದೆ ಎಂಬ ಬಗ್ಗೆ ತುಂಬ ಅಭಿಮಾನವಿದೆ. ಯಾವುದೇ ಪದವಿ, ಸನ್ಮಾನದಿಂದ ನಮಗೆ ಸಂತೋಷ ಸಿಗುವುದಿಲ್ಲ. ರೋಗಿಗಳ ಉತ್ತಮ ಆರೋಗ್ಯವೇ ನಮಗೆ ಸಂತೋಷ ತರುತ್ತದೆ. ಹಾಗಾಗಿ ಇನ್ಫೋಸಿಸ್ ಪ್ರತಿಷ್ಠಾನದಿಂದ ಕಟ್ಟಡ ನಿರ್ಮಿಸಲು ನೆರವು ನೀಡುತ್ತಿರುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ಸಚಿವರಾದ ಸಾ.ರಾ.ಮಹೇಶ್, ಸೌಮ್ಯರೆಡ್ಡಿ, ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ರಾಮಚಂದ್ರ ಮುಂತಾದವರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ