ಬೆಂಗಳೂರು, ಡಿ.25- ಹಂಪಿಗೆ ಭೇಟಿ ನೀಡಿದ್ದ ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರನ್ನು ಕಾಂಗ್ರೆಸ್ ಶಾಸಕ ಆನಂದ್ಸಿಂಗ್ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ನಿನ್ನೆ ಪಿಯುಷ್ ಗೋಯಲ್ ಹಂಪಿಗೆ ಭೇಟಿ ನೀಡಿದ್ದರು. ಈ ವೇಳೆ ಅವರನ್ನು ಆನಂದ್ಸಿಂಗ್ ಆತ್ಮೀಯತೆಯಿಂದ ಬರಮಾಡಿಕೊಂಡು ದೇವಸ್ಥಾನಕ್ಕೆ ಕರೆದೊಯ್ದು ಹಂಪಿಯ ಇತಿಹಾಸವನ್ನು ಪರಿಚಯ ಮಾಡಿಕೊಟ್ಟಿದ್ದರು.
ಈ ವೇಳೆ ಉಭಯ ನಾಯಕರು ರಹಸ್ಯವಾಗಿ ಕೆಲಹೊತ್ತು ಮಾತುಕತೆ ನಡೆಸಿರುವುದು ನಾನಾ ಸಂಶಯಗಳನ್ನು ಹುಟ್ಟುಹಾಕಿದೆ. ಬಿಜೆಪಿಯಿಂದಲೇ ಮೂರು ಬಾರಿ ಶಾಸಕರಾಗಿದ್ದ ಅವರು ಇತ್ತೀಚೆಗಷ್ಟೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿದ್ದರು.
ಕಾಂಗ್ರೆಸ್ನಲ್ಲಿದ್ದರೂ ಆನಂದ್ಸಿಂಗ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಸಂಪುಟ ಪುನಾರಚನೆ ವೇಳೆ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದರಿಂದ ಪಕ್ಷದ ನಾಯಕರ ಮೇಲೆ ಮುನಿಸಿಕೊಂಡಿದ್ದಾರೆ.
ಕಾಂಗ್ರೆಸ್ ಭಿನ್ನಮತೀಯ ಶಾಸಕರಲ್ಲಿರುವ ಆನಂದ್ಸಿಂಗ್, ಈ ಹಿಂದೆ ಬಿಜೆಪಿಗೆ ಬರುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಇದನ್ನು ಆನಂದ್ಸಿಂಗ್ ನಿರಾಕರಿಸಿದ್ದೂ ಇಲ್ಲ, ಇಲ್ಲವೆ ತಳ್ಳಿಯೂ ಹಾಕಿರಲಿಲ್ಲ. ಇದೀಗ ಕಾಂಗ್ರೆಸ್ನಲ್ಲಿ ಕೆಲವು ಶಾಸಕರು ಅಸಮಾಧಾನಗೊಂಡಿದ್ದಾರೆ. ಇಂತಹ ಹೊತ್ತಿನಲ್ಲೇ ಪಿಯುಷ್ ಗೋಯಲ್ ಅವರನ್ನು ಆನಂದ್ಸಿಂಗ್ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.