ಆಡಿಯೋ ಪ್ರಕರಣವನ್ನು ಎಸ್‍ಐಟಿಗೆ ವಹಿಸಿರುವದರ ಹಿಂದೆ ಸಿದ್ದರಾಮಯ್ಯ ಕುತಂತ್ರವಿದೆ: ಮಾಜಿ ಡಿಸಿಎಂ. ಕೆ.ಎಸ್.ಈಶ್ವರಪ್ಪ

ಬೆಂಗಳೂರು, ಫೆ.14- ವಿವಾದಿತ ಧ್ವನಿ ಸುರುಳಿ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‍ಐಟಿ) ವಹಿಸುವ ಮೂಲಕ ಜೆಡಿಎಸ್ ಪಕ್ಷವನ್ನು ಸದೆ ಬಡಿಯಲು ಕಾಂಗ್ರೆಸ್ ಹುನ್ನಾರ ಮಾಡಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೂ ಆರೋಪ ಕೇಳಿಬಂದಿರುವುದರಿಂದ ಕುಮಾರಸ್ವಾಮಿ ಅವರಿಗೂ ತೊಂದರೆ ಕೊಡುವ ನಿಟ್ಟಿನಲ್ಲಿ ಹುನ್ನಾರ ನಡೆಸಲಾಗಿದೆ ಎಂದು ದೂರಿದರು.

ಇದರ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕುತಂತ್ರ ಅಡಗಿದೆ ಎಂದು ಆರೋಪಿಸಿದ ಈಶ್ವರಪ್ಪ, ಜೆಡಿಎಸ್ ಮೇಲೆ ಸಿದ್ದಾರಾಮಯ್ಯ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಯಾವ ರೀತಿ ತನಿಖೆ ನಡೆಸಬೇಕು ಎಂಬುದನ್ನು ಘೋಷಣೆ ಮಾಡುವ ಮುನ್ನವೇ ಸಿದ್ದರಾಮಯ್ಯ ಅವರು ಎಸ್‍ಐಟಿ ತನಿಖೆಗೆ ವಹಿಸಲು ಸರ್ಕಾರ ತೀರ್ಮಾನ ಮಾಡಿದೆ ಎನ್ನುತ್ತಾರೆ. ಇದರ ಹಿಂದೆ ಸಿಎಂ ಅವರನ್ನು ಸಿಲುಕಿಸುವ ಪ್ರಯತ್ನವಿದೆ ಎಂದು ಆರೋಪಿಸಿದರು.

ಸಭಾಧ್ಯಕ್ಷರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದ್ದರೂ ಸಿದ್ದರಾಮಯ್ಯ ಅವರೇ ಎಸ್‍ಐಟಿಗೆ ಕೊಡುವುದು ಸರ್ಕಾರದ ತೀರ್ಮಾನ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಾವು ಮಾತನಾಡಿರುವುದು ನಿಜ. ಆದರೆ, ಧ್ವನಿಸುರುಳಿಯನ್ನು ತಿರುಚಲಾಗಿದೆ ಎಂದು ಆಪಾದಿಸಿದ್ದಾರೆ. ಮುಖ್ಯಮಂತ್ರಿ ಕೂಡ ಸಂಭಾಷಣೆಯನ್ನು ವಿಡಿಯೋ ಕಾನ್ಫರೆನ್ಷ್ ಮೂಲಕ ಆಲಿಸಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ