ಸಚಿವರು ಮತ್ತು ಅಧಿಕಾರಿಗಳ ಸಮನ್ವಯ ಕೊರತೆ ಹಿನ್ನಲೆ ಆರೋಗ್ಯ ಸಂಸ್ಥೆ ಮತ್ತು ವಿತರಕರಿಗೆ ಹಣ ಪಾವತಿ ಮಾಡಿಲ್ಲ

ಬೆಂಗಳೂರು, ಡಿ.25- ಸಚಿವರು ಮತ್ತು ಅಧಿಕಾರಿಗಳ ಸಮನ್ವಯ ಕೊರತೆಯಿಂದಾಗಿ ಆರೋಗ್ಯ ಸಂಸ್ಥೆಗಳಿಗೆ ಔಷಧಿ ಮತ್ತು ಉಪಕರಣಗಳನ್ನು ಖರೀದಿಸಿ ಸರಬರಾಜು ಮಾಡುವ ವಿತರಕರಿಗೆ (ಡಿಸ್ಟ್ರಿಬ್ಯೂಟರ್ಸ್) ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡದಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಾಮಾನ್ಯವಾಗಿ ಈವರೆಗೂ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಮತ್ತು ಉಪಕರಣಗಳನ್ನು ಸರಬರಾಜು ಮಾಡುತ್ತಿದ್ದ ವಿತರಕರಿಗೆ ಒಂದು ತಿಂಗಳೊಳಗೆ ಹಣ ಸಂದಾಯ ಮಾಡುವ ಪರಿಪಾಠವಿತ್ತು.

ಆದರೆ, ಇದೇ ಮೊದಲ ಬಾರಿಗೆ ಕಳೆದ ಮಾರ್ಚ್‍ನಿಂದ ವಿತರಕರಿಗೆ ಬಾಕಿ ಇರುವ ಸುಮಾರು 22 ರಿಂದ 25 ಕೋಟಿ ಹಣವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ನೀಡದೆ ಇಂದು, ನಾಳೆ ಎನ್ನುತ್ತಲೇ ಸತಾಯಿಸುತ್ತಿರುವುದರಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ನಿಯಮಗಳ ಪ್ರಕಾರ, ಔಷಧಿ ಮತ್ತು ಉಪಕರಣಗಳನ್ನು ಖರೀದಿಸಿ ಆರೋಗ್ಯ ಸಂಸ್ಥೆಗಳಿಗೆ ವಿತರಣೆ ಮಾಡಿದ 40 ದಿನಗಳೊಳಗೆ ವಿತರಕರಿಗೆ ಹಣ ಪಾವತಿಸಬೇಕು. ಟೆಂಡರ್‍ನಲ್ಲಿ ಇದನ್ನು ಅಳವಡಿಸಲಾಗಿರುತ್ತದೆ. ಒಂಭತ್ತು ತಿಂಗಳಾದರೂ ಇಲಾಖೆಯವರು ಹಣ ನೀಡುತ್ತಿಲ್ಲ ಎಂಬುದು ವಿತರಕರ ಅಳಲು.

ಔಷಧಿ ಮತ್ತು ಉಪಕರಣಗಳನ್ನು ಖರೀದಿಸಿದ ನಂತರ ಆರೋಗ್ಯ ಇಲಾಖೆ ಅಡಿಯಲ್ಲಿ ಬರುವ ಕೆಡಿಎಲ್‍ಡಬ್ಲ್ಯೂಎಸ್ ಸಂಸ್ಥೆ ಮೂಲಕ ವಿತರಣೆ ಮಾಡಲಾಗುತ್ತದೆ. ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಖರೀದಿಸಿ ವಿತರಣೆ ಮಾಡಿದ ಒಂದು ತಿಂಗಳೊಳಗೆ ಹಿಂದಿನ ಅವಧಿಯಲ್ಲಿ ಹಣ ಸಂದಾಯವಾಗುತ್ತಿತ್ತು. ಈಗ ಯಾವ ಕಾರಣಕ್ಕಾಗಿ ವಿಳಂಬವಾಗುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಲು ಹೋದರೆ ಇದರ ಹಿಂದೆ ಕಾಣದ ಕೈಗಳ ಕೈವಾಡವಿರುವುದು ಎದ್ದು ಕಾಣುತ್ತದೆ.
ಸಮನ್ವಯದ ಕೊರತೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಶಿವಾನಂದ ಪಾಟೀಲ್ ಅಧಿಕಾರ ಸ್ವೀಕರಿಸಿದ ನಂತರ ಇಲಾಖೆಯಲ್ಲಿ ಕೆಲವು ಅಧಿಕಾರಿಗಳ ದುರಾಸೆಯೇ ಇದಕ್ಕೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

ಸಚಿವರಿಗೆ ಆಪ್ತರಾಗಿರುವ ಇಬ್ಬರು ಅಧಿಕಾರಿಗಳು, ಹಿರಿಯ ಫಾರ್ಮಸಿಸ್ಟ್ ಅಧಿಕಾರಿ ಹಾಗೂ ಪ್ರಥಮ ದರ್ಜೆ ಸಹಾಯಕ ಸೇರಿದಂತೆ ಕೆಲವರು ವಿತರಕರಿಗೆ ಇಂತಿಷ್ಟು ಕಮಿಷನ್ ನೀಡಿದರೆ ಮಾತ್ರ ನಿಮ್ಮ ಹಣವನ್ನು ಬಿಡುಗಡೆ ಮಾಡುವುದಾಗಿ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಹೆಸರು ಹೇಳಲು ಇಚ್ಛಿಸದ ವಿತರಕರೊಬ್ಬರು ಹೇಳುವ ಪ್ರಕಾರ, ಸಾಮಾನ್ಯವಾಗಿ ಇದುವರೆಗೂ ಶೇ.2ರಷ್ಟು ಕಮಿಷನ್ ನೀಡಿದರೆ ಹಣ ಬಿಡುಗಡೆಯಾಗುತ್ತಿತ್ತು. ಆದರೆ, ಈಗ ಇದೇ ಮೊದಲ ಬಾರಿಗೆ ಶೇ.5ರಷ್ಟು ಕಮಿಷನ್ ಬೇಡಿಕೆ ಇಟ್ಟಿರುವುದರಿಂದಲೇ ಇಷ್ಟು ವಿಳಂಬವಾಗುತ್ತದೆ ಎಂದು ನೋವು ತೋಡಿಕೊಂಡಿದ್ದಾರೆ.
ಕೆಡಿಎಲ್‍ಡಬ್ಲ್ಯೂಎಸ್ ಸಂಸ್ಥೆಯು ಕೆಟಿಟಿಪಿ ನಿಯಮಾನುಸಾರ ರಾಜ್ಯದ 26 ಜಿಲ್ಲಾ ಔಷಧ ಉಗ್ರಾಣಗಳ ಮೂಲಕ ಸರ್ಕಾರಿ ಆಸ್ಪತ್ರೆಗಳಿಗೆ ನೇರವಾಗಿ ವಿತರಿಸುವ ಪ್ರಕ್ರಿಯೆಯನ್ನು ನಡೆಸಿಕೊಂಡು ಬಂದಿದೆ. ನಿಯಮಾನುಸಾರ ಟೆಂಡರ್‍ಗಳನ್ನು ಪೂರೈಸಿ ಎಲ್-1 ಸ್ಥಿತಿ ಹೊಂದಿದ ಸಂಸ್ಥೆಗಳಿಗೆ ಭದ್ರತಾ ಠೇವಣಿ ಮತ್ತು ಕರಾರು ಒಪ್ಪಂದ ಸಲ್ಲಿಸಿದ ಮೇಲೆಯೇ ಖರೀದಿಗೆ ಅವಕಾಶ ನೀಡಲಾಗುತ್ತದೆ.

ಎಲ್ಲ ನಿಯಮಗಳನ್ನು ಪೂರೈಸಿದ ನಂತರವೇ ಖರೀದಿಗೆ ಅವಕಾಶ ನೀಡುತ್ತಾರೆ. ಇಷ್ಟು ದೊಡ್ಡ ಮೊತ್ತದಲ್ಲಿ ಔಷಧಿ ಮತ್ತು ಉಪಕರಣಗಳನ್ನು ಖರೀದಿಸಿ ಈಗ ಪುನಃ 4 ರಿಂದ 5ರಷ್ಟು ಕಮಿಷನ್ ನೀಡಿದರೆ ನಮಗೆ ಹೂಡಿರುವ ಬಂಡವಾಳವೂ ಬರುವುದಿಲ್ಲ ಎಂದು ವಿತರಕರು ಗೊಂದಲಕ್ಕೆ ಸಿಲುಕಿದ್ದಾರೆ.

ಸಚಿವರನ್ನು ದಿಕ್ಕುತಪ್ಪಿಸಿ ಬರುವವರು ಯಾರು? ಇನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ಅವರನ್ನು ಕೆಲವು ಅಧಿಕಾರಿಗಳೇ ದಿಕ್ಕುತಪ್ಪಿಸುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ಅಪರ ನಿರ್ದೇಶಕರ ಏಜೆಂಟರೆಂದು ಹೇಳಿಕೊಳ್ಳುತ್ತಿರುವ ಇಬ್ಬರು ಪ್ರಭಾವಿಗಳು ಹಾಗೂ ಈ ಹಿಂದೆ ಉಗ್ರಾಣ ನಿಗಮದ ಉಸ್ತುವಾರಿಯಾಗಿ ಲೋಕಾಯುಕ್ತರಿಂದ ತಪ್ಪಿತಸ್ಥನೆಂದು ಗುರುತಿಸಲ್ಪಟ್ಟಿದ್ದ ಹಿರಿಯ ಅಧಿಕಾರಿಯೊಬ್ಬರು ಹಾಗೂ ಡೆಂಟಲ್ ಕಾಲೇಜೊಂದರಲ್ಲಿ ಕಾರ್ಯನಿರ್ವಹಿಸಿ ಸುಮಾರು 12 ಲಕ್ಷಕ್ಕೂ ಹೆಚ್ಚು ಹಣವನ್ನು ಗುಳುಂ ಮಾಡಿ ಸಿಕ್ಕಿಬಿದ್ದಿದ್ದ ಪ್ರಥಮ ದರ್ಜೆ ಅಧಿಕಾರಿಯೊಬ್ಬರು ಕೂಡ ಶಾಮೀಲಾಗಿದ್ದಾರೆ ಎನ್ನಲಾಗುತ್ತಿದೆ.

ನಾವು ಸಚಿವರಿಗೆ ಕಮಿಷನ್ ನೀಡಬೇಕೆಂದು ಹೇಳಿಕೊಂಡೇ ವಿತರಕರನ್ನು ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ. ಈಗಾಗಲೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿರುವ ವಿತರಕರು ಲಾಭದ ಮಾತು ಆಮೇಲಿರಲಿ, ಕಡೆ ಪಕ್ಷ ಹಾಕಿರುವ ಬಂಡವಾಳವಾದರೂ ಬಂದರೆ ಸಾಕು ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ