ಧಾರವಾಡ, ಜ.4- ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯ ಹಿರಿಮೆಯನ್ನು ಹೊರಗಿನವರಿಗೆ ಸಮರ್ಥವಾಗಿ ಹೊರದೇಶಗಳಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪನೆಯಾಗಬೇಕು ಎಂದು 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರರು ಆಗ್ರಹಿಸಿದ್ದಾರೆ.
ಧಾರಾವಾಡ ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಮಹಾಕವಿ ಪಂಪ ಮಹಾಮಂಟಪದ ಅಂಬಿಕಾತನಯದತ್ತ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರಾಗಿ ಅವರು ಭಾಷಣ ಮಾಡಿದರು.
ಬೇರೆ ರಾಜ್ಯಗಳಿಗಿಂತ ನಮ್ಮ ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿಗಳು ಭಿನ್ನವಾಗಿದೆ.ಆಧುನಿಕ ಕನ್ನಡ ಸಾಹಿತ್ಯ ಜಗತ್ತಿನ ಎಲ್ಲ ಚಿಂತನಾಕ್ರಮಗಳಿಗೆ ತನ್ನನ್ನು ಮುಕ್ತವಾಗಿ ತೆರೆದುಕೊಂಡಿರುವಷ್ಟು ಭಾರತದ ಇತರೆ ಯಾವುದೇ ಭಾಷೆಗಳು ತೆರೆದುಕೊಂಡಿಲ್ಲ. ಇಷ್ಟಿದ್ದರೂ ನಾವು ನಮ್ಮ ಹಿರಿಮೆಯನ್ನು ಹೊರಗಿನವರಿಗೆ ಸಮರ್ಪಕವಾಗಿ ತಿಳಿಸಲು ವಿಫಲರಾಗಿದ್ದೇವೆ ಎಂದು ವಿಷಾದಿಸಿದ್ದಾರೆ.
ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕøತಿಯನ್ನು ಬೇರೆಯವರಿಗೆ ತಿಳಿಸುವ ಅಗತ್ಯವಿದೆ. ಈ ವಿಷಯದಲ್ಲಿ ನಾವು ತಮಿಳು, ಬಂಗಾಲಿ ಬಾಷೆಗಳಿಗಿಂತ ಹಿಂದೆ ಇದ್ದೇವೆ. ಈ ಕೆಲಸ ಯಶಸ್ವಿಯಾಗಬೇಕಾದರೆ ವಿದೇಶಗಳಲ್ಲಿ ಕನ್ನಡ ಅಧ್ಯಯನ ಪೀಠಗಳನ್ನು ಸ್ಥಾಪಿಸಬೇಕು ಎಂದು ಅವರು ಸಲಹೆ ಮಾಡಿದರು.
ದುರ್ದೈವದ ಸಂಗತಿ ಎಂದರೆ ಹೊರನಾಡು ಮತ್ತು ಹೊರ ದೇಶಗಳಲ್ಲಿ ಇರುವ ಸರ್ಕಾರ ಮುಚ್ಚುತ್ತಿದೆ.ಬನಾರಸ್, ಅಹಮದಾಬಾದ್, ದೆಹಲಿ ವಿಶ್ವ ವಿದ್ಯಾಲಯಗಳಲ್ಲಿ ಇದ್ದ ಪೀಠಗಳು ಇತ್ತೀಚೆಗೆ ಮುಚ್ಚಿ ಹೋಗಿವೆ ಎಂದು ಡಾ.ಕಂಬಾರರು ಬೇಸರದಿಂದ ನುಡಿದರು.
ದೆಹಲಿಯ ಜವಹಾರ್ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿರುವ ಕನ್ನಡ ಅಧ್ಯಯನ ಪೀಠ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ವಿದೇಶಿಯರಿಗೆ ಕಲಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದೆ. ಕನ್ನಡೇತರರು ಕನ್ನಡ ಕಲಿಯಲು ನೆರವಾಗುವ ಕನ್ನಡ ಕಲಿಕೆ ಎಂಬ ಹೊಸ ರೀತಿಯ ಜಾಲತಾಣವನ್ನು ಸಿದ್ದಪಡಿಸಿದೆ ಈಗಾಗಲೇ 16,000ಕ್ಕೂ ಹೆಚ್ಚು ಜನರು ಕನ್ನಡ ಕಲಿಕೆ ಜಾಲತಾಣದ ಮೂಲಕ ಕನ್ನಡವನ್ನು ಕಲಿಯುತ್ತಿದ್ಧಾರೆ.ಈ ಪ್ರಯತ್ನ ಮುಂದುವರಿಸಿ ವರ್ಚುವಲ್ ತರಗತಿಗಳನ್ನು ನಡೆಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.