ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ : ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್

ಬೆಂಗಳೂರು, ಜ.4- ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಕಾಂಗ್ರೆಸ್ ಮುಕ್ತ ಮನಸ್ಸು ಹೊಂದಿದೆ. ಮೈತ್ರಿ ಬಿಟ್ಟು ಪ್ರತ್ಯೇಕವಾಗಿ ಸ್ಪರ್ಧೆ ಮಾಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ತಿಳಿಸಿದರು.
ಪಕ್ಷದ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದೇವೆ. ಆಡಳಿತ ನಡೆಯುತ್ತಿದೆ. ಲೋಕಸಭೆ ಚುನಾವಣೆಗೂ ಮೈತ್ರಿ ಮುಂದುವರೆಯುತ್ತದೆ. ಈ ಬಗ್ಗೆ ಸರ್ಕಾರ ರಚಿಸುವ ಸಂದರ್ಭದಲ್ಲೇ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧಿಸುವ ಕುರಿತು ನೀಡುತ್ತಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಪಕ್ಷದ ವರಿಷ್ಠರು ಮೈತ್ರಿಗೆ ಬದ್ಧರಾಗಿದ್ದಾರೆ. ಒಂದು ವೇಳೆ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದರೆ ಸರ್ಕಾರದ ಮೈತ್ರಿಯಲ್ಲಿ ಗೊಂದಲ ಉಂಟಾಗುತ್ತದೆ.ನಾವು ಒಟ್ಟಾಗಿ ಆಡಳಿತ ನಡೆಸುವುದು ಕಷ್ಟವಾಗಬಹುದು.ಸಂಪುಟದಲ್ಲಿ ಪರಸ್ಪರ ಚರ್ಚೆ ಮಾಡುವುದು ಕಷ್ಟವಾಗುತ್ತದೆ.ಎಲ್ಲಾ ದೃಷ್ಟಿಕೋನಗಳಿಂದ ಮೈತ್ರಿ ಮುಂದುವರೆಯಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ನಿಗಮ ಮಂಡಳಿ ನೇಮಕಾತಿಗೆ ವಿಷಯವಾಗಿ ಯಾವುದೇ ಗೊಂದಲಗಳಿಲ್ಲ. ಎಲ್ಲವೂ ಹಂತ ಹಂತವಾಗಿ ಬಗೆಹರಿಯುತ್ತವೆ. ಈಗಾಗಲೇ ಪಟ್ಟಿ ಸಿದ್ಧಗೊಂಡಿದೆ.ಶೀಘ್ರವೇ ಅದಕ್ಕೆ ಅಧಿಕೃತ ಸರ್ಕಾರಿ ಆದೇಶ ಹೊರಬೀಳಲಿದೆ ಎಂದು ಹೇಳಿದರು.

ನಿಗಮ ಮಂಡಳಿ ನೇಮಕಾತಿ ಸಂಬಂಧಪಟ್ಟಂತೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ವ್ಯಕ್ತಪಡಿಸಿರುವ ಅಸಮಾಧಾನಕ್ಕೆ ಪ್ರತಿಕ್ರಿಯಿಸಿ, ಮೈತ್ರಿ ವಿಷಯವಾಗಿ ಯಾರೂ ಬಹಿರಂಗ ಹೇಳಿಕೆ ನೀಡಬಾರದು. ಸಣ್ಣಪುಟ್ಟ ಗೊಂದಲಗಳಿದ್ದರೂ ಅವುಗಳನ್ನು ಸರಿಪಡಿಸಿಕೊಳ್ಳಬೇಕು.ಚರ್ಚೆ ಮಾಡಲು ಸೂಕ್ತ ವೇದಿಕೆಗಳಿವೆ. ಅದನ್ನು ಬಿಟ್ಟು ಬಹಿರಂಗವಾಗಿ ಹೇಳಿಕೆ ನೀಡಿದರೆ ಗೊಂದಲಗಳು ಹೆಚ್ಚಾಗುತ್ತವೆ. ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದರು.

ಸಾಲ ಮನ್ನಾ ವಿಷಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೇವಡಿ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ದಿನೇಶ್‍ಗುಂಡೂರಾವ್, ಪ್ರಧಾನಿ ಮಹಾನ್ ಸುಳ್ಳುಗಾರ. ಮನಸ್ಸಿಗೆ ಬಂದಂತೆ ಮಾತನಾಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಅದಕ್ಕೆ ಸಂಬಂಧಪಟ್ಟಂತೆ ಈಗಾಗಲೇ 360 ಕೋಟಿ ರೂ.ನಷ್ಟು ಋಣಮುಕ್ತ ಪತ್ರಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗಿದೆ. ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು. ಕೊಟ್ಟ ಮಾತಿನಂತೆ ನಾವು ಸಾಲ ಮನ್ನಾ ಮಾಡುತ್ತೇವೆ. ಅದಕ್ಕಾಗಿ ಹಲವು ಮಾನದಂಡಗಳಿವೆ. ಅವುಗಳನ್ನು ಅನುಸರಿಸುವುದು ಅನಿವಾರ್ಯ ಎಂದು ಹೇಳಿದರು.

ಪ್ರಧಾನಿಯವರು ಚುನಾವಣೆ ವೇಳೆ ಕೊಟ್ಟ ಭರವಸೆಗಳ ಪೈಕಿ ಯಾವುದನ್ನೂ ಈಡೇರಿಸಿಲ್ಲ. ಕೊಟ್ಟ ಮಾತನ್ನು ತಪ್ಪಿದ್ದಾರೆ.ಕಪ್ಪು ಹಣವನ್ನು ವಿದೇಶದಿಂದ ವಾಪಸ್ ತರುವುದಾಗಲಿ, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುವುದಾಗಲಿ, ಉದ್ಯೋಗಸೃಷ್ಟಿ ಸೇರಿದಂತೆ ಹಲವಾರು ವಿಷಯಗಳಲ್ಲಿ ಪ್ರಧಾನಿಯವರು ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಅದನ್ನು ಮರೆತು ಕರ್ನಾಟಕ ಸರ್ಕಾರದ ಸಾಲ ಮನ್ನಾ ಯೋಜನೆ ಬಗ್ಗೆ ಪದೇ ಪದೇ ಲೇವಡಿ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಕರ್ನಾಟಕ ಸರ್ಕಾರದ ಸಾಲ ಮನ್ನಾ ಯೋಜನೆ ದೇಶದಲ್ಲೇ ಮಾದರಿಯಾಗಿದೆ.ಬೇಕಿದ್ದರೆ ಮೋದಿಯವರು ಎರಡು ದಿನ ಬೆಂಗಳೂರಿಗೆ ಬಂದು ಇಲ್ಲಿ ಕುಳಿತು ಅಧ್ಯಯನ ಮಾಡಲಿ. ಸಂಪೂರ್ಣ ವಿಷಯ ತಿಳಿದುಕೊಂಡು ನಂತರ ಮಾತನಾಡಲಿ ಎಂದು ತಿರುಗೇಟು ನೀಡಿದರು.

ಕೇಂದ್ರದಿಂದ ರೈತರಿಗೆ ಈವರೆಗೂ ಯಾವುದೇ ನೆರವು ಸಿಕ್ಕಿಲ್ಲ. ರಾಷ್ಟ್ರಾದ್ಯಂತ ಪ್ರತಿಭಟನೆ ಮಾಡಿದರೂ ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿಲ್ಲ.ಆದರೆ ಕರ್ನಾಟಕದಲ್ಲಿ ಈ ಮೊದಲು ಸಿದ್ದರಾಮಯ್ಯ ಸರ್ಕಾರ 8165 ಕೋಟಿ ರೂ.ಸಾಲ ಮನ್ನಾ ಮಾಡಿತ್ತು.ಸಮ್ಮಿಶ್ರ ಸರ್ಕಾರ ಕೂಡ ಸಾಲ ಮನ್ನಾ ಮಾಡಿದೆ.ಇದನ್ನು ಪ್ರಧಾನಿಯವರು ಲೇವಡಿ ಮಾಡುತ್ತಿದ್ದಾರೆ.ರೈತರ ಆತ್ಮಹತ್ಯೆಗಳು ನಡೆಯುತ್ತಿದ್ದರೂ ಆ ಬಗ್ಗೆ ಮಾತನಾಡದ ಮೋದಿಯವರು, ಸಾಲ ಮನ್ನಾವನ್ನು ಟೀಕಿಸುತ್ತಿರುವುದು ರೈತ ವಿರೋಧಿ ಧೋರಣೆ ಎಂದು ಕಿಡಿಕಾರಿದರು.

ಈಗಲಾದರೂ ಪ್ರಧಾನಿಯವರು ಸರಿಯಾದ ಮಾಹಿತಿ ಪಡೆದುಕೊಂಡು ಮಾತನಾಡಬೇಕು.ಇಲ್ಲವಾದರೆ ಅವರು ಪ್ರಧಾನಿ ಹುದ್ದೆಗೆ ಯೋಗ್ಯರಲ್ಲ ಎಂದು ಹೇಳಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ