ತೆಲಂಗಾಣ-ರಾಜಸ್ಥಾನದಲ್ಲಿ ಬಿರುಸುಗೊಂಡ ಮತದಾನ

ಹೈದರಾಬಾದ್/ಜೈಪುರ್: ಲೋಕಸಭಾ ಚುನಾವಣೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಅಂತಿಮ ಹಂತವಾಗಿ ಇಂದು ತೆಲಂಗಾಣ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಭಾರೀ ಬಿಗಿ ಭದ್ರತೆ ನಡುವೆ ಮತದಾನ ನಡೆದಿದೆ. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದಂತೆ ಚುನಾವಣೆ ಬಹುತೇಕ ಶಾಂತಿಯುತವಾಗಿ ಸಾಗಿದೆ.

ಈ ಎರಡೂ ರಾಜ್ಯಗಳ ಕೆಲವೆಡೆ ವಿದ್ಯುನ್ಮಾತ ಮತ ಯಂತ್ರಗಳ(ಇವಿಎಂಗಳು) ದೋಷದಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಬೆಳಗ್ಗೆಯಿಂದಲೇ ಮತದಾನ ಆರಂಭವಾಗಿದ್ದು, ಮತಗಟ್ಟೆಗಳ ಮುಂದೆ ಮತದಾರರ ಸಾಲುಗಟ್ಟಿ ನಿಂತು ತಮ್ಮ ಹಕ್ಕುಗಳನ್ನು ಚಲಾಯಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ತೆಲಂಗಾಣ:
ತೆಲಂಗಾಣ ವಿಧಾನಸಭೆಯ 119 ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ, ಟಿಆರ್‍ಎಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಒಂದೇ ಹಂತದಲ್ಲಿ ನಡೆಯುವ ಮತದಾನದಲ್ಲಿ ಸುಮಾರು 2.80 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟು 32,815 ಮತಗಟ್ಟೆಗಳನ್ನು ತೆರೆಯಲಾಗಿದೆ. ಒಂದೂವರೆ ಲಕ್ಷಕ್ಕೂ ಅಧಿಕ ಸಿಬ್ಬಂದಿ ಮತದಾನ ಪ್ರಕ್ರಿಯೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿಯ ಘಟಾನುಘಟಿಗಳು ಸ್ಪರ್ಧಾಕಣದಲ್ಲಿದ್ದಾರೆ. ಕೆಟಿ ರಾಮರಾವ್, ಹರೀಶ್ ರಾವ್, ಕಾಂಗ್ರೆಸ್‍ನಿಂದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ, ರೇವಂತ್ ರೆಡ್ಡಿ ಕಣದಲ್ಲಿದ್ದಾರೆ. ಟಾಲಿವುಡ್ ಖ್ಯಾತ ನಟ ಅಲ್ಲು ಅರ್ಜುನ್ ಹೈದರಾಬಾದ್ ನ ಜ್ಯುಬಿಲಿ ಹಿಲ್ಸ್‍ನಲ್ಲಿರುವ ಬೂತ್ ಸಂಖ್ಯೆ 152ಕ್ಕೆ ಆಗಮಿಸಿ ಮತ ಚಲಾಯಿಸಿದರು. ಇನ್ನೊಂದೆಡೆ ನಟ ಅಕ್ಕಿನೇನಿ ನಾಗಾರ್ಜುನ ಮತ್ತು ಅವರ ಪತ್ನಿ ನಟಿ ಅಮಲಾ ಅಕ್ಕಿನೇನಿ ಜ್ಯುಬಿಲಿ ಹಿಲ್ಸ್‍ನ ಮತಗಟ್ಟೆ ಸಂಖ್ಯೆ 151ಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ತೆಲಂಗಾಣ ವಿಧಾನಸಭೆಯ 119 ಕ್ಷೇತ್ರಗಳಿಗೆನಡೆಯುತ್ತಿರುವ ಮತದಾನದಲ್ಲಿ ಬೆಳಗ್ಗೆ 11 ಗಂಟೆ ಹೊತ್ತಿಗೆ ಶೇಕಡಾ 23ರಷ್ಟು ಮತದಾನವಾಗಿದೆ. ಇಲ್ಲಿ 1,821 ಅಭ್ಯರ್ಥಿಗಳ ಭವಿಷ್ಯ ಶುಕ್ರವಾರ ನಿರ್ಧಾರವಾಗಲಿದೆ.

ರಾಜಸ್ಥಾನ:
ರಾಜಸ್ತಾನದ 199 ವಿಧಾನಸಭಾ ಸ್ಥಾನಗಳಿಗೆ ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಯಿತು. 2 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಬಾರಿ ಕಣಕ್ಕಿಳಿದಿದ್ದಾರೆ.

ಬೆಳಗ್ಗೆ 11 ಗಂಟೆಯಷ್ಟು ಹೊತ್ತಿಗೆ ಶೇಕಡಾ 21.89 ರಷ್ಟು ಮತದಾನವಾಗಿದೆ ಎಂದು ರಾಜಸ್ತಾನ ಚುನಾವಣಾ ಆಯೋಗ ತಿಳಿಸಿದೆ.

ರಾಜ್ಯದ 51,687 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದ್ದು, 259 ಮಂದಿ ಮಹಿಳಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಇದ್ದಾರೆ.130 ಸ್ಥಾನಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ವಸುಂಧರಾ ರಾಜೆ ಮತ್ತೆ ಮುಖ್ಯಮಂತ್ರಿಯಾಗುವ ಭರವಸೆ ಹೊಂದಿದ್ದರೆ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಿಎಂ ಪದವಿ ಮೇಲೆ ಕಣ್ಣಿಟ್ಟಿದ್ದಾರೆ.

ಮುಖ್ಯಮಂತ್ರಿ ವಸುಂಧರಾ ರಾಜೇ ಜಲವಾರ್ ನ ಜಲ್ರಪಟಣ್ ಮತಗಟ್ಟೆ ಸಂಖ್ಯೆ 31ಎಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ನಂತರ ಅವರು ಮಾತನಾಡಿ, ಇದು ಅಭಿವೃದ್ಧಿಗೆ ಹಾಕುತ್ತಿರುವ ಮತ. ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕೂಡ ರಾಜಸ್ತಾನ ಜನತೆಗೆ ಸಂದೇಶ ತಲುಪುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಮತದಾರರು ಬಿಜೆಪಿಗೆ ಮತ ಹಾಕಿ ಮತ್ತೊಮ್ಮೆ ಅಧಿಕಾರಕ್ಕೆ ತರುತ್ತಾರೆ ಎಂಬ ವಿಶ್ವಾಸವಿದೆ ಎಂದರು.
Telangana,rajastan,aasembly election

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ