ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಸಿಎಂ ಕುಮಾರಸ್ವಾಮಿಯವರಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಅಪಮಾನ, ಶಾಸಕ ಡಾ.ಸುಧಾಕರ್

ಬೆಂಗಳೂರು,ಜ.7-ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಕೆಲವು ಶಾಸಕರ ಹೆಸರುಗಳನ್ನು ಕೈ ಬಿಡುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಅಪಮಾನ ಮಾಡಿದ್ದಾರೆ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆ ರಾಹುಲ್ ಗಾಂಧಿ ಅವರ ಮುಂದಾಳತ್ವದಲ್ಲಿ ನಡೆದಿದೆ. ಹೀಗಾಗಿ ಆ ಪಟ್ಟಿಯನ್ನು ಯಥಾವತ್ತಾಗಿ ಅಂಗೀಕರಿಸಬೇಕಿತ್ತು.ಇದರಲ್ಲಿ ಸುಧಾಕರ್, ಎಸ್.ಟಿ.ಸೋಮಶೇಖರ್, ಸುಬ್ಬಾರೆಡ್ಡಿ ಎಂಬ ಅವರ ಹುದ್ದೆಯ ಪ್ರಶ್ನೆಯಿಲ್ಲ.ರಾಹುಲ್ ಗಾಂಧಿ ಅವರ ಸೂಚನೆ ಮೇರೆಗೆ ಸಿದ್ದಗೊಂಡ ಪಟ್ಟಿ ಅಂಗೀಕಾರವಾಗಬೇಕಿತ್ತು ಎಂದು ಹೇಳಿದರು.

ನಾವು ಯಾವುದೇ ನಿಗಮ ಮಂಡಳಿಗಳ ಹುದ್ದೆಯನ್ನು ಕೇಳಿರಲಿಲ್ಲ. ಇಂಥದ್ದೇ ಹುದ್ದೆ ಬೇಕು ಎಂಬ ಬೇಡಿಕೆಯನ್ನು ಇಟ್ಟಿರಲಿಲ್ಲ. ಚಿಕ್ಕಬಳ್ಳಾಪುರ ಭಾಗದಲ್ಲಿ ಪಕ್ಷವನ್ನು ಬಲವಾಗಿ ಸಂಘಟಿಸಲು ಸಚಿವ ಸ್ಥಾನ ಬೇಕು ಎಂದು ಹೇಳಿದ್ದೆ. ಆದರೆ ಅದು ಸಿಕ್ಕಿಲ್ಲ. ಈಗಲೂ ಕೂಡ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದ ಅವರು, ನಿಗಮಮಂಡಳಿಗಳಲ್ಲಿ ತಾವು ಯವುದೇ ಹುದ್ದೆ ಕೇಳಿರಲಿಲ್ಲ. ರಾಹುಲ್‍ಗಾಂಧಿ ನೇತೃತ್ವದ ಸಭೆಯಲ್ಲಿ ನಮ್ಮನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿರುವುದು ತಿಳಿದುಬಂತು.

ಅದಕ್ಕೆ ಮುಖ್ಯಮಂತ್ರಿಯವರು ಒಪ್ಪಿಗೆ ಸೂಚಿಸಿಲ್ಲ. ಕಾಂಗ್ರೆಸ್ 80 ಸ್ಥಾನಗಳನ್ನು ಗೆದ್ದಿದ್ದು, ಜೆಡಿಎಸ್‍ಗೆ ಅಧಿಕಾರ ಬಿಟ್ಟುಕೊಟ್ಟಿದ್ದೇವೆ. ಹಾಗಂತ ಪ್ರತಿಯೊಂದು ವಿಷಯದಲ್ಲೂ ಜೆಡಿಎಸ್ ಮುಂದೆ ಮಂಡಿಯೂರಲು ಸಾಧ್ಯವಿಲ್ಲ. ನನ್ನ ಮಾತುಗಳನ್ನು ಯಾವ ರೀತಿ ಬೇಕಾದರೂ ಅರ್ಥೈಸಿಕೊಳ್ಳಬಹುದು ಎಂದು ಹೇಳಿದರು.
ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧಿಕಾರಿಗಳೇ ಸಾಕು ಎಂಬ ಧೋರಣೆಯನ್ನು ಮುಂದಿಟ್ಟುಕೊಂಡು ನಮ್ಮ ಹೆಸರನ್ನು ತಿರಸ್ಕರಿಸಿದ್ದಾರೆ.ಇದು ಸರಿಯಲ್ಲ. ರಾಜ್ಯದ ಆಡಳಿತ ನಡೆಸಲು ಮುಖ್ಯ ಕಾರ್ಯದರ್ಶಿಯವರೇ ಸಾಕು.ಮುಖ್ಯಮಂತ್ರಿ ಹುದ್ದೆ ಏಕೆ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸಿದ ಕೆಲವು ಹಿರಿಯ ಅಧಿಕಾರಿಗಳು ನಿವೃತ್ತಿಯ ನಂತರ ನಿಗಮಮಂಡಳಿ ಹಾಗೂ ಇತರ ಆಯಕಟ್ಟಿನ ಸ್ಥಾನಗಳಿಗೆ ಬಂದುಕೂರಲು ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕುವ ಇಚ್ಛಾಶಕ್ತಿ ಜನಪ್ರತಿನಿಧಿಗಳಿಗೆ ಇರಬೇಕು ಎಂದರು.
ವಿದ್ಯಾವಂತರು, ಯುವಕರಿಗೆ ಅವಕಾಶ ಸಿಕ್ಕಿಲ್ಲ. ಎಸ್ಸೆಸ್ಸೆಲ್ಸಿ ಪಾಸಾದವರು ಸಚಿವರಾಗಿದ್ದಾರೆ.ಅವರ ಬಳಿ ಎರಡುಮೂರು ಖಾತೆಗಳಿವೆ. ಹೈಕಮಾಂಡ್ ಜೊತೆ ಚರ್ಚೆ ಮಾಡುವ ಅಗತ್ಯವಿದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ