ಲೇಖಕರು ತಮ್ಮ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು

Varta Mitra News

ಬೆಂಗಳೂರು, ಜ.19- ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಅಪರಿಚಿತರಿದ್ದಾರೆ. ಎಲ್ಲ ಧರ್ಮದ ಸಾಹಿತಿಗಳು, ಲೇಖಕರು ಒಗ್ಗೂಡಿದರೆ ಸಾಹಿತ್ಯ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಪ್ರಸಿದ್ಧ ಲೇಖಕ ಬೊಳುವಾರು ಮಹಮ್ಮದ್ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್‍ನ ಕುವೆಂಪು ಸಭಾಂಗಣದಲ್ಲಿ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, 30 ವರ್ಷದೊಳಗಿನ ಉದಯೋನ್ಮುಖ ಲೇಖಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕೆಲಸವಾಗಬೇಕು ಎಂದು ಹೇಳಿದರು.

ಲೇಖಕರು ತಮ್ಮ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು.ಇಂತಹ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆತಂದು ಅವರಿಗೆ ಪುಸ್ತಕಗಳನ್ನು ಪರಿಚಯಿಸಬೇಕು.ಇದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಮೂಡುತ್ತದೆ ಎಂದು ಸಲಹೆ ನೀಡಿದರು.

ಎಲ್ಲ ಧರ್ಮದ ಲೇಖಕರು ತಮ್ಮ ಧರ್ಮಕ್ಕೆ ಸೀಮಿತವಾಗದ ಎಲ್ಲ ಧರ್ಮಗಳ ಗ್ರಂಥಗಳ ಸಾರವನ್ನು ತಿಳಿದುಕೊಂಡು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಬೇಕಿದೆ ಎಂದು ಕರೆ ನೀಡಿದರು.

ದೀಪ್ತಿ ಭದ್ರಾವತಿ ಅವರು ಸಣ್ಣ ಸಣ್ಣ ಕಥೆಗಳ ಮೂಲಕ ಸ್ತ್ರೀವಾದಿ ಚಿಂತನೆಯೊಂದಿಗೆ ಯಶಸ್ಸು ಕಂಡಿದ್ದಾರೆ. ಅವರಿಗೆ ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತಸದ ವಿಷಯ ಎಂದು ಬೊಳುವಾರು ಮಹಮ್ಮದ್  ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಮತ್ತು ನಾಟಕಕಾರ ಡಾ.ನಟರಾಜ್ ತಲಘಟ್ಟಪುರ, ಲೇಖಕಿ ಕುಸುಮಾ ನರಸಿಂಹನ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲ ಸಂಪನ್ನಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ