ಬೆಂಗಳೂರು, ಫೆ.8- ದೇವದುರ್ಗದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜೆಡಿಎಸ್ ಶಾಸಕರನ್ನು ಸೆಳೆಯಲು ನಡೆಸಿದ ಆಡಿಯೋ ಟೇಪ್ ಅನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಬಿಡುಗಡೆ ಮಾಡುವ ಮೂಲಕ ಬಿಜೆಪಿಯವರು ನಡೆಸುತ್ತಿದ್ದ ಆಪರೇಷನ್ ಕಮಲವನ್ನು ಬಹಿರಂಗಗೊಳಿಸಿ ನೈತಿಕತೆ ಇದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸವಾಲು ಹಾಕಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು 2008ರಲ್ಲಿ ಆಪರೇಷನ್ ಕಮಲ ನಡೆಸಿದ್ದರು. ಈಗ ಅದೇ ಚಾಳಿಯನ್ನು ಮುಂದುವರಿಸಿದ್ದಾರೆ. ಗುರುಮಿಟ್ಕಲ್ನ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ್ ಅವರ ಪುತ್ರ ಶರಣುಗೌಡ ಅವರಿಗೆ ಕರೆ ಮಾಡಿ ದೇವದುರ್ಗದ ಐಬಿಗೆ ಕರೆಸಿ ಮಾತುಕತೆಯನ್ನೂ ನಡೆಸಿದ್ದಾರೆ. ಈಗಾಗಲೇ 13 ರಿಂದ 14 ಮಂದಿ ಶಾಸಕರು ತಮ್ಮೊಂದಿಗಿದ್ದು, ತಾವೂ ಬಂದರೆ ಸರ್ಕಾರ ಉರುಳಿಸುವುದಾಗಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಶರಣಗೌಡ ಅವರಿಗೆ 25 ಕೋಟಿ ರೂ.ಗಳ ಹಣದ ಆಮಿಷವನ್ನೂ ಒಡ್ಡಿದ್ದಾರೆ.ಚುನಾವಣೆ ವೆಚ್ಚವನ್ನು ತಾವೇ ಭರಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಪಕ್ಷಾಂತರ ಕಾಯ್ದೆ ಬಗ್ಗೆ ಭಯ ಪಡದಂತೆ ತಿಳಿಸಿರುವ ಯಡಿಯೂರಪ್ಪ ಈಗಾಗಲೇ ಪ್ರಧಾನಿ ಮೋದಿ, ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ನ್ಯಾಯಾಧೀಶರನ್ನು ಬುಕ್ ಮಾಡಲಿದ್ದಾರೆ. ಸ್ಪೀಕರ್ ರಮೇಶ್ಕುಮಾರ್ ಅವರನ್ನು 50 ಕೋಟಿ ರೂ. ಆಮಿಷವೊಡ್ಡಿ ತಮ್ಮ ಪರವಾಗಿರುವಂತೆ ನೋಡಿಕೊಳ್ಳಲಾಗಿದೆ ಎಂದು ಆಡಿಯೋಕ್ಲಿಪ್ನಲ್ಲಿ ಚರ್ಚಿಸಿದ್ದಾರೆ.
ಸ್ಪೀಕರ್ ಅವರು ಓರ್ವ ಸೂಕ್ಷ್ಮವ್ಯಕ್ತಿ.ಅಂತಹವರ ವಿರುದ್ಧ ಇಂತಹ ಗಂಭೀರ ಆರೋಪ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಸ್ಪೀಕರ್ಗೆ ಪತ್ರ ಬರೆಯುತ್ತೇನೆ. ಕಾನೂನು ರೀತಿ ಅವರೇ ಕ್ರಮ ಕೈಗೊಳ್ಳಲಿ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಸದರಿ ಆಡಿಯೋ ಕ್ಲಿಪ್ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕಳುಹಿಸುತ್ತೇನೆ. ಅವರು ಕಾನೂನು ರೀತಿ ಯಾವ ಕ್ರಮ ಕೈಗೊಳ್ಳುತ್ತಾರೋ ಕೈಗೊಳ್ಳಲಿ. ಅಲ್ಲದೆ, ಆಪರೇಷನ್ ಕಮಲದ ಈ ಕಾರ್ಯತಂತ್ರದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಹೆಸರು ಕೇಳಿಬಂದಿದ್ದು, ಈ ಕುರಿತು ಸಮಗ್ರ ತನಿಖೆಯ ಅಗತ್ಯವಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಕೆಆರ್ ಪೇಟೆಯ ಜೆಡಿಎಸ್ ಶಾಸಕ ನಾರಾಯಣಗೌಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅವರನ್ನು ಕೂಡ ತಮ್ಮೊಂದಿಗಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ದಿಕ್ಕು ತಪ್ಪಿಸುತ್ತಿದೆ ಎಂದರು.
ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಅಸಮಾಧಾನದ ಕಾರಣದಿಂದ ಉಂಟಾದ ಗೊಂದಲವನ್ನು ಬಿಜೆಪಿ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದೆ. ಹಾಸನದ ಬಿಜೆಪಿ ಶಾಸಕ ಪ್ರೀತಮ್ಗೌಡ, ಅಶ್ವತ್ಥ ನಾರಾಯಣ್, ನಾಗರಾಜ್ ಸೇರಿದಂತೆ ಅನೇಕರು ಈ ಆಪರೇಷನ್ ಕಮಲದ ಕಾರ್ಯತಂತ್ರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಗರು ನೇರವಾಗಿ ಶಾಸಕರನ್ನು ಸಂಪರ್ಕಿಸದೆ ಅವರ ಆಪ್ತರ ಮೂಲಕ ಅನೇಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ.ಶಾಸಕ ಗೌರಿಶಂಕರ್ ಅವರನ್ನು ಅವರ ಸಹೋದರ ಕುಮಾರ್ ಅವರ ಮೂಲಕ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.ಎಲ್ಲ ಅತೃಪ್ತ ಶಾಸಕರನ್ನು ಕಳೆದ ಒಂದು ತಿಂಗಳಿನಿಂದ ಮುಂಬೈನ ಹೊಟೇಲ್ನಲ್ಲಿರಿಸಿದ್ದು, ಇದಕ್ಕೆ ಯಾವ ಹಣ ಖರ್ಚು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ತಾವು ಪ್ರಧಾನಿಯಾದಾಗ ನಮಸ್ಕಾರ ಮಾಡಿ ಸಂಸತ್ ಪ್ರವೇಶಿಸಿ ಪ್ರಜಾಪ್ರಭುತ್ವ ಉಳಿಸುವ ದೇಗುಲ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಬಿಜೆಪಿಯವರು ನಡೆಸುತ್ತಿರುವ ಆಪರೇಷನ್ ಕಮಲಕ್ಕೆ ಏನು ಹೇಳುತ್ತಾರೆ.
ನೋಟು ಅಮಾನ್ಯೀಕರಣದಿಂದ ಕಪ್ಪುಹಣ ನಿಯಂತ್ರಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಆಪರೇಷನ್ ಕಮಲಕ್ಕೆ ಆಮಿಷವೊಡ್ಡಲಾಗುತ್ತಿರುವ ಹಣ ಯಾವುದು ಎಂದು ಕಿಡಿಕಾರಿದರು.
ರಾಜ್ಯದ ರೈತರ ಸಾಲಮನ್ನಾದ ಬಗ್ಗೆ ಸಂಸತ್ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ಗಳಿಗೆ 2000 ಕೋಟಿ, ಸಹಕಾರ ಬ್ಯಾಂಕ್ಗಳಿಗೆ 1500 ಕೋಟಿ ಸಾಲಮನ್ನಾದ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಪ್ರಧಾನಿಯವರು ತಪ್ಪು ಮಾಹಿತಿ ನೀಡಿದ್ದು, ಈ ಬಗ್ಗೆ ಪ್ರತಿಪಕ್ಷದವರು ದನಿ ಎತ್ತಬೇಕು ಎಂದು ಹೇಳಿದರು.
ಮೋದಿಯವರು ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಭಾಷಣ ಮಾಡುತ್ತಾರೆ.ಆದರೆ, ತಮ್ಮದೇ ಪಕ್ಷದವರ ಪ್ರಜಾಪ್ರಭುತ್ವ ವಿರೋಧಿ ಕಾರ್ಯಕ್ಕೆ ಪರೋಕ್ಷ ಬೆಂಬಲ ನೀಡುವ ಮೂಲಕ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಬಜೆಟ್ ಮಂಡಿಸಿ ಮಾರ್ಚ್ ಅಂತ್ಯದೊಳಗೆ ಲೇಖಾನುದಾನ ಪಡೆಯಬೇಕಿದೆ.ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಲಿದೆ. ಲೇಖಾನುದಾನ ಪಡೆಯದೆ ಹೋದರೆ ನೌಕರರಿಗೆ ಸಂಬಳ, ಸರ್ಕಾರ ನಡೆಸುವುದೇ ದುಸ್ತರವಾಗುತ್ತದೆ.ಬಜೆಟ್ಗೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ಸಾಧಿಸುವುದಾದರೂ ಏನು ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದವರು ನೀಡಿರುವ ವಿಪ್ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಯಡಿಯೂರಪ್ಪನವರು ಹೇಳುತ್ತಾರೆ.ಇಂತಹವರು ಪ್ರಜಾಪ್ರಭುತ್ವಕ್ಕೆ ಯಾವ ರೀತಿಯ ಬೆಲೆ ನೀಡುತ್ತಾರೆ ಎಂಬುದು ತಿಳಿಯುತ್ತದೆ.ಈ ಬಗ್ಗೆ ಮುಂದಿನ ದಿನಗಳಲ್ಲಿ ಜನರೇ ತೀರ್ಮಾನಿಸುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಸಾ.ರಾ.ಮಹೇಶ್, ಪುಟ್ಟರಾಜು, ಗುರುಮಿಟ್ಕಲ್ ಶಾಸಕ ನಾಗೇಗೌಡ, ಕುಂದಕೂರ್ ಪುತ್ರ ಶರಣಗೌಡ ನಾಯಕ್, ಕೋನರೆಡ್ಡಿ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಮುಂತಾದವರಿದ್ದರು.