ತುಮಕೂರು, ಮಾ.10-ಜೆಡಿಎಸ್ಗೆ ಸೆಡ್ಡು ಹೊಡೆದು ಕಾಂಗ್ರೆಸ್ ಶಕ್ತಿ ಪ್ರದರ್ಶಿಸಲು ವೇದಿಕೆ ಸಜ್ಜಾಗಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸ್ಪರ್ಧಿಸಲಿರುವ ಕ್ಷೇತ್ರ ಕೊರಟಗೆರೆ. ಹಾಗಾಗಿ ನಾಳೆ ಕೊರಟಗೆರೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.
ಕೊರಟಗೆರೆಯ ತಾಲೂಕು ಕಚೇರಿ ಆವರಣದಲ್ಲಿ ನಾಳೆ ಬೆಳಿಗ್ಗೆ 11.30ಕ್ಕೆ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಲಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿಗೆ ಆಗಮಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯಸರ್ಕಾರದ ಸಾಧನೆಗಳ ಕೈಪಿಡಿಯನ್ನು ವಾರ್ತಾ ಇಲಾಖೆಯ ಮೂಲಕ ಬಿಡುಗಡೆಗೊಳಿಸಲಾಗುತ್ತದೆ.
ನಂತರ ಪಕ್ಷದ ಬೃಹತ್ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿ ಜೆಡಿಎಸ್ ಮತ್ತು ಬಿಜೆಪಿಗೆ ಸೆಡ್ಡು ಹೊಡೆಯಲು ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ.
ಈಗಾಗಲೇ ಯುವ ಕಾಂಗ್ರೆಸ್ ಸಮಾವೇಶ, ಮಹಿಳಾ ಸಮಾವೇಶ ನಡೆಸುವ ಮೂಲಕ ಈ ಬಾರಿ ಜಿ.ಪರಮೇಶ್ವರ್ ಅವರನ್ನು ಗೆಲ್ಲಿಸಲು ರಣತಂತ್ರವನ್ನೇ ರೂಪಿಸಿದ್ದು, ನಾಳೆ ಸ್ವತಃ ಮುಖ್ಯಮಂತ್ರಿಗಳೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ ತೀವ್ರ ಕುತೂಹಲ ಕೆರಳಿಸಿದೆ.
ಜಿ.ಪರಮೇಶ್ವರ್ ಅವರನ್ನು ಕಳೆದ ಬಾರಿ ಪಕ್ಷದವರೇ ಸೋಲಿಸಿದ್ದರು. ಈ ಚುನಾವಣೆಯಲ್ಲೂ ಅದೇ ರೀತಿಯ ತಂತ್ರಗಾರಿಕೆ ಹೆಣೆದು ಸೋಲಿಸಲು ಷಡ್ಯಂತ್ರ ನಡೆದಿದೆ ಎನ್ನಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಿಎಂ ಆಗಮಿಸುತ್ತಿರುವುದು ಕುತೂಹಲಕ್ಕೆ ಎಡೆಮಾಡಿದೆ.