ಬೆಂಗಳೂರು, ಡಿ.4- ಮೈಸೂರು-ಬೆಂಗಳೂರು ನಡುವೆ ನಿರ್ಮಾಣವಾಗಲಿರುವ ದಶಪಥ ರಸ್ತೆಯಲ್ಲಿರುವ ಜಾಹಿರಾತು ಫಲಕಗಳನ್ನು ತಕ್ಷಣವೇ ತೆರವುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚನೆ ನೀಡಿರುವ ಅಂಶ ಬೆಳಕಿಗೆ ಬಂದಿದೆ.
ಮೈಸೂರು-ಬೆಂಗಳೂರು ನಡುವೆ ನಿರ್ಮಾಣವಾಗುತ್ತಿರುವ ದಶಪಥ ರಸ್ತೆಯಲ್ಲಿ ವಶಪಡಿಸಿಕೊಳ್ಳುತ್ತಿರುವ ಭೂಮಿಯ ಜತೆ ದಾರಿಯುದ್ದ ಹಾಕಲಾಗಿರುವ 600ಕ್ಕೂ ಹೆಚ್ಚು ಜಾಹೀರಾತು ಫಲಕಗಳನ್ನು ತೆರವು ಮಾಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ.
ಅದೇ ರೀತಿ ದಶಪಥ ರಸ್ತೆಯ ಅಕ್ಕ ಪಕ್ಕ ಹತ್ತು ಮೀಟರ್ ಒಳಗಿರುವ ಹೋಟೆಲ್ಗಳು, ಕಟ್ಟಡಗಳನ್ನು ತೆರವುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ ಎಂದು ಮೂಲಗಳು ಹೇಳಿವೆ.
ಸದರಿ ಹೆದ್ದಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವುದು ನಮ್ಮ ಉದ್ದೇಶ. ಹೀಗಾಗಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ಯಾವುದೇ ಅಂಶಗಳು ತೊಡಕಾಗಬಾರದು ಎಂದು ಅದು ರಾಜ್ಯ ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಚನೆ ಹಿನ್ನೆಲೆಯಲ್ಲಿ ಸರ್ಕಾರ ಕಾರ್ಯ ಪ್ರವೃತ್ತವಾಗಿದ್ದು, ಆದಷ್ಟು ಬೇಗ ಮೈಸೂರು-ಬೆಂಗಳೂರು ರಸ್ತೆಯುದ್ದ ರಾರಾಜಿಸುತ್ತಿರುವ ಜಾಹೀರಾತು ಫಲಕಗಳನ್ನು ತೆರವು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.
ಈ ಮಧ್ಯೆ ರಸ್ತೆ ನಿರ್ಮಾಣಕ್ಕೆ ನಿಗದಿಪಡಿಸಲಾಗಿರುವ ಜಾಗದಿಂದ ಹತ್ತು ಮೀಟರ್ ವ್ಯಾಪ್ತಿಯಲ್ಲಿರುವ ಹೋಟೆಲ್, ಕಟ್ಟಡ,ಮನೆಗಳನ್ನು ತೆರವುಗೊಳಿಸಲು ಸೂಚನೆ ನೀಡಿರುವುದು ಹಲವರ ಆತಂಕಕ್ಕೆ ಕಾರಣವಾಗಿದೆ.