ಬೆಂಗಳೂರು,ಜ.7- ಸಚಿವ ಪುಟ್ಟರಂಗ ಶೆಟ್ಟಿ ಅವರ ಮೇಲೆ ಉದ್ದೇಶಪೂರ್ವಕವಾಗಿ ಆರೋಪ ಮಾಡುವ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳಲು ಹುನ್ನಾರ ನಡೆಸಲಾಗುತ್ತಿದೆ ಎಂದು ಉಪ್ಪಾರ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಸ್. ಶಿವಕುಮಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ರಾಜಕೀಯ ಮುಖಂಡರ ಮೇಲೆ ಆಕ್ರೋಶವ್ಯಕ್ತಪಡಿಸಿದ ಅವರು, ರಾಜಕೀಯ ಮುಖಂಡರ ಈ ಉದ್ದೇಶ ಈಡೇರುವುದಿಲ್ಲ ಎಂದರು.
ಜನವರಿ 4 ರಂದು ವಿಧಾನ ಸೌಧಧ ವೆಸ್ಟ್ ಗೇಟ್ ಬಳಿ ಮೋಹನ್ ಎಂಬುವರ ಬಳಿ ಇದ್ದ 25 ಲಕ್ಷಕ್ಕೂ ಹೆಚ್ಚು ಹಣವನ್ನು ಪೆÇೀಲೀಸರು ವಶಪಡಿಸಿಕೊಂಡಿದ್ದಾರೆ. ಈ ವ್ಯಕ್ತಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಇಲಾಖೆಯ ಟೈಪಿಸ್ಟ್ ಎನ್ನುವ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆದಿಯಾಗಿ ಬಿಜೆಪಿ ಮುಖಂಡರು ಸಚಿವ ಪುಟ್ಟರಂಗ ಶೆಟ್ಟಿ ಅವರ ರಾಜೀನಾಮೆ ಕೇಳುತ್ತಿರುವುದು ಹಾಸ್ಯಾಸ್ಪದ.
ಈ ಹಿಂದೆ ಇವರ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಂಜುನಾಥ ಮತ್ತು ಕೃಷ್ಣಪ್ಪ ಅವರ ಕೈ ಶುದ್ದವಾಗಿಲ್ಲ ಎಂಬ ಕಾರಣಕ್ಕೆ ಸಚಿವರು ಅವರಿಗೆ ಗೇಟ್ಪಾಸ್ ಕೊಟ್ಟಿದ್ದಾರೆ. ಇದು ಸಚಿವರ ಕಾರ್ಯವೈಖರಿಯ ಪ್ರಾಮಾಣಿಕತೆಗೆ ಸಾಕ್ಷಿ. ಅಲ್ಲದೆ ಹಣ ಸಿಕ್ಕ ದಿನ ಸಚಿವರು ತಮ್ಮ ಕ್ಷೇತ್ರವಾದ ಚಾಮರಾಜನಗರದಲ್ಲಿದ್ದರು. ಹಾಗಾಗಿ ಈ ಹಣಕ್ಕೂ ಮಂತ್ರಿಗಳಿಗೂ ಸಂಬಂಧವಿಲ್ಲ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ ಎಂದರು.
ಸಿದ್ದರಾಮಯ್ಯ ನೇತೃತ್ವದ ಸರಕಾರ ಉಪ್ಪಾರ ಅಭಿವೃದ್ದಿ ನಿಗಮವನ್ನು ರಚನೆ ಮಾಡಿತ್ತು.ಆದರೆ, ನಮ್ಮ ಜನಾಂಗಕ್ಕೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ನೇಮಕಗೊಂಡಿರುವ ಪುಟ್ಟಲಿಂಗ ಶೆಟ್ಟಿ ಅವರ ವಿರುದ್ದ ಬಿಜೆಪಿ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದರು.
ಬಿಜೆಪಿ ಪುಟ್ಟರಂಗ ಶೆಟ್ಟಿ ಅವರ ರಾಜೀನಾಮೆ ಕೇಳುವ ಮೂಲಕ ಸಮಾಜವನ್ನು ತುಳಿಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.ಇದನ್ನು ರಾಜ್ಯ ಉಪ್ಪಾರ ಸಮಾಜವು ತೀವ್ರವಾಗಿ ಖಂಡಿಸುತ್ತದೆ.ಈ ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ವಿಧಾನಸೌಧದ ಒಳಭಾಗ ಮತ್ತು ಶಾಸಕರ ಭವನದಲ್ಲಿ ಏನೆಲ್ಲಾ ಅಕ್ರಮ ನಡೆದರೂ ಅಧಿಕಾರಕ್ಕೋಸ್ಕರ ಮೂಕ ಪ್ರೇಕ್ಷಕರಾಗಿದ್ದರು ಎಂದು ಕಿಡಿಕಾರಿದರು.
ಹಿಂದುಳಿದ ವರ್ಗಗಳ ಮಂತ್ರಿಗಳು ಹಾಗೂ ಮುಖಂಡರ ಮೇಲೆ ವಿನಾಕಾರಣ ಆರೋಪ ಮಾಡಿದರೆ ರಾಜ್ಯಾದ್ಯಂತ ಪ್ರತಿಪಕ್ಷಗಳ ವಿರುದ್ಧ ಪ್ರತಿಭಟನೆಗೂ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.
ಮಳವಳ್ಳಿ ಮಠದ ಚಿನ್ನಸ್ವಾಮಿ, ಚಿಕ್ಕತಾಂಡ ಶೆಟ್ಟಿ, ಚಾಮರಾಜನಗರ ಜಿಲ್ಲೆ ಗಡಿ ಯಜಮಾನರು, ಉಪ್ಪಾರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ, ರಂಗಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.