ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಅವಕಾಶಕ್ಕೆ ಬಿಜೆಪಿ ಪಟ್ಟುಹಿಡಿದ ಪರಿಣಾಮ ಕೆಲಕಾಲ ಸದನವನ್ನು ಸಭಾಪತಿ ಮುಂದೂಡಿದರು

ಬೆಳಗಾವಿ (ಸುವರ್ಣಸೌಧ), ಡಿ.21- ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷ ಬಿಜೆಪಿ ಮೇಲ್ಮನೆಯಲ್ಲಿ ಪಟ್ಟುಹಿಡಿದ ಪರಿಣಾಮ ಕೆಲಕಾಲ ಸದನವನ್ನು ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರು ಮುಂದೂಡಿದರು.

ನಿನ್ನೆಯಿಂದ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸಪೂಜಾರಿ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗಾಗಿ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದ್ದು, ಇಂದು ಕೂಡ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿದರು.

ಈ ಭಾಗದಲ್ಲಿ ಅಧಿವೇಶನ ನಡೆಯುತ್ತಿದ್ದು, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.

ಮಹದಾಯಿ, ಕುಡಿಯುವ ನೀರಿನ ಸಮಸ್ಯೆ, ನಿರುದ್ಯೋಗ, ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು.

ಮಧ್ಯ ಪ್ರವೇಶಿಸಿದ ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರು ಸದನದ ನಿಯಮಾವಳಿಗಳಂತೆ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳೋಣ.ನಂತರ ಚರ್ಚೆಗೆ ಅವಕಾಶ ಕಲ್ಪಿಸಿಕೊಡುತ್ತೇನೆ ಎಂದು ಭರವಸೆ ನೀಡಿದರಾದರೂ ಬಿಜೆಪಿ ಸದಸ್ಯರು ಪಟ್ಟು ಸಡಿಲಿಸದ ಪರಿಣಾಮ ಸದನವನ್ನು ಕೆಲಕಾಲ ಮುಂದೂಡಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ