ಬೆಂಗಳೂರು, ಡಿ.25- ನಗರದ ವಿವಿಧ ಪ್ರದೇಶಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಕೈ ವಾಕ್ ನಿರ್ಮಾಣದ ಹೊಣೆಯನ್ನು ಒಂದೇ ಸಂಸ್ಥೆಗೆ ನೀಡಿರುವ ಬಿಬಿಎಂಪಿಯ ಕ್ರಮ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ವಾಹನ ದಟ್ಟಣೆ ಹೆಚ್ಚಿರುವ ಕದಿರೇನಹಳ್ಳಿ , ವಿಜಯ ಬ್ಯಾಂಕ್ ಕಾಲೋನಿ, ಕತ್ರಿಗುಪ್ಪೆ ಸೇರಿದಂತೆ ನಗರದ 8 ಪ್ರದೇಶಗಳಲ್ಲಿ ಸ್ಕೈ ವಾಕ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ.
ಈ ಎಲ್ಲಾ ಸ್ಕೈವಾಕ್ ನಿರ್ಮಾಣದ ಹೊಣೆಯನ್ನು ಸಯ್ಯದ್ ಇಫ್ತಿಕರ್ ಮೆಹಿದಿ ಸಂಸ್ಥೆಗೆ ನೀಡಲು ಮುಂದಾಗಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸೈಯದ್ ಇಫ್ತಿಕರ್ ಸಂಸ್ಥೆ ಜಾಹಿರಾತು ಸಂಸ್ಥೆಯು ಆಗಿರುವುದರಿಂದ ಎಲ್ಲಾ ಸ್ಕೈವಾಕ್ ನಿರ್ಮಾಣದ ಹೊಣೆಯನ್ನು ಅದೇ ಸಂಸ್ಥೆಗೆ ನೀಡುತ್ತಿರುವುದರ ಹಿಂದೆ ಅನುಮಾನ ವ್ಯಕ್ತವಾಗಿದೆ.
ಎಲ್ಲಾ 8 ಸ್ಕೈ ವಾಕ್ ನಿರ್ಮಾಣದ ಹೊಣೆಯನ್ನು ಸೈಯದ್ ಸಂಸ್ಥೆಗೆ ನೀಡುವ ವಿಚಾರ ನಾಳೆ ನಡೆಯಲಿರುವ ಪಾಲಿಕೆ ಸಭೆಯಲ್ಲಿ ಚರ್ಚೆಗೆ ಬರಲಿದ್ದು , ಪ್ರತಿಪಕ್ಷಗಳು ಆಡಳಿತ ಪಕ್ಷದ ಈ ನಿರ್ಧಾರದ ವಿರುದ್ಧ ಹರಿಹಾಯಲು ತೀರ್ಮಾನಿಸಿವೆ.
ನಗರದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಸ್ಕೈವಾಕ್ಗಳನ್ನು ಜನ ಬಳಕೆ ಮಾಡುತ್ತಿಲ್ಲ. ಆಡಳಿತ ಪಕ್ಷದವರು ಜಾಹಿರಾತು ಸಂಸ್ಥೆಗಳಿಗೆ ಅವಕಾಶ ಮಾಡಿಕೊಡಬೇಕು ಎಂಬ ಏಕೈಕ ಉದ್ದೇಶದಿಂದ ಇಲ್ಲ ಸಲ್ಲದ ಕಡೆ ಸ್ಕೈ ವಾಕ್ ನಿರ್ಮಾಣ ಮಾಡುತ್ತಿದೆ. ಅದರಲ್ಲೂ ಕಾನೂನು ಬಾಹಿರವಾಗಿ ಸೈಯದ್ ಸಂಸ್ಥೆಗೆ ನೀಡಿರುವ ಗುತ್ತಿಗೆಯನ್ನು ರದ್ದುಪಡಿಸುವಂತೆ ನಾಳಿನ ಸಭೆಯಲ್ಲಿ ಒತ್ತಾಯಿಸುವುದಾಗಿ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ತಿಳಿಸಿದ್ದಾರೆ.