ಬೆಳಗಾವಿ (ಸುವರ್ಣಸೌಧ), ಡಿ.21- ರಾಜ್ಯದ ರೈತರ ಸಾಲಮನ್ನಾ ಸಂಬಂಧ ಸ್ಪಷ್ಟ ನಿಲುವಿಗಾಗಿ ಆಗ್ರಹಿಸಿ ಕಳೆದ ಎರಡು ದಿನಗಳಿಂದ ವಿಧಾನಸೌಧದಲ್ಲಿ ಪ್ರತಿಪಕ್ಷ ಬಿಜೆಪಿ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಮುಂದುವರಿದು ಸದನದಲ್ಲಿ ಗದ್ದಲ-ಕೋಲಾಹಲ ಉಂಟಾದ ಪರಿಣಾಮ ಕಲಾಪವನ್ನು ಸಭಾಧ್ಯಕ್ಷ ರಮೇಶ್ಕುಮಾರ್ ಅವರು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಪ್ರತಿಪಕ್ಷದ ನಾಯಕ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಕೂಡ ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿದ ಬಿಜೆಪಿ ಸದಸ್ಯರು ರೈತರ ಸಾಲಮನ್ನಾದ ಬಗ್ಗೆ ಸ್ಪಷ್ಟನೆಗೆ ಪಟ್ಟು ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಯಾವ ರೀತಿ ರೈತರ ಸಾಲಮನ್ನಾ ಮಾಡಲಾಗುತ್ತಿದೆ, ಯಾವಾಗ ಸಾಲಮನ್ನಾದ ಪ್ರಕ್ರಿಯೆ ಮುಗಿಯುತ್ತದೆ, ಸರ್ಕಾರ ಸ್ಪಷ್ಟನೆ ನೀಡಬೇಕು.ಇದು ರೈತ ವಿರೋಧಿ ಸರ್ಕಾರ ಎಂದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು.
ಪ್ರತಿಪಕ್ಷ ಬಿಜೆಪಿ ಈ ವರ್ತನೆಗೆ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಹರಿಹಾಯ್ದರು.ಈ ಸಂದರ್ಭದಲ್ಲಿ ಗದ್ದಲ-ಕೋಲಾಹಲ ಉಂಟಾಯಿತು.ಸದನದಲ್ಲಿ ಏನು ನಡೆಯುತ್ತಿದೆ ಎಂಬುದು ಕೇಳಿಸದಂತಾಯಿತು.
ಸಭಾಧ್ಯಕ್ಷ ರಮೇಶ್ಕುಮಾರ್ ಅವರು ಧರಣಿ ಹಿಂತೆಗೆದುಕೊಳ್ಳುವಂತೆ ಮಾಡಿದ ಮನವಿಯನ್ನು ಪ್ರತಿಪಕ್ಷ ಬಿಜೆಪಿ ಮಾನ್ಯ ಮಾಡಲಿಲ್ಲ. ಪ್ರತಿಭಟನೆ ನಡುವೆಯೇ ಸಭಾಧ್ಯಕ್ಷರು ಶಾಸನ ರಚನೆ ಕಲಾಪವನ್ನು ಕೈಗೆತ್ತಿಕೊಂಡರು.ಕೆಲವು ವಿಧೇಯಕಗಳನ್ನು ಕೂಡ ಅಂಗೀಕರಿಸಿದರು. ವಿಧಾನ ಪರಿಷತ್ನಿಂದ ಅಂಗೀಕಾರವಾದ ವಿಧೇಯಕಗಳನ್ನು ಮಂಡಿಸಿದರು.
10 ದಿನಗಳ ಕಾಲ ಕಲಾಪ ನಡೆದ ವಿವರಗಳನ್ನು ಸದನಕ್ಕೆ ನೀಡಿದರು.ಒಟ್ಟು 40 ಗಂಟೆ 45 ನಿಮಿಷ ಕಲಾಪ ನಡೆದಿದೆ.ಸದನ ನಡೆಯಲು ಸಹಕರಿಸಿದ ಮುಖ್ಯಮಂತ್ರಿಗಳು, ಪ್ರತಿಪಕ್ಷಗಳ ನಾಯಕರು, ಸಚೇತಕರು, ಎಲ್ಲ ಶಾಸಕರು, ಪೆÇಲೀಸ್ ಸಿಬ್ಬಂದಿ, ಅಧಿಕಾರಿ ವರ್ಗ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ರಾಷ್ಟ್ರಗೀತೆಯೊಂದಿಗೆ ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದರು.
ಇದಕ್ಕೂ ಮುನ್ನ ಪ್ರಶ್ನೋತ್ತರ ಹಾಗೂ ಗಮನ ಸೆಳೆಯುವ ಸೂಚನೆಗಳನ್ನು ಸದನದಲ್ಲಿ ಮಂಡಿಸಲಾಯಿತು.