ಕನ್ನಡ ಭಾಷೆಗೆ ಹಿಂದೆಂದೂ ಕಾಣದ ರೀತಿಯಲ್ಲಿ ಕುತ್ತು ಬಂದಿದೆ : ಡಾ.ಚಂದ್ರಶೇಖರ ಕಂಬಾರ

ಧಾರವಾಡ, ಜ.4-ನಮ್ಮ ಬದುಕಿಗೆ ಕನ್ನಡ ಭಾಷೆಯೊಂದೇ ಜೀವ. ಜೀವನ, ಪರಂಪರೆ ಮತ್ತು ಸಂಸ್ಕøತಿ ಎಂದು 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರರು ಸಾರಿದ್ದಾರೆ

ಧಾರಾವಾಡ ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಮಹಾಕವಿ ಪಂಪ ಮಹಾಮಂಟಪದ ಅಂಬಿಕಾತನಯದತ್ತ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರಾಗಿ ಭಾಷಣ ಮಾಡಿದ ಅವರು ಐದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆಗೆ ಈಗ ಹಿಂದೆಂದೂ ಕಾಣದ ರೀತಿಯಲ್ಲಿ ಕುತ್ತು ಬಂದಿದೆ. ಈ ಸಮಸ್ಯೆಯನ್ನು ಎಲ್ಲರೂ ಒಂದಾಗಿ ಸೇರಿ ಬಗೆಹರಿಸಬೇಕು ಎಂದು ಅವರು ಕನ್ನಡ ಕುಲಕೋಟಿಗೆ ಕರೆ ಕೊಟ್ಟರು.

ತಮ್ಮ ಭಾಷಣದಲ್ಲಿ ಕನ್ನಡದ ಹಿರಿಮೆಯನ್ನು ವಿವರಿಸಿದ ಅವರು, ಕನ್ನಡ ಸಮುದಾಯದ ಹರವು ಈಗ ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೇ ವಿಶ್ವವ್ಯಾಪಿಯಾಗಿದೆ.ನೃಪತುಂಗನ ಕಾಲದಲ್ಲಿ ಕಾವೇರಿ ಮತ್ತು ಗೋದಾವರಿಗಳ ನಡುನೆಲವೆಂದು ಕವಿರಾಜ ಮಾರ್ಗದಲ್ಲಿ ಗುರುತಿಸಲಾಗಿದೆ.ಆ ನಂತರದ ಕಾಲದಲ್ಲಿ ಕರ್ನಾಟಕ ಮೂಲದ ಜನರು ರಾಜ್ಯದ ಹೊರಗೆ ಸಂಚರಿಸಿ, ನೆಲಸಿ, ರಚಿಸಿ ಕನ್ನಡದ ಕಂಪನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪಸರಿಸಿದ್ದಾರೆ ಎಂದು ಅವರು ಪ್ರಶಂಸಿಸಿದರು.

ಕನ್ನಡ ಮೂಲದ ವಚನ ಸಂಸ್ಕøತಿಯ ಪ್ರಭಾವ ಇರದಿದ್ದರೆ ಪಾಲ್ಕುರಿಕೆ ಸೋಮನಾಥನೆಂಬ ಕವಿ ತೆಲುಗು ನಾಡು ನುಡಿಗಳಲ್ಲಿ ದೊರೆಯುತ್ತಿರಲಿಲ್ಲ ಮತ್ತು ಆ ಭಾಷೆಯಲ್ಲಿ ಹೊಸ ಬಗೆಯ ಕಾವ್ಯವೊಂದು ಉದಯಿಸುತ್ತಿರಲಿಲ್ಲ. ತೆಲುಗಿನ ವೇಮನನೂ ಕನ್ನಡದ ಶರಣ ಸಾಹಿತ್ಯದಿಂದ ಪ್ರೇರಿತನಾದವನು ಎಂದು ಅವರು ಕನ್ನಡ ಸಾಹಿತ್ಯದ ಮಹತ್ವವನ್ನು ವಿವರಿಸಿದರು.

ಚೀನಾ ದೇಶಕ್ಕೆ ಬೌದ್ಧಧರ್ಮವನ್ನು ಕೊಂಡೊಯ್ದು ಇಡೀ ಪೂರ್ವೇಷಿಯಾದ ಸಂಸ್ಕøತಿಯಲ್ಲಿ ಮೂಲಭೂತ ಬದಲಾವಣೆಗಳನ್ನು ಉಂಟು ಮಾಡಿದ ಬೋಧಿ ಧರ್ಮ ನಮ್ಮ ಕಡಲ ತೀರದ ಹೊನ್ನಾವರದ್ದು ಎಂಬ ಐತಿಹ್ಯವಿದೆ. ಕನ್ನಡದ ವಚನ ಸಾಹಿತ್ಯ ಇಂಗ್ಲಿಷ್‍ಗೆ ಅನುವಾದ ಮೇಲೆ ಇಡೀ ಪ್ರಪಂಚದ ಓದುಗರನ್ನು ಸೆಳೆಯುತ್ತಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಡಾ. ಕಂಬಾರ ಉಲ್ಲೇಖಿಸಿದರು.

ಕನ್ನಡದ ಹೆಚ್ಚು ಹೆಚ್ಚು ಕೃತಿಗಳು ಅನುವಾದವಾಗುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಸಾರಸ್ವತ ಲೋಕದ ಬಗೆಗಿನ ಗೌರವ ಜಗತ್ತಿನ ಕಣ್ಣಿನಲ್ಲಿ ಇನ್ನೂ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಹೀಗೆ ಕನ್ನಡ ಭಾಷಿಕರು ಮತ್ತು ಅವರ ಸಂಸ್ಕøತಿ ಕಾವೇರಿ ಮತ್ತು ಗೋದಾವರಿಗಳ ಸೀಮೆ ದಾಟಿ ಇಡೀ ಭಾರತವನ್ನು ವ್ಯಾಪಿಸಿ ಕಡಲುಗಳಾಚೆಯೂ ಹರಡಿ ಕನ್ನಡವನ್ನು ವಿಶ್ವಭಾಷೆ ವಿಶ್ವಸಂಸ್ಕøತಿಯನ್ನಾಗಿಸುತ್ತಿದೆ. -ನಮ್ಮ ಬದುಕಿಗೆ ಕನ್ನಡ ಭಾಷೆಯೊಂದೇ ಜೀವ. ಜೀವನ, ಪರಂಪರೆ ಮತ್ತು ಸಂಸ್ಕøತಿ ಎಂದು ಅವರು ಬಣ್ಣಿಸಿದರು.

ಒಂದು ಭಾಷೆಯ ಅತ್ಯಂತ ಸಂವೇದನಾಶೀಲ ಅಂಗವೆಂದರೆ ಅದರ ಇತಿಹಾಸ, ಕಲ್ಪನೆ ಮತ್ತು ರೂಪಕ ಶಕ್ತಿ.ನಮ್ಮ ಸಂಸ್ಕøತಿಯಲ್ಲಿ ಅತ್ಯಂತ ಪಲ್ಲಟಕ್ಕೆ ಒಳಗಾಗಿರುವುದು ನಮ್ಮ ಭಾಷೆ. ಸದ್ಯದ ಪರಿಸ್ಥಿತಿಯಲ್ಲಿ ನೆನಪು ಮತ್ತು ಭವಿಷ್ಯದ ನಡುವಣ ರಣರಂಗವಾಗಿದೆ.ನಮ್ಮ ಕನ್ನಡ ಭಾಷೆಗೆ ಈಗ ಹಿಂದೆಂದೂ ಕಾಣದ ರೀತಿಯಲ್ಲಿ ಕುತ್ತು ಬಂದಿದೆ.ಈ ಸಮಸ್ಯೆಯನ್ನು ಎಲ್ಲರೂ ಒಂದಾಗಿ ಸೇರಿ ಬಗೆಹರಿಸಬೇಕು ಎಂದು ಅವರು ಕನ್ನಡ ಕುಲಕೋಟಿಗೆ ಕರೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ