ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಯಶ್ ಅಭನಯದ ಕೆಜಿಎಫ್ ಚಿತ್ರ

ಬೆಂಗಳೂರು, ಡಿ.21- ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಗಳಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದೆ.

ಹಾಲಿವುಡ್, ಬಾಲಿವುಡ್, ಕಾಲಿವುಡ್‍ಅನ್ನು ಮೀರಿಸುವಂತೆ ನಿರ್ಮಾಣಗೊಂಡಿರುವ ಕೆಜಿಎಫ್ ಚಿತ್ರಕ್ಕೆ ಕನ್ನಡಿಗರು ಫುಲ್ ಫಿದಾ ಆಗಿದ್ದಾರೆ.

ಕೆಜಿಎಫ್ ಅಬ್ಬರಕ್ಕೆ ಬಾಲಿವುಡ್, ಕಾಲಿವುಡ್‍ನ ಹಲವಾರು ದಾಖಲೆಗಳು ಉಡೀಸ್ ಆಗಿವೆ. ಪ್ರಭಾಸ್ ಅಭಿನಯದ ಬಾಹುಬಲಿ, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 2.0 ಮತ್ತಿತರ ಚಿತ್ರಗಳ ದಾಖಲೆಯನ್ನು ಕೆಜಿಎಫ್ ಸರಿಗಟ್ಟಿದೆ.

ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ 70 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಕೆಜಿಎಫ್ ಚಿತ್ರ ಎಲ್ಲೆಡೆ ಹವಾ ಸೃಷ್ಟಿಸುತ್ತಿದ್ದು, ವಿದೇಶದಲ್ಲೂ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಮೈಸೂರು, ಬೆಂಗಳೂರು ಮತ್ತಿತರ ಮಹಾನಗರಗಳಲ್ಲಿ ನಿನ್ನೆ ಮಧ್ಯರಾತ್ರಿಯೇ ಚಿತ್ರ ಬಿಡುಗಡೆಯಾಗಿದ್ದು, ಯಶ್ ಅಭಿಮಾನಿಗಳು ಕೊರೆಯುವ ಚಳಿಯಲ್ಲೂ ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ಚಿತ್ರ ವೀಕ್ಷಿಸಿದರು.

ದೇಶ-ವಿದೇಶಗಳ ಎರಡು ಸಾವಿರ ಚಿತ್ರಮಂದಿರಗಳು ಹಾಗೂ ಬೆಂಗಳೂರಿನ 200 ಚಿತ್ರಮಂದಿರಗಳಲ್ಲಿ ಕೆಜಿಎಫ್ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದೆ.
ಟಿಕೆಟ್‍ಗಾಗಿ ಪ್ರೇಕ್ಷಕರು ಪರದಾಡುತ್ತಿದ್ದು, ಕಾಳಸಂತೆಯಲ್ಲಿ ಕೇಳಿದಷ್ಟು ದರ ನೀಡಿ ಚಿತ್ರ ವೀಕ್ಷಣೆಗೆ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ.

ಉಗ್ರಂ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡ ಪ್ರಶಾಂತ್ ನೀಲ್ ಅವರು ಕೆಜಿಎಫ್ ಚಿತ್ರವನ್ನು ಉಗ್ರಂ ಚಿತ್ರಕ್ಕಿಂತ ಭಿನ್ನವಾಗಿ ನಿರ್ದೇಶಿಸುವ ಮೂಲಕ ಕನ್ನಡಿಗರು ಹಾಲಿವುಡ್ ಮಾದರಿ ಚಿತ್ರ ನಿರ್ಮಾಣಕ್ಕೂ ಸೈ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಚಿತ್ರದಲ್ಲಿರುವ ಎರಡು ಹಾಡುಗಳು, ಮೇಕಿಂಗ್, ತಾಯಿ ಸೆಂಟಿಮೆಂಟ್ ಹಾಗೂ ಅದ್ಧೂರಿ ಸಾಹಸಮಯ ದೃಶ್ಯಗಳು ಪ್ರೇಕ್ಷಕರ ಮನಸೂರೆಗೊಂಡಿದೆ.
ಪುಷ್ಪಾಭಿಷೇಕ: ನರ್ತಕಿ ಚಿತ್ರಮಂದಿರದ ಮುಂಭಾಗ ಹಾಕಲಾಗಿರುವ ಯಶ್ ಅವರ ಕಟೌಟ್‍ಗೆ ಅಭಿಮಾನಿಗಳು ಭಾರೀ ಗಾತ್ರದ ಹಾರ-ತುರಾಯಿ ಹಾಕುವುದರ ಜತೆಗೆ ಹಾಲಿನ ಅಭಿಷೇಕ ಮಾಡಿ ತಮ್ಮ ಅಭಿಮಾನ ಪ್ರದರ್ಶಿಸಿದರು.

ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ನಾಯಕನಟನೊಬ್ಬನ ಕಟೌಟ್‍ಗೆ ಹೆಲಿಕಾಫ್ಟರ್ ಮೂಲಕ ಪುಷ್ಪಾಭಿಷೇಕ ಮಾಡಲಾಯಿತು.
ಈ ಹಿಂದೆ ಡಾ.ರಾಜ್‍ಕುಮಾರ್ ಅಭಿನಯದ ಚಿತ್ರ ಬಿಡುಗಡೆಯಾದಾಗ ಅಣ್ಣಾವ್ರ ಸಿನಿಮಾ ನೋಡಲು ಅಭಿಮಾನಿಗಳು ಮುಗಿ ಬೀಳುತ್ತಿದ್ದರು.ಅದೇ ರೀತಿಯ ಹವಾವನ್ನು ಕೆಜಿಎಫ್ ಚಿತ್ರ ಸೃಷ್ಟಿಸಿದೆ.

70 ಕೋಟಿ ರೂ. ವೆಚ್ಚ: ಕನ್ನಡದಲ್ಲಿ ಉತ್ತಮ ಕಥೆಯುಳ್ಳ ಚಿತ್ರಗಳು ಮಾತ್ರ ನಿರ್ಮಾಣಗೊಳ್ಳುತ್ತವೆ. ಆದರೆ, ಕೋಟಿ ಕೋಟಿ ಖರ್ಚು ಮಾಡುವುದಿಲ್ಲ ಎಂಬ ಅಪವಾದಗಳು ಕೇಳಿಬರುತ್ತಿದ್ದವು. ಈ ಅಪವಾದವನ್ನು ತೊಡೆದುಹಾಕುವ ಪ್ರಯತ್ನ ಮಾಡಿದ್ದು ಕ್ರೇಜಿಸ್ಟಾರ್ ರವಿಚಂದ್ರನ್ ಅವರು.

ಕೆಲವೇ ಲಕ್ಷಗಳಲ್ಲಿ ನಿರ್ಮಾಣವಾಗುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಕೋಟಿ ಬಜೆಟ್ ನಿರ್ಮಿಸಿದ್ದು ರವಿಚಂದ್ರನ್ ಹೆಗ್ಗಳಿಕೆ.ಆ ಕಾಲಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪ್ರೇಮಲೋಕ ಚಿತ್ರ ನಿರ್ಮಿಸಿ ಸೈ ಎನಿಸಿಕೊಂಡಿದ್ದರು.

ಪ್ರೇಮಲೋಕದ ನಂತರ ಕೋಟಿ ವೆಚ್ಚದಲ್ಲಿ ಕನ್ನಡ ಚಿತ್ರ ನಿರ್ಮಾಣಗೊಳ್ಳುವಂತಾಯಿತು. ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್ ಮತ್ತಿತರ ನಾಯಕರ ಚಿತ್ರಗಳನ್ನು ಸುಮಾರು 25 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸುವಂತಾಯಿತು.

ಈ ಎಲ್ಲ ದಾಖಲೆಗಳನ್ನೂ ಸರಿಗಟ್ಟುವಂತೆ ಕೆಜಿಎಫ್ ಚಿತ್ರಕ್ಕೆ 70 ಕೋಟಿ ಬಂಡವಾಳ ಹೂಡಲಾಯಿತು.70 ಕೋಟಿ ಖರ್ಚು ಮಾಡಿ ಚಿತ್ರ ನಿರ್ಮಾಣ ಮಾಡಿದರೆ ಬಂಡವಾಳ ವಾಪಸ್ ಬರುವುದೇ ಎಂದು ಕೆಲವರು ಚಿತ್ರ ಬಿಡುಗಡೆಗೂ ಮುನ್ನ ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಈ ಎಲ್ಲ ಅನುಮಾನಗಳಿಗೂ ತೆರೆ ಎಳೆದಿರುವ ಕೆಜಿಎಫ್ ಚಿತ್ರ ಇಡೀ ಭಾರತೀಯ ಚಿತ್ರರಂಗವನ್ನೇ ದಂಗುಬಡಿಸುವಂತೆ ಯಶಸ್ವಿ ಪ್ರದರ್ಶನಗೊಳ್ಳುತ್ತಿದೆ.

ಶಹಭಾಷ್‍ಗಿರಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರಕ್ಕೆ ಭರ್ಜರಿ ಯಶಸ್ಸು ಸಿಗುತ್ತಿದ್ದಂತೆ ಪವರ್ ಸ್ಟಾರ್ ಪುನಿತ್‍ರಾಜ್‍ಕುಮಾರ್ ಅವರು ಟ್ವಿಟ್ ಮೂಲಕ ಯಶ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಚಿತ್ರ ಬಿಡುಗಡೆಗೂ ಮುನ್ನ ಶಾರುಕ್‍ಖಾನ್ ಸೇರಿದಂತೆ ಭಾರತೀಯ ಚಿತ್ರರಂಗದ ಹಲವಾರು ಗಣ್ಯರು ಕೆಜಿಎಫ್ ಚಿತ್ರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರು.
ಐದು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಿ ಎಲ್ಲ ಭಾಷಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವ ಯಶ್ ಅಭಿನಯದ ಕೆಜಿಎಫ್ ಮತ್ತಷ್ಟು ದಾಖಲೆಗಳನ್ನು ಸರಿಗಟ್ಟುವುದರಲ್ಲಿ ಯಾವುದೇ ಸಂಶಯವಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ